ಮಂಡ್ಯ ವಿವಿ ವಿಲೀನವೂ ಇಲ್ಲ ಮುಚ್ಚುವುದೂ ಇಲ್ಲ: ಪಿ.ರವಿಕುಮಾರ್‌

| Published : Mar 15 2025, 01:05 AM IST

ಸಾರಾಂಶ

ಹಣಕಾಸಿನ ಸಮಸ್ಯೆಯಿಂದ ಮಂಡ್ಯ ವಿವಿಯನ್ನು ಮುಚ್ಚುವ ಮತ್ತು ವಿಲೀನಗೊಳಿಸುವ ಕುರಿತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ವಿಷಯವಾಗಿ ಪರ ವಿರೋಧ ಚರ್ಚೆಗಳು ಆರಂಭಗೊಂಡಿದ್ದವು.

ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯವನ್ನು ವಿಲೀನಗೊಳಿಸುವುದೂ ಇಲ್ಲ, ಮುಚ್ಚುವುದೂ ಇಲ್ಲ ಎಂದು ಶಾಸಕ ಪಿ.ರವಿಕುಮಾರ್‌ ಹೇಳಿದ್ದಾರೆ. ಶನಿವಾರ (ಮಾ.15) ಬೆಳಗ್ಗೆ 10.30ಕ್ಕೆ ಮೂರು ಕೋಟಿ ರು. ವೆಚ್ಚದಲ್ಲಿ ಮಂಡ್ಯ ವಿಶ್ವವಿದ್ಯಾನಿಲಯದ ಹೆಬ್ಬಾಗಿಲು ಮತ್ತು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು. ವಿದ್ಯಾರ್ಥಿಗಳು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಮಂಡ್ಯ ವಿಶ್ವವಿದ್ಯಾನಿಲಯವಾಗಿಯೇ ಉಳಿಯಲಿದೆ ಎಂದು ತಿಳಿಸಿದ್ದಾರೆ.

ಹಣಕಾಸಿನ ಸಮಸ್ಯೆಯಿಂದ ಮಂಡ್ಯ ವಿವಿಯನ್ನು ಮುಚ್ಚುವ ಮತ್ತು ವಿಲೀನಗೊಳಿಸುವ ಕುರಿತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ವಿಷಯವಾಗಿ ಪರ ವಿರೋಧ ಚರ್ಚೆಗಳು ಆರಂಭಗೊಂಡಿದ್ದವು. ಈ ವಿದ್ಯಮಾನಗಳನ್ನು ಅವಲೋಕಿಸಿದ ಶಾಸಕ ಪಿ.ರವಿಕುಮಾರ್‌ ಅವರು ಮಂಡ್ಯ ವಿಶ್ವವಿದ್ಯಾಲಯವನ್ನು ಮುಚ್ಚದಂತೆ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್‌ ಅವರಿಗೆ ಮನವಿ ಮಾಡಿದ್ದರು. ಶಾಸಕ ಪಿ.ರವಿಕುಮಾರ್‌ ಅವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯಾವುದೇ ವಿವಿಗಳನ್ನು ಮುಚ್ಚುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಮಂಡ್ಯ ವಿಶ್ವವಿದ್ಯಾನಿಲಯ ಮುಚ್ಚುವ, ವಿಲೀನಗೊಳಿಸುವ ವಿವಾದಕ್ಕೆ ತೆರೆ ಬಿದ್ದಂತಾಗಿದೆ.