೧೬ ಸ್ಟ್ರಾಂಗ್ ರೂಂಗಳಲ್ಲಿ ಮಂಡ್ಯ ಮತಯಂತ್ರಗಳು ಭದ್ರ

| Published : Apr 29 2024, 01:35 AM IST

ಸಾರಾಂಶ

ಮತದಾನ ಮುಗಿಯುತ್ತಿದ್ದಂತೆ ಆಯಾಯ ವಿಧಾನಸಭಾ ಕ್ಷೇತ್ರಗಳಲ್ಲಿ ಡಿ-ಮಸ್ಟರಿಂಗ್ ಕಾರ್ಯ ನಡೆಸಿ, ಮತದಾನಕ್ಕೆ ಬಳಸಿದ ಎಲ್ಲ ವಿದ್ಯುನ್ಮಾನ ಮತಯಂತ್ರ, ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿವಿಪ್ಯಾಟ್ ಹಾಗೂ ಎಲ್ಲ ಶಾಸನಬದ್ಧ ದಾಖಲೆಗಳನ್ನು ಜಿಪಿಎಸ್ ಅಳವಡಿಸಿದ ವಾಹನದ ಮೂಲಕ ಸೂಕ್ತ ಪೊಲೀಸ್ ಭದ್ರತೆಯೊಡನೆ ಮಂಡ್ಯ ಸರ್ಕಾರಿ ಮಹಾವಿದ್ಯಾಲಯದ ಕಾಲೇಜಿಗೆ ತಂದು ಇಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಎಂಟು ಕ್ಷೇತ್ರಗಳಿಗೆ ಸಂಬಂಧಿಸಿದ ಎಲ್ಲ ವಿದ್ಯುನ್ಮಾನ ಮತ ಯಂತ್ರಗಳನ್ನೂ ಮಂಡ್ಯ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಮಹಾವಿದ್ಯಾಲಯದ ಭದ್ರತಾ ಕೊಠಡಿಯಲ್ಲಿ ಇಟ್ಟು ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಮತದಾನ ಮುಗಿಯುತ್ತಿದ್ದಂತೆ ಆಯಾಯ ವಿಧಾನಸಭಾ ಕ್ಷೇತ್ರಗಳಲ್ಲಿ ಡಿ-ಮಸ್ಟರಿಂಗ್ ಕಾರ್ಯ ನಡೆಸಿ, ಮತದಾನಕ್ಕೆ ಬಳಸಿದ ಎಲ್ಲ ವಿದ್ಯುನ್ಮಾನ ಮತಯಂತ್ರ, ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿವಿಪ್ಯಾಟ್ ಹಾಗೂ ಎಲ್ಲ ಶಾಸನಬದ್ಧ ದಾಖಲೆಗಳನ್ನು ಜಿಪಿಎಸ್ ಅಳವಡಿಸಿದ ವಾಹನದ ಮೂಲಕ ಸೂಕ್ತ ಪೊಲೀಸ್ ಭದ್ರತೆಯೊಡನೆ ಮಂಡ್ಯ ಸರ್ಕಾರಿ ಮಹಾವಿದ್ಯಾಲಯದ ಕಾಲೇಜಿಗೆ ತಂದು ಇಡಲಾಗಿದೆ.

ಮತದಾನದ ಅವಧಿ ಸಂಜೆ ೬ ಗಂಟೆಗೆ ಮುಗಿದರೂ ಅಷ್ಟರೊಳಗೆ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ಮತದಾನ ಮಾಡಲು ಶುಕ್ರವಾರ ರಾತ್ರಿ ೭.೩೦ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಅಂತಹ ಮತಗಟ್ಟೆಗಳು ಹಾಗೂ ದೂರದ ಪ್ರದೇಶಗಳಿಂದ ಮತಯಂತ್ರಗಳು ನಗರಕ್ಕೆ ಬರುವುದು ತಡವಾಗಿತ್ತು. ರಾತ್ರಿಯಿಡೀ ಮತಯಂತ್ರಗಳ ವಾಹನಗಳು ಪೊಲೀಸ್ ಭದ್ರತೆಯಲ್ಲಿ ಬರುತ್ತಲೇ ಇದ್ದವು.

ಶನಿವಾರ ಬೆಳಿಗ್ಗೆ ೮ ಗಂಟೆಗೂ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಿಂದ ಮತಯಂತ್ರ ಬಂದಿದೆ. ಹೀಗಾಗಿ ರಾತ್ರಿಯಿಡೀ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎನ್.ಯತೀಶ್ ಹಾಗೂ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಎಚ್ಚರವಿದ್ದು, ಕರ್ತವ್ಯ ನಿರ್ವಹಿಸುವ ಮೂಲಕ ವಿದ್ಯುನ್ಮಾನ ಮತಯಂತ್ರಗಳು ಭದ್ರತಾ ಕೊಠಡಿ ಸೇರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

೧೮ ಸ್ಟಾಂಗ್‌ರೂಂಗಳು:

ನಗರದ ಮಂಡ್ಯ ವಿವಿಯ ಕಾಮರ್ಸ್ ಬ್ಲಾಕ್‌ನ ೧೮ ಕೊಠಡಿಗಳಲ್ಲಿ ಸ್ಥಾಪಿಸಿರುವ ಸ್ಟಾಂಗ್‌ರೂಂಗಳಲ್ಲಿ ಎಲ್ಲ ವಿದ್ಯುನ್ಮಾನ ಮತಯಂತ್ರಗಳನ್ನು ಇಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨ರಂತೆ ಸ್ಟಾಂಗ್‌ರೂಂಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಅಂಚೆ ಮತಗಳು ಹಾಗೂ ಶಾಸನಬದ್ಧ ದಾಖಲೆಗಳಿಗಾಗಿ ತಲಾ ಒಂದೊಂದು ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗಿದೆ.

ವಿಧಾನಸಭಾ ಕ್ಷೇತ್ರವಾರು ಸ್ಥಾಪಿಸಿರುವ ೧೬ ಭದ್ರತಾ ಕೊಠಡಿಯಲ್ಲಿ ಪ್ರತ್ಯೇಕವಾಗಿ ಎರಡು ಲಾಕ್ ಸಿಸ್ಟಂನಲ್ಲಿ ಸೀಲ್ ಮಾಡಿ, ಸುರಕ್ಷಿತವಾಗಿ ಇಡಲಾಗಿದೆ. ಸಿಆರ್‌ಪಿಎಫ್ ಮತ್ತು ಜಿಲ್ಲಾ ಪೊಲೀಸ್ ಸೇರಿದಂತೆ ರಕ್ಷಣಾ ಸಿಬ್ಬಂದಿ ವರ್ಗದವರಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಎಲ್ಲ ಭದ್ರತಾ ಕೊಠಡಿಗಳ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಭದ್ರತಾ ಕೊಠಡಿ ಸುರಕ್ಷತಾ ವ್ಯವಸ್ಥೆಯನ್ನು ವೀಕ್ಷಿಸಲು ಮತ ಎಣಿಕೆ ದಿನವಾದ ಜೂ.೪ರವರೆಗೆ ದಿನದ ೨೪ ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲು ಮೂರು ಪಾಳಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಯಂತ್ರಗಳನ್ನು ಸಂಗ್ರಹ ಮಾಡಿಟ್ಟಿರುವ ಸರ್ಕಾರಿ ಮಹಾವಿದ್ಯಾಲಯಕ್ಕೆ ೨೪ ಗಂಟೆಗಳ ಭದ್ರತೆ ಒದಗಿಸಲಾಗಿದೆ.

ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳನ್ನು ಮೂರು ಪಾಳಿಯಲ್ಲಿ ಭದ್ರತೆ ಮೇಲ್ವಿಚಾರಣೆಗೆ ನಿಯೋಜನೆ ಮಾಡಲಾಗಿದೆ. ಕಾಲೇಜಿನ ಆವರಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂ.೪ರಂದು ಬೆಳಗ್ಗೆ ೮ ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭಿಸಲಾಗುತ್ತದೆ. ಅಲ್ಲಿಯವರೆಗೂ ಭದ್ರತೆಯನ್ನು ಮುಂದುವರೆಸಲಾಗುತ್ತದೆ.

ಸ್ಟ್ರಾಂಗ್ ರೂಂನಲ್ಲಿ ಮತ ಯಂತ್ರ ಭದ್ರ

ಶಾಂತಿಯುತವಾಗಿ ಮತದಾನ ಮುಗಿದಿದ್ದು, ಎಲ್ಲ ೨೦೭೬ ಮತಗಟ್ಟೆಗಳಿಂದಲೂ ವಿದ್ಯುನ್ಮಾನ ಮತಯಂತ್ರಗಳು ಮತ್ತು ಶಾಸನಬದ್ಧ ದಾಖಲೆಗಳನ್ನು ಜಿಲ್ಲಾ ಕೇಂದ್ರದಲ್ಲಿನ ಸ್ಟ್ರಾಂಗ್ ರೂಂಗಳಲ್ಲಿ ಇಟ್ಟು ಸೀಲ್ ಮಾಡಲಾಗಿದೆ. ಸಿಆರ್‌ಪಿಎಫ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸುರಕ್ಷತೆಯಲ್ಲಿ ಸ್ಟ್ರಾಂಗ್ ರೂಂಗಳ ಬಳಿ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ

ಪೊಲೀಸ್ ಸುಪರ್ದಿಗೆ ಸ್ಟ್ರಾಂಗ್ ರೂಂ

ಸೀಲ್ ಮಾಡಿದ ಸ್ಟ್ರಾಂಗ್ ರೂಂಗಳನ್ನು ಪೊಲೀಸ್ ಇಲಾಖೆ ಸುಪರ್ದಿಗೆ ಪಡೆಯಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ಟ್ರಾಂಗ್‌ರೂಂಗಳಿಗೆ ಭದ್ರತೆ ಒದಗಿಸಿ, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨ರಂತೆ ಸ್ಟ್ರಾಂಗ್ ರೂಂಗಳನ್ನು ಮಾಡಲಾಗಿದೆ. ಇದರೊಂದಿಗೆ ಅಂಚೆಮತಗಳು, ಶಾಸನಬದ್ಧ ದಾಖಲೆಗಳಿಗಾಗಿ ಒಂದೊಂದು ಹೆಚ್ಚುವರಿ ಸ್ಟಾಂಗ್‌ರೂಂಗಳನ್ನು ಸ್ಥಾಪಿಸಲಾಗಿದೆ.

- ಎನ್.ಯತೀಶ್, ಎಸ್ಪಿ, ಮಂಡ್ಯ