ಮೈಸೂರು ವಿವಿ ಜೊತೆಗೆ ಮಂಡ್ಯ ವಿವಿ ವಿಲೀನ ಬೇಡ: ಎಚ್.ಸಿ.ಮಂಜುನಾಥ ಒತ್ತಾಯ

| Published : Feb 28 2025, 12:51 AM IST

ಮೈಸೂರು ವಿವಿ ಜೊತೆಗೆ ಮಂಡ್ಯ ವಿವಿ ವಿಲೀನ ಬೇಡ: ಎಚ್.ಸಿ.ಮಂಜುನಾಥ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ವಿಶ್ವವಿದ್ಯಾಲಯವನ್ನು ವಿಲೀನಗೊಳಿಸದೇ ಪ್ರತ್ಯೇಕವಾಗಿಯೇ ಮುಂದುವರಿಸುವ ಸಲುವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಶಿಕ್ಷಣ ತಜ್ಞರ ಸಭೆ ಕರೆದು ಜಿಲ್ಲೆಯ ಅಸ್ಮಿತೆಯನ್ನು ಉಳಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯವನ್ನು ವಿಲೀನಗೊಳಿಸದೇ ಪ್ರತ್ಯೇಕವಾಗಿಯೇ ಮುಂದುವರಿಸುವ ಸಲುವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಶಿಕ್ಷಣ ತಜ್ಞರ ಸಭೆ ಕರೆದು ಜಿಲ್ಲೆಯ ಅಸ್ಮಿತೆಯನ್ನು ಉಳಿಸಬೇಕು ಎಂದು ಕನ್ನಡಸೇನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಒತ್ತಾಯಿಸಿದರು.

ಕಳೆದ ಆರು ವರ್ಷಗಳಿಂದ ಮಂಡ್ಯದ ವಿಶ್ವ ವಿದ್ಯಾಲಯವು ಪ್ರಗತಿಯತ್ತ ಸಾಗುತ್ತಿದ್ದು, ಅದನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಅದನ್ನು ಕೈಬಿಡುವಂತೆ ಜಿಲ್ಲೆ ಸಚಿವರು, ಶಾಸಕರು, ಹೋರಾಟಗಾರರು ಒತ್ತಡ ಹೇರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರಾಜ್ಯದಲ್ಲಿ ಹಲವು ಯೋಜನೆಗಳಿಗೆ ಸರ್ಕಾರದ ಅನುದಾನ ಬಳಕೆಯಾಗುತ್ತಿದ್ದು, ರಾಜ್ಯದ ೯ ವಿಶ್ವವಿದ್ಯಾಲಯಗಳನ್ನು ಅನುದಾನ ಕೊರತೆ ಸೇರಿ ಹಲವು ಬೇರೆ ಕಾರಣದೊಂದಿಗೆ ಮುಚ್ಚಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಸಚಿವರು, ಶಾಸಕರ ಜೊತೆ ಚರ್ಚೆ ಮಾಡಿದ್ದು, ಮಂಡ್ಯ ವಿವಿಯನ್ನು ಉಳಿಸಿಕೊಳ್ಳು ನಿಟ್ಟಿನಲ್ಲಿ ಮುಂದಾಗುವಂತೆ ಆಗ್ರಹಿಸಿದರು.

ಮಂಡ್ಯ ಹಾಗೂ ಮಹಾರಾಣಿ ವಿಶ್ವವಿದ್ಯಾಲಯಗಳ ಸಂಬಂಧ ಸಲಹಾ ಸಮಿತಿಯು ಎರಡು ವರದಿಗಳನ್ನು ಸರ್ಕಾರಕ್ಕೆ ನೀಡಿದ್ದು, ಹಳ್ಳಿಗಾಡಿನ ಹೊಸ ವಿದ್ಯಾರ್ಥಿಗಳ ರೂಪು ರೇಷೆಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದ್ದು, ಇದನ್ನು ಪರಿಗಣಿಸಿ ಸರ್ಕಾರ ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನ ಮಾಡುವ ನಿರ್ಣಯ ಕೈಬಿಡಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಮಹಂತಪ್ಪ, ರಾಜ್ಯ ಸಂಚಾಲಕಿ ದೇವಮ್ಮ, ಕಮ್ಮನಾಯಕನಹಳ್ಳಿ ಮಂಜು, ಸತೀಶ.ಎಂ, ಶಿವಾನಿ ಇದ್ದರು.

ಇಂದು ಮಹಿಳಾ ಕ್ರೀಡಾಕೂಟ

ಮಂಡ್ಯ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಫೆ.28 ರಂದು ನಗರದ ಸರ್.ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಎಲ್ಲಾ ಮಹಿಳಾ ಸಂಘ- ಸಂಸ್ಥೆಗಳ ವತಿಯಿಂದ ಆಶ್ರಯದಲ್ಲಿ ನಡೆಯುವ ಕ್ರೀಡಾ ಸ್ಪರ್ಧೆಯಲ್ಲಿ ಹಗ್ಗ ಜಗ್ಗಾಟ, ತ್ರೋಬಾಲ್, ಮ್ಯೂಸಿಕಲ್ ಚೇರ್, ಸ್ಕೋ ಸ್ಕೂಟರ್ ರೇಸ್, ಬಿಂದಿಗೆ ಹಿಡಿದು ಓಟ ಮತ್ತು ಲೆಮನ್ ಅಂಡ್ ಸ್ಪೂನ್ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಆಸಕ್ತ 19 ರಿಂದ 45 ವರ್ಷದೊಳಗಿನ ಮಹಿಳೆಯರು ಭಾಗವಹಿಸಬಹುದು, 46 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.