ಮಂಡ್ಯ ಯೂತ್ ಗ್ರೂಪ್‌ನಿಂದ ಸಾವಿರ ಅಡಿ ಬೃಹತ್ ತಿರಂಗ ಪ್ರದರ್ಶನ

| Published : Aug 16 2025, 12:00 AM IST

ಸಾರಾಂಶ

ಡಿಜೆಯಲ್ಲಿ ಮೊಳಗುತ್ತಿದ್ದ ದೇಶಭಕ್ತಿ ಗೀತೆಗಳೊಂದಿಗೆ ಬೃಹತ್ ತಿರಂಗ ವಿವಿಧ ರಸ್ತೆಗಳಲ್ಲಿ ಸಾಗುತ್ತಿದ್ದ ವೇಳೆ ಸಾವಿರಾರು ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ತಿರಂಗ ವೀಕ್ಷಿಸಿದರು. ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಯಾಶಿಕಾ ಅನಿಲ್ ಭಾರತ ಮಾತೆಯ ರೂಪದಲ್ಲಿ ಧ್ವಜ ಹಿಡಿದು ತಿರಂಗ ಯಾತ್ರೆಯನ್ನು ಮುನ್ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿ ಮೊಟ್ಟಮೊದಲ ಬಾರಿಗೆ ೭೯ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಒಂದು ಸಾವಿರ ಅಡಿ ಉದ್ದದ ಬೃಹತ್ ತಿರಂಗ ಪ್ರದರ್ಶಿಸುವುದರೊಂದಿಗೆ ಮಂಡ್ಯ ಯೂತ್ ಗ್ರೂಪ್ ಹೊಸ ದಾಖಲೆ ಸೃಷ್ಟಿಸಿದೆ.

ಇಲ್ಲಿನ ಆಸ್ಪತ್ರೆ ರಸ್ತೆಯಲ್ಲಿರುವ ನಿರಾಳ ಕ್ಲಿನಿಕ್ ಎದುರು ಗ್ರೂಪ್‌ನ ಅಧ್ಯಕ್ಷ ಡಾ.ಅನಿಲ್ ಆನಂದ್ ಧ್ವಜಾರೋಹಣ ನೆರವೇರಿಸಿದರು. ಯೂತ್ ಗ್ರೂಪ್‌ನ ಪದಾಧಿಕಾರಿಗಳು ಹಾಗೂ ಬಿಎಲ್‌ಎಸ್ ನರ್ಸಿಂಗ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತ್ರಿವರ್ಣಗಳಿಂದ ಕೂಡಿದ ಪೇಪರ್ ಬಾಂಬ್‌ಗಳನ್ನು ಸಿಡಿಸುವುದರೊಂದಿಗೆ ತಿರಂಗ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ನಿರಾಳ ಕ್ಲಿನಿಕ್‌ನಿಂದ ಆರಂಭವಾದ ತಿರಂಗ ಪ್ರದರ್ಶನ ಆಸ್ಪತ್ರೆ ರಸ್ತೆ ಮೂಲಕ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಾಗಿ ವಿ.ವಿ.ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಬನ್ನೂರು ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ತಿರುವನ್ನು ಪಡೆದುಕೊಂಡು ಮತ್ತೆ ವಾಪಸ್ ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ಡಾ.ಬೆಸಗರಹಳ್ಳಿ ರಾಮಣ್ಣ ಸರ್ಕಲ್ ಮೂಲಕ ನಿರಾಳ ಕ್ಲಿನಿಕ್ ಬಳಿ ಅಂತ್ಯಗೊಂಡಿತು.

ಡಿಜೆಯಲ್ಲಿ ಮೊಳಗುತ್ತಿದ್ದ ದೇಶಭಕ್ತಿ ಗೀತೆಗಳೊಂದಿಗೆ ಬೃಹತ್ ತಿರಂಗ ವಿವಿಧ ರಸ್ತೆಗಳಲ್ಲಿ ಸಾಗುತ್ತಿದ್ದ ವೇಳೆ ಸಾವಿರಾರು ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ತಿರಂಗ ವೀಕ್ಷಿಸಿದರು. ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಯಾಶಿಕಾ ಅನಿಲ್ ಭಾರತ ಮಾತೆಯ ರೂಪದಲ್ಲಿ ಧ್ವಜ ಹಿಡಿದು ತಿರಂಗ ಯಾತ್ರೆಯನ್ನು ಮುನ್ನಡೆಸಿದರು. ಯೂತ್ ಗ್ರೂಪ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ತಲೆಗೆ ಕೇಸರಿ ಮತ್ತು ಹಸಿರು ಬಣ್ಣದ ಟೇಪುಗಳನ್ನು ಕಟ್ಟಿಕೊಂಡು ಸಾಗಿದ್ದು ವಿಶೇಷವಾಗಿತ್ತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಾ.ಯಾಶಿಕಾ ಅನಿಲ್, ಯುವಕರಲ್ಲಿ ಸೇವಾ ಮನೋಭಾವ ಬೆಳವಣಿಗೆ ಕಾಣಬೇಕು. ಸ್ವಾತಂತ್ರ್ಯದ ಅರ್ಥವನ್ನು ಉಳಿಸಿ ಅದಕ್ಕೆ ಇನ್ನೂ ಹೆಚ್ಚಿನ ಮಹತ್ವವನ್ನು ತಂದುಕೊಡಬೇಕಿರುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯದ ದಿನದಂದು ರಕ್ತಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಸಂಗ್ರಹವಾಗುವ ರಕ್ತ ಎಷ್ಟು ಜೀವಕ್ಕೆ ಸಂಜೀವಿನಿಯಾಗಲಿದೆಯೋ ಗೊತ್ತಿಲ್ಲ. ಸಕಾಲಕ್ಕೆ ದೊರಕುವ ರಕ್ತದಿಂದ ಅಮೂಲ್ಯ ಜೀವಗಳು ಉಳಿದರೆ ರಕ್ತದಾನ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.

ತಿರಂಗ ಪ್ರದರ್ಶನದಲ್ಲಿ ಯೂತ್ ಗ್ರೂಪ್ ಪದಾಧಿಕಾರಿಗಳಾದ ದರ್ಶನ್, ರಕ್ಷಿತ್, ದೀಪು, ಮಲ್ಲೇಶ್, ಮಂಜು, ನವೀನ್, ಪ್ರವೀಣ್, ವಿನಯ್,ದೇವಿ, ಯೋಗಿ, ಬಿ.ಎಂ.ಅಪ್ಪಾಜಪ್ಪ, ಹರ್ಷದ್, ಶಶಿ, ಬಿಎಲ್‌ಎಸ್ ಕಾಲೇಜಿನ ಉಪನ್ಯಾಸಕಿ ಶಿಲ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಿಮ್ಸ್ ರಕ್ತನಿಧಿ ಕೇಂದ್ರದ ಡಾ.ಗಾಯಿತ್ರಿ, ಸೋಮಣ್ಣ, ಅನುಷಾ ನೇತೃತ್ವದಲ್ಲಿ ರಕ್ತ ಸಂಗ್ರಹಿಸಲಾಯಿತು. ಡಾ.ಅನಿಲ್ ಆನಂದ್ ಮತ್ತು ಡಾ.ಯಾಶಿಕಾ ಅನಿಲ್ ರಕ್ತದಾನ ಮಾಡಿದರು.