ಮಂಡ್ಯ ಕಬ್ಬಿಗೆ ಹೆಚ್ಚು ಬೆಲೆ ಕೊಡಲಾಗದು: ರಾಜ್ಯ ಸರ್ಕಾರ

| Published : Dec 18 2024, 12:47 AM IST

ಮಂಡ್ಯ ಕಬ್ಬಿಗೆ ಹೆಚ್ಚು ಬೆಲೆ ಕೊಡಲಾಗದು: ರಾಜ್ಯ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ದೇಶದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರದ ನಂತರ ಕರ್ನಾಟಕ ರಾಜ್ಯವಿದೆ. ಉತ್ತರ ಪ್ರದೇಶದಲ್ಲಿ ಸಾರಿಗೆ ವೆಚ್ಚ ಕಡಿಮೆ ಇರುವುದರಿಂದ ಅಲ್ಲಿ ಕಬ್ಬಿಗೆ ಹೆಚ್ಚಿನ ದರ ನೀಡಲಾಗುತ್ತದೆ. ಆದರೆ ದಕ್ಷಿಣ ರಾಜ್ಯಗಳಿಗೆ ಸಾರಿಗೆ ವೆಚ್ಚ ಹೆಚ್ಚು ಬರುವುದರಿಂದ ಕಬ್ಬಿಗೆ ಹೆಚ್ಚಿನ ದರ ನೀಡಲು ಆಗುವುದಿಲ್ಲ.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನ ಪರಿಷತ್‌

ಮಂಡ್ಯದಲ್ಲಿ ಬೆಳೆಯುತ್ತಿರುವ ಕಬ್ಬಿನಲ್ಲಿ ಶೇ.7-8 ರಷ್ಟು ಮಾತ್ರ ಸಕ್ಕರೆ ಇಳುವರಿ ಇರುವುದರಿಂದ ಕಬ್ಬಿಗೆ ಹೆಚ್ಚಿನ ಬೆಲೆ ನೀಡಲು ಆಗುವುದಿಲ್ಲ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ತಿಳಿಸಿದ್ದಾರೆ.

ಕೆ.ವಿವೇಕಾನಂದ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿ ಕ್ವಿಂಟಾಲ್‌ ಕಬ್ಬಿಗೆ ಬರುವ ಸಕ್ಕರೆ ಇಳುವರಿ ಆಧರಿಸಿ ದರ ನಿಗದಿಪಡಿಸಲು ಮಾರ್ಗಸೂಚಿ ನೀಡಲಾಗಿದೆ. ಬೇರೆ ಜಿಲ್ಲೆಯಲ್ಲಿ ಶೇ. 9ರಿಂದ 12ರಷ್ಟು ಇಳುವರಿ ಸಿಗುತ್ತದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಶೇ. 7-8ರಷ್ಟು ಸಿಗುತ್ತದೆ. ಹೀಗಾಗಿ ಹೆಚ್ಚಿನ ದರ ನೀಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

3 ಕಾರ್ಖಾನೆಯಿಂದ 3.94 ಕೋಟಿ ರು. ಬಾಕಿ:

ರಾಜ್ಯದಲ್ಲಿ 2018-19ನೇ ಸಾಲಿಗೆ ಸಂಬಂಧಿಸಿದಂತೆ ಮೂರು ಸಕ್ಕರೆ ಕಾರ್ಖಾನೆಗಳಿಂದ ಮಾತ್ರ 3.94 ಕೋಟಿ ರು. ಕಬ್ಬಿನ ಬಿಲ್‌ ಪಾವತಿಸುವುದು ಬಾಕಿ ಇದೆ ಎಂದು ಸಚಿವ ಶಿವಾನಂದ ಎಸ್‌. ಪಾಟೀಲ್‌ ತಿಳಿಸಿದರು.

ಬಿಜೆಪಿಯ ಎನ್‌. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆ 0.89 ಕೋಟಿ ರು., ಭವಾನಿ ಶುಗರ್ಸ್‌ ಲಿ. 1.80 ಕೋಟಿ ರು. ಹಾಗೂ ವಿಜಯಪುರ ಜಿಲ್ಲೆಯ ಧ್ಯಾನಯೋಗಿ ಶ್ರೀ ಶಿವಕುಮಾರಸ್ವಾಮೀಜಿ ಶುಗರ್ಸ್‌ 1.25 ಕೋಟಿ ರು.ಗಳನ್ನು ರೈತರಿಗೆ ಬಾಕಿ ಕೊಡುವುದು ಇದೆ. ಈ ಕಾರ್ಖಾನೆಗಳು ಸ್ಥಗಿಗೊಂಡ ಕಾರಣ ಬಾಕಿ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇಡೀ ದೇಶದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರದ ನಂತರ ಕರ್ನಾಟಕ ರಾಜ್ಯವಿದೆ. ಉತ್ತರ ಪ್ರದೇಶದಲ್ಲಿ ಸಾರಿಗೆ ವೆಚ್ಚ ಕಡಿಮೆ ಇರುವುದರಿಂದ ಅಲ್ಲಿ ಕಬ್ಬಿಗೆ ಹೆಚ್ಚಿನ ದರ ನೀಡಲಾಗುತ್ತದೆ. ಆದರೆ ದಕ್ಷಿಣ ರಾಜ್ಯಗಳಿಗೆ ಸಾರಿಗೆ ವೆಚ್ಚ ಹೆಚ್ಚು ಬರುವುದರಿಂದ ಕಬ್ಬಿಗೆ ಹೆಚ್ಚಿನ ದರ ನೀಡಲು ಆಗುವುದಿಲ್ಲ ಎಂದು ಉತ್ತರಿಸಿದರು.

ಕಬ್ಬಿನಲ್ಲಿ ಸಿಹಿಯ ಅಂಶ ಆಧರಿಸಿ ಬೆಲೆ ಹೆಚ್ಚು ಸಿಗಲಿದೆ. ಕಬ್ಬಿನಲ್ಲಿ ಶೇ. 12ರಷ್ಟು ಸಿಹಿ ಅಂಶವಿದ್ದ ಕಾರಣ ಬೆಳಗಾವಿಯ ಸೋಮೇಶ್ವರ ಸಹಕಾರಿ ಸಂಘದ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ಟನ್‌ಗೆ 3998 ರು. ನೀಡುತ್ತಿದೆ. ಆದರೆ ಮಂಡ್ಯದಲ್ಲಿ ಶೇಕಡಾ ಏಳೆಂಟು ಅಂಶವಿರುವ ಕಾರಣ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದರು