ಸಾರಾಂಶ
ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಶುಕ್ರವಾರ ಬೆಳಗ್ಗೆ ಇಲ್ಲಿನ ತಾಲೂಕಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮಯ ಪಾಲಿಸದ, ಗೈರು ಹಾಜರಿದ್ದ ಅಧಿಕಾರಿಗಳು, ಸಿಬ್ಬಂದಿಗೆ ಸಮಯ ಪಾಲನೆ ಮತ್ತು ಕರ್ತವ್ಯದ ಪಾಠ ಮಾಡಿದರು. ಸಮಯ ೧೦.೩೦ ಗಂಟೆಯಾದರೂ ಹಲವು ವೈದ್ಯರು, ತಜ್ಞರು ಕರ್ತವ್ಯಕ್ಕೆ ಹಾಜರಾಗದಿರುವುದನ್ನು ಗಮನಿಸಿ, ಕಾರಣ ಕೇಳಿ ನೋಟಿಸ್ ನೀಡುವಂತೆ ಆಡಳಿತ ವೈದ್ಯಾಧಿಕಾರಿ ಡಾ. ಮಾರುತಿ ಚಿಕ್ಕಣ್ಣನವರ ಅವರಿಗೆ ಸೂಚಿಸಿದರು.
ತಾಲೂಕಾಸ್ಪತ್ರೆಗೆ ಆಗಮಿಸುತ್ತಿದ್ದಂತೆಯೇ ನೇರವಾಗಿ ತುರ್ತು ಚಿಕಿತ್ಸಾ ಘಟಕ, ತಜ್ಞ ವೈದ್ಯರ ಕೊಠಡಿಗಳಿಗೆ ತೆರಳಿದ ಶ್ರೀನಿವಾಸ ಮಾನೆ, ವೈದ್ಯರು ಇಲ್ಲದಿರುವುದನ್ನು ಗಮನಿಸಿದರು. ಬಳಿಕ ಡಯಾಲಿಸಸ್ ಘಟಕ, ಪ್ರಯೋಗಾಲಯ ಸೇರಿದಂತೆ ಇತರ ವಿಭಾಗಗಳಿಗೆ ಭೇಟಿ ನೀಡಿದಾಗ ಅಲ್ಲಿಯೂ ತಜ್ಞರು, ಸಿಬ್ಬಂದಿ ಇರಲಿಲ್ಲ. ಗ್ರಾಮೀಣ ಭಾಗಗಳಿಂದ ರೋಗಿಗಳು ಆಗಮಿಸಿ, ಚಿಕಿತ್ಸೆಗೆ ಕಾಯ್ದು ಕುಳಿತಿದ್ದಾರೆ. ಆದರೂ ಬಹುತೇಕ ವೈದ್ಯರು ಆಗಮಿಸಿಲ್ಲ. ಯಾವ, ಯಾವ ವೈದ್ಯರು, ತಜ್ಞರು, ಸಿಬ್ಬಂದಿ ಸಮಯ ಪಾಲಿಸುತ್ತಿಲ್ಲವೋ ಅವರಿಗೆಲ್ಲ ಕಾರಣ ಕೇಳಿ ನೋಟಿಸ್ ನೀಡಿ. ಸುಧಾರಿಸಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಿ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಮಾರುತಿ ಚಿಕ್ಕಣ್ಣನವರ ಅವರಿಗೆ ಸೂಚಿಸಿದರು.ಐಸಿಯು ಬಳಕೆ ಮಾಡಿಕೊಳ್ಳದೇ, ರೋಗಿಗಳನ್ನು ಹಾವೇರಿ ಜಿಲ್ಲಾಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್‌ಗೆ ಶಿಫಾರಸು ಮಾಡಲಾಗುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿವೆ. ಲಭ್ಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಸೇವೆ ನೀಡಲು ಮುಂದಾಗಿ, ಐಸಿಯುನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಎಂದರು. ಆಸ್ಪತ್ರೆಯಲ್ಲಿ ಕೆಲವು ರೋಗಿಗಳು ನೆಲದ ಮೇಲೆ ಕುಳಿತಿದ್ದನ್ನು ಕಂಡು ಬೆಂಚ್ ಹಾಕಿಲ್ಲವೇಕೆ? ಎಂದು ಶಾಸಕ ಮಾನೆ ಪ್ರಶ್ನಿಸಿ, ತಕ್ಷಣವೇ ಕ್ರಮ ಕೈಗೊಳ್ಳಿ. ಕಾಳಜಿ ವಹಿಸಿ ಕೆಲಸ ಮಾಡಿ ಎಂದರು.ಬಳಿಕ ನೇರವಾಗಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಶ್ರೀನಿವಾಸ ಮಾನೆ, ಸಿಬ್ಬಂದಿ ಹಾಜರಾತಿ ಪುಸ್ತಕದ ಮೇಲೆ ಕಣ್ಣಾಡಿಸಿದರು. ಕೇವಲ ಇಬ್ಬರನ್ನು ಹೊರತುಪಡಿಸಿ ಇನ್ನುಳಿದ ಸಿಬ್ಬಂದಿ ಹಾಜರಿರದಿರುವುದನ್ನು ಗಮನಿಸಿ, ತಾಲೂಕು ಆರೋಗ್ಯಾಧಿಕಾರಿ ಡಾ. ಲಿಂಗರಾಜ ಕೆ.ಜಿ. ಅವರಿಗೆ ಕರೆ ಮಾಡಿ, ಸಮಯಪಾಲನೆಯ ಪಾಠ ಮಾಡಿದರು. ತಾಲೂಕಿನಲ್ಲಿ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಸಮಯಪಾಲನೆ ಮಾಡಿ ಆಸಕ್ತಿ ಮತ್ತು ಕಳಕಳಿಯಿಂದ ಕೆಲಸ ಮಾಡಬೇಕು. ಈ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಯಾವುದೇ ಮುನ್ಸೂಚನೆ ನೀಡದೇ ನಿಯಮಿತವಾಗಿ ಕಚೇರಿಗಳಿಗೆ ಭೇಟಿ ನೀಡಲಾಗುವುದು. ಕರ್ತವ್ಯ ನಿರ್ಲಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.