ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯುತ್ತ) ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, 2025-26 ನೇ ಸಾಲಿನ ವಿವಿಧ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನು ದಾಖಲೆ ಸಮಯದಲ್ಲಿ ಮುಗಿಸಿ ಕೊನೆಯ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯುತ್ತ) ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, 2025-26 ನೇ ಸಾಲಿನ ವಿವಿಧ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನು ದಾಖಲೆ ಸಮಯದಲ್ಲಿ ಮುಗಿಸಿ ಕೊನೆಯ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ. ಸರ್ಕಾರಿ ಸಂಸ್ಥೆಯೊಂದು ಇಷ್ಟೊಂದು ವೇಗವಾಗಿ ಫಲಿತಾಂಶ ನೀಡಿರುವುದು ಕಾಲೇಜಿನ ಪರಿಶ್ರಮದ ಹೆಗ್ಗುರುತಾಗಿದೆ.ಕಾಲೇಜಿನ ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಸಿಎ, ಬಿಎಫ್ಎಸ್ಐ, ಇ-ಕಾಮರ್ಸ್ ಪದವಿ ಪರೀಕ್ಷೆಗಳು ಜ.2ರಿಂದ ಜ.31 ರವರೆಗೆ ನಡೆದಿದ್ದವು. ಪರೀಕ್ಷೆಗಳು ಜ.31ರಂದು ಮುಕ್ತಾಯಗೊಂಡಿದ್ದು ಅದೇ ದಿನ ಸಂಜೆ 4ಕ್ಕೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ವಿಶೇಷವೆಂದರೆ ಮೌಲ್ಯಮಾಪನ ಮುಗಿದ ಕೇವಲ ಒಂದು ಗಂಟೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಗುರುರಾಜ ಪ್ರಭು ಅವರು ಫಲಿತಾಂಶ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಶಿಸ್ತುಬದ್ಧ ಕೆಲಸ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದಾಗಿ ಈ ಅಸಾಧಾರಣ ಸಾಧನೆ ಸಾಧ್ಯವಾಗಿದೆ. ಈ ಕಾರ್ಯವನ್ನು ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ರವಿಕಾಂತ್ ಲಂಬಾಣಿ ಮತ್ತು ತಂಡ ಪರೀಕ್ಷೆ ಆರಂಭದಿಂದ ಮುಕ್ತಾಯದವರೆಗೂ ಸತತ ಪರಿಶ್ರಮ, ತಾಳ್ಮೆ, ಜಾಣ್ಮೆ, ಅತ್ಯಂತ ಶಿಸ್ತಿನಿಂದ ಶ್ರಮಿಸಿದ ಫಲವಾಗಿ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸಲು ಸಹಕಾರಿಯಾಯಿತೆಂದು ಹೇಳಿದರು.ಈ ರೀತಿಯ ಫಲಿತಾಂಶ ಪ್ರಕಟಣೆ ವಿದ್ಯಾರ್ಥಿಗಳು, ಕಾಲೇಜಿನ ಸರ್ವೋತೋಮುಖ ಅಭಿವೃದ್ಧಿಗೆ ಮುನ್ನುಡಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸುತ್ತೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸುಗಮ ಓದಿಗೆ ಈ ಫಲಿತಾಂಶ ಸಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆಂದು ಸಂತಸ ವ್ಯಕ್ತಪಡಿಸಿದರು.
ಮೌಲ್ಯಮಾಪನ ಸಂಯೋಜಕ ಎಂ.ಮಾದೇಗೌಡ, ಪರೀಕ್ಷಾ ಸಮಿತಿಯ ಸಂಚಾಲಕರಾದ ಡಾ.ವಿ.ಶಿವಕೀರ್ತಿ, ಸಹ ಸಂಚಾಲಕ ಡಾ.ಎಸ್.ಶಿವರಾಮು. ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್ ಮತ್ತು ಎಸ್.ಪಿ.ಹೇಮಲತಾ ಹಾಜರಿದ್ದರು.