ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜ.೨೫ ರಂದು ನಡೆದಿದ್ದ ಮಂಡ್ಯ ತಾಲೂಕು ಪಿಎಲ್‌ಡಿ ಬ್ಯಾಂಕ್ ನೂತನ ಆಡಳಿತ ಮಂಡಳಿಯ ಚುನಾವಣೆಯ ಫಲಿತಾಂಶ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಶುಕ್ರವಾರ ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದಿದೆ.ಚುನಾವಣೆಗೆ ಸ್ಪರ್ಧಿಸಿದ್ದ ಎಚ್.ಸಿ.ಶಿವಲಿಂಗೇಗೌಡ, ಉಮ್ಮಡಹಳ್ಳಿ ಶಿವಪ್ಪ, ಬಿ.ಎಲ್.ಬೋರೇಗೌಡ, ಯೋಗೇಶ್, ಎಂ,ನಿಂಗಮ್ಮ, ದಿವ್ಯಶ್ರೀ, ಮಮತಾ ಅವಿರೋಧವಾಗಿ ಆಯ್ಕೆಯಾಗಿದ್ದರು.
ಚುನಾವಣೆ ನಡೆದಿದ್ದ ೭ ಸ್ಥಾನಗಳ ಮತ ಎಣಿಕೆ ಹೈಕೋರ್ಟ್ ನಿರ್ದೇಶನದಂತೆ ಶುಕ್ರವಾರ ನಡೆದಿದ್ದು, ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಜಯ ಸಾಧಿಸಿದರೆ, ಐದು ಸ್ಥಾನಗಳಲ್ಲಿ ಎನ್‌ಡಿಎ ಒಕ್ಕೂಟ ಬೆಂಬಲಿಗರು ಜಯಗಳಿಸಿದ್ದಾರೆ.ಎರಡನೇ ಕ್ಷೇತ್ರ ಕೊತ್ತತ್ತಿ ಸಾಲಗಾರರ ಸಾಮಾನ್ಯ ಮತ ಕ್ಷೇತ್ರದಿಂದ ಉರಮಾರ ಕಸಲಗೆರೆ ಮರೀಗೌಡ, ಮೂರನೇ ಕ್ಷೇತ್ರ ತಗ್ಗಹಳ್ಳಿ ಸಾಲಗಾರರ ಸಾಮಾನ್ಯ ಮತ ಕ್ಷೇತ್ರದಿಂದ ಟಿ.ಬಿ.ಶಿವಲಿಂಗೇಗೌಡ, ಆರನೇ ಕ್ಷೇತ್ರ ಹಲ್ಲೇಗೆರೆ ಸಾಲಗಾರರ ಸಾಮಾನ್ಯ ಮತ ಕ್ಷೇತ್ರದಿಂದ ಸಿ.ಎ.ಅರವಿಂದ್, ಏಳನೇ ಕ್ಷೇತ್ರ ಶಿವಳ್ಳಿ ಸಾಲಗಾರರ ಸಾಮಾನ್ಯ ಮತ ಕ್ಷೇತ್ರದಿಂದ ಶ್ರೇಯಸ್ ವೈ.ಗೌಡ, ಎಂಟನೇ ಕ್ಷೇತ್ರ ತಾಲೂಕಿನಾದ್ಯಂತ ಸಾಲ ಪಡೆಯದವರ ಸಾಮಾನ್ಯ ಮತ ಕ್ಷೇತ್ರದಿಂದ ಬೇಲೂರು ಸೋಮಶೇಖರ್, ಹನ್ನೊಂದನೇ ಕ್ಷೇತ್ರ ಮುತ್ತೇಗೆರೆ ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ಮತ ಕ್ಷೇತ್ರದಿಂದ ಜವರಯ್ಯ, ಹದಿನಾಲ್ಕನೇ ಕ್ಷೇತ್ರ ಕೆರಗೋಡು ಸಾಲಗಾರರ ಮಹಿಳಾ ಮೀಸಲು ಮತ ಕ್ಷೇತ್ರದಿಂದ ಎಸ್.ಶಿಲ್ಪ ರಘುನಂದನ್ ಚುನಾಯಿತರಾಗಿದ್ದಾರೆಂದು ಚುನಾವಣಾ ಅಧಿಕಾರಿ ಎಂ.ಎಸ್.ವೀಣಾ ತಿಳಿಸಿದರು.
ಮಂಡ್ಯ ಪಿಎಲ್‌ಡಿ ಬ್ಯಾಂಕ್‌ನ ಏಳು ನಿರ್ದೇಶಕ ಸ್ಥಾನಗಳಿಗೆ ಜ.೨೫ರಂದು ಚುನಾವಣೆ ನಡೆದಿತ್ತು. ಆದರೆ, ಅರ್ಹ ಮತ್ತು ಅನರ್ಹ ಮತದಾರರೆಂಬ ಗೊಂದಲದಿಂದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ನ್ಯಾಯಾಲಯ ತಡೆ ನೀಡಿತ್ತು. ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ಎರಡೂ ವರ್ಗಗಳ ಮತಗಳನ್ನು ಪರಿಗಣಿಸುವಂತೆ ಸೂಚನೆ ನೀಡಿದ ಮೇರೆಗೆ ಶುಕ್ರವಾರ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಯಿತು.ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಚುನಾಯಿತ ನಿರ್ದೇಶಕರು ಹಾಗೂ ಅವರ ಬೆಂಬಲಿಗರು ಸಂಭ್ರಮ ಆಚರಿಸಿದರು.