ಸ್ವಾತಂತ್ರ್ಯ ದಿನಕ್ಕೆ ಮಾಣೆಕ್‌ ಮೈದಾನ ಸಿದ್ಧ

| Published : Aug 14 2024, 01:00 AM IST

ಸಾರಾಂಶ

ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ರಾಜ್ಯ ಮಟ್ಟದ 78ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ನಡೆಸುತ್ತಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ರಾಜ್ಯ ಮಟ್ಟದ 78ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಶೇಷವಾಗಿ ಈ ಬಾರಿ ಅಂಗಾಂಗ ದಾನ ಮಾಡಿದ 64 ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯೋತ್ಸವದ ವೇದಿಕೆಯ ಮೇಲೆ ‘ಪ್ರಶಂಸಾ ಪತ್ರ’ ನೀಡಿ ಸನ್ಮಾನಿಸಲಿದ್ದಾರೆ.

ಸ್ವಾತಂತ್ರ್ಯ ಮಹೋತ್ಸವವನ್ನು ಅದ್ಧೂರಿಯಿಂದ ಆಚರಿಸುವುದಕ್ಕೆ ತೀರ್ಮಾನಿಸಲಾಗಿದ್ದು, ಅದಕ್ಕಾಗಿ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಮಂಗಳವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದರು.

ಸ್ವಾತಂತ್ರ್ಯ ದಿನಾಚರಣೆಗೆ ಮಾಣೆಕ್‌ ಷಾ ಪರೇಡ್ ಮೈದಾನ ಸಂಪೂರ್ಣವಾಗಿ ಸಜ್ಜಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆಗಸ್ಟ್ 15ರ ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈದಾನದಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ತೆರೆದ ಜೀಪಿನಲ್ಲಿ ಪೆರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ 78ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದು ವಿವರಿಸಿದರು.

ಈ ಬಾರಿ ವಿಶೇಷವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಸ್ಥಾಪಿತವಾದ ಸ್ಟೇಟ್ ಆರ್ಗನ್ ಟಿಸ್ಯೂವ್ ಟ್ರಾನ್ಸ್‌ಪೆಂಟ್ ಅರ್ಗನೈಜೇಷನ್ ಮುಖಾಂತರ ನೀಡುವ ಮಾಹಿತಿ ಆಧರಿಸಿ ಅಂಗಾಗದಾನ ಮಾಡಿದ ಕುಟುಂಬದ ಸದಸ್ಯರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸುವಂತೆ ಆದೇಶಿಸಲಾಗಿದೆ. ಆಯಾ ಜಿಲ್ಲಾ ಮಟ್ಟದಲ್ಲಿ ಗೌರವಿಸಲಾಗುತ್ತದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 80 ಮಂದಿಯ ಪೈಕಿ 64 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಅವರಿಗೆ ಮುಖ್ಯಮಂತ್ರಿಗಳು ‘ಪ್ರಶಂಸಾ ಪತ್ರ’ ನೀಡಿ ಗೌರವಿಸಲಿದ್ದಾರೆ ಎಂದು ತಿಳಿಸಿದರು.

ಇನ್ನು ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್, ಗೋವಾ ಪೊಲೀಸ್ ತಂಡ ಸೇರಿದಂತೆ ವಿವಿಧ ಇಲಾಖೆಯ 35 ತುಕಡಿಯಗಳಲ್ಲಿ 1,150 ಮಂದಿ ಪಥ ಸಂಚಲನ ನಡೆಸಿಕೊಡಲಿದ್ದಾರೆ. ನಗರದ ವಿವಿಧ ಶಾಲಾ 1,450 ವಿದ್ಯಾರ್ಥಿ ಹಾಗೂ 400 ಎನ್‌ಎಸ್ಎಸ್‌ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.1583 ಪೊಲೀಸರಿಂದ ಭದ್ರತೆ:

ಬೆಂಗಳೂರು ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ, ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಮಾಣೆಕ್‌ ಷಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಂಚಾರ ನಿರ್ವಹಣೆ ಹಾಗೂ ಆಚರಣೆಗೆ ಆಗಮಿಸುವ ಗಣ್ಯರು ಮತ್ತು ಸಾರ್ವಜನಿಕರಿಗೆ ಸೂಕ್ತ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಕೆ ಮಾಡಿಕೊಂಡು ಆಗಮಿಸಬೇಕೆಂದು ಮನವಿ ಮಾಡಿದರು.

ಭದ್ರತೆಗಾಗಿ 10 ಡಿಸಿಪಿ, 17 ಎಸಿಪಿ, 43 ಪೊಲೀಸ್‌ ಅಧಿಕಾರಿಗಳು, 112 ಪಿಎಸ್‌ಐ, 62 ಎಎಸ್ಐ, 511 ಎಚ್‌ಸಿ, ಪಿಸಿ, 72 ಮಹಿಳಾ ಪೊಲೀಸರು, ಸಂಚಾರ ವ್ಯವಸ್ಥೆಯ ನಿಯಂತ್ರಣಕ್ಕೆ 3 ಡಿಸಿಪಿ, 6 ಎಸಿಪಿ, 19 ಪೊಲೀಸ್‌ ಅಧಿಕಾರಿಗಳು, 32 ಮಹಿಳಾ ಪಿಎಸ್‌ಐ, 111 ಎಎಸ್‌ಐ, 430 ಎಚ್‌ಸಿ, ಪಿಸಿ ಸೇರಿದಂತೆ ಒಟ್ಟು 1,583 ಪೊಲೀಸ್ ಸಿಬ್ಬಂದಿಯನ್ನು ಭದ್ರತೆ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಮೈದಾನದ ಸುತ್ತ ಭದ್ರತೆ ಮತ್ತು ಸುರಕ್ಷತೆಗಾಗಿ 100 ಸಿಸಿ ಕ್ಯಾಮೆರಾ ವ್ಯವಸ್ಥೆ, ಮೂರು ಬ್ಯಾಗೇಜ್ ಸ್ಕ್ಯಾನರ್, 100 ಕೆಎಸ್‌ಆರ್‌ಪಿ ಮತ್ತು ಸಿಆರ್‌ ತುಕಡಿ, ಎರಡು ಅಗ್ನಿ ಶಾಮಕ ವಾಹನ, ಎರಡು ಆ್ಯಂಬುಲೆನ್ಸ್ ವಾಹನ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, ಬಾಂಬ್‌ ನಿಷ್ಕ್ರಿಯ ದಳ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ 15 ದಿನಗಳಿಂದ ಮೈದಾನಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ ಬೆಂಗಳೂರು ನಗರದ ಎಲ್ಲ ಹೋಟೆಲ್, ಲಾಡ್ಜ್‌ಗಳು, ತಂಗುದಾಣಗಳು ಸೇರಿದಂತೆ ಇನ್ನಿತರೆ ಸ್ಥಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈ ವೇಳೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ ದಯಾನಂದ್, ಸಂಚಾರಿ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಪೂರ್ವ ವಲಯ ಆಯುಕ್ತ ಸ್ನೇಹಲ್ ಇದ್ದರು.

ಪರ್ಸ್‌ಗೆ ಮಾತ್ರ ಅವಕಾಶ

ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ಪಾಸು ಮತ್ತು ಗುರುತಿನ ಚೀಟಿಯನ್ನು ಹೊಂದಿರಬೇಕು. ಪರ್ಸ್ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಕಾರ್ಯಕ್ರಮಕ್ಕೆ ತರದಂತೆ ನಿಷೇಧಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರು ಪೊಲೀಸರ ಭದ್ರತಾ ತಪಾಸಣೆಗೆ ಸಹಕರಿಸಬೇಕೆಂದು ಬಿ.ದಯಾನಂದ್‌ ಮನವಿ ಮಾಡಿದರು.ಸಾಂಸ್ಕೃತಿ ಕಾರ್ಯಕ್ರಮ ವಿವರ

ಮಂಜುನಾಥ್‌, ಬಿ.ಸಿದ್ದರಾಜಯ್ಯ ಮತ್ತು ತಂಡದಿಂದ ನಾಡಗೀತೆ ಮತ್ತು ರೈತಗೀತೆ. ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 750 ವಿದ್ಯಾರ್ಥಿಗಳಿಂದ ‘ಜಯಭಾರತಿ’ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ರಾಜ್ಯ ಕೋಶದ 400 ವಿದ್ಯಾರ್ಥಿಗಳಿಂದ ‘ರಾಜ್ಯ ಸರ್ಕಾರದ ಐದು ಮಹ್ವಕಾಂಕ್ಷಿ ಗ್ಯಾರಂಟಿಗಳು’ ಪಿಳ್ಳಣ್ಣ ಗಾರ್ಡನ್‌ನ ಬಿಬಿಎಂಪಿಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ 750 ವಿದ್ಯಾರ್ಥಿಗಳಿಂದ ‘ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕದೇವಿ’ ಕುರಿತು ನೃತ್ಯ ರೂಪಕಗಳ ಪ್ರದರ್ಶನ ನಡೆಯಲಿದೆ.

ಬಳಿಕ ಸೇನಾ ಪಡೆಯ ವೀರರಿಂದ ಪ್ಯಾರಾ ಮೋಟರ್ ಪ್ರದರ್ಶನ, ಮಲ್ಲಕಂಬ ಹಾಗೂ ಮೋಟರ್ ಸೈಕಲ್ ಪ್ರದರ್ಶನ ನಡೆಯಲಿದೆ.ಮೈದಾನಕ್ಕೆ ಬರುವವರಿಗೆ ಸೂಚನೆ

*ಆಗಸ್ಟ್ 15ರ ಬೆಳಗ್ಗೆ 8.30ರ ಒಳಗಾಗಿ ತಮ್ಮ ಆಸನದಲ್ಲಿ ಆಸೀನರಾಗಬೇಕು.

*ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆಯಲ್ಲಿ ಆಗಮಿಸಿ ಗೇಟ್ 5ರ ಮೂಲಕ ಪ್ರವೇಶ.

*ಯಾವುದೇ ಲಗೇಜ್ ಹಾಗೂ ಇತರೆ ವಸ್ತು ತರುವಂತಿಲ್ಲ.

*ಮೊಬೈಲ್ ಬಳಕೆ ಮಾಡುವಂತಿಲ್ಲ.

*ಪರೇಡ್ ವೀಕ್ಷಣೆಗೆ ಆಗಮಿಸುವ ಆಹ್ವಾನಿತರು ಹಾಗೂ ಸಾರ್ವಜನಿಕರು ಮೊಬೈಲ್, ಹೆಲ್ಮೆಟ್, ಕ್ಯಾಮೆರಾ, ರೇಡಿಯೋ, ಕೊಡೆ ತರುವಂತಿಲ್ಲ.

*ಸೆಲ್ಫಿ ತೆಗೆಯುವಂತಿಲ್ಲ.

*ಬಿಎಂಟಿಸಿ ಹಾಗೂ ಮೆಟ್ರೋ ಸೇವೆ ಬಳಸಬೇಕು.

*ಸಹಾಯಕ್ಕೆ112ಗೆ ಕರೆ ಮಾಡಿ ಅಥವಾ ಸ್ಥಳದಲ್ಲಿನ ಪೊಲೀಸರನ್ನು ಸಂಪರ್ಕಿಸಿ.

*ಕುಡಿಯುವ ನೀರಿನ ವ್ಯವಸ್ಥೆಯಿದೆ.ನಿಷೇಧಿಸಲಾದ ವಸ್ತುಗಳು

ಸಿಗರೆಟ್‌, ಬೆಂಕಿ ಪಟ್ಟಿಗೆ, ಕರಪತ್ರಗಳು, ಚಾಕು-ಚೂರಿ, ಹರಿತವಾದ ವಸ್ತುಗಳು, ತ್ರಿವರ್ಣ ಧ್ವಜ ಹೊರತು ಪಡಿಸಿ ಇತರೆ ಬಾವುಟ, ತಿಂಡಿ, ತಿನಿಸು, ಮದ್ಯದ ಬಾಟಲಿ, ಮಾದಕ ವಸ್ತು, ಶಸ್ತ್ರಾಸ್ತ್ರಗಳು, ಪಟಾಕಿ, ಸ್ಫೋಟಕ ವಸ್ತುಗಳು, ಬಣ್ಣದ ದ್ರವ, ನೀರಿನ ಬಾಟಲಿ ಹಾಗೂ ಕ್ಯಾನ್‌ಗಳು.ಈ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ

*ಸೆಂಟ್ರಲ್ ಸ್ಟ್ರೀಟ್- ಅನಿಲ್‌ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣ ವರೆಗೆ

*ಕಬ್ಬನ್ ರಸ್ತೆ-ಸಿಟಿಓ ವೃತ್ತದಿಂದ ಕೆಆರ್‌ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ ವರೆಗೆ

*ಎಂಜಿ ರಸ್ತೆ- ಅನಿಲ್‌ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆಸಂಚಾರ ನಿರ್ಬಂಧ

*ಕಬ್ಬನ್ ರಸ್ತೆ-ಬಿಆರ್‌ವಿ ಜಂಕ್ಷನ್ - ಕಾಮರಾಜ ರಸ್ತೆ ಜಂಕ್ಷನ್ ಎರಡೂ ಬದಿ

*ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿಆರ್‌ವಿ ಜಂಕ್ಷನ್ ಕಡೆ ವಾಹನಗಳ ಸಂಚಾರ ನಿರ್ಬಂಧ

ಪರ್ಯಾಯ ಸಂಚಾರ ವ್ಯವಸ್ಥೆ

*ಇನ್ ಫೆಂಟ್ರಿ ರಸ್ತೆಯಿಂದ ಮಣಿಪಾಲ್ ಸೆಂಟರ್ ಕಡೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫೆಂಟ್ರಿ ರಸ್ತೆ-ಸಫೀನಾ ಪ್ಲಾಜಾ ಬಳಿ ಎಡ ತಿರುವು ಪಡೆದು ಮೈನ್ ಗಾರ್ಡ್ ರಸ್ತೆ ಮೂಲಕ ಡಿಕನ್ಸನ್ ರಸ್ತೆ ಜಂಕ್ಷನ್ ಮೂಲಕ ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆ ಮಣಿಪಾಲ್ ಸೆಂಟರ್ ಕಡೆಗೆ ಸಾಗುವುದು.

*ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿಆರ್‌ವಿ ಜಂಕ್ಷನ್ ಕಡೆ ವಾಹನಗಳು, ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂಜಿ ರಸ್ತೆ ಮೂಲಕ ಮೆಯೋಹಾಲ್, ಕಾವೇರಿ ಎಂಪೋರಿಯಂ, ಅನಿಲ್‌ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಸಾಗುವುದು.ಅಂತಿಮ ಹಂತದ ತಾಲೀಮು

ಕಳೆದ ಮೂರು ದಿನಗಳಿಂದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಪಥ ಸಂಚಲನದಲ್ಲಿ ಭಾಗವಹಿಸುವ ತಂಡಗಳು ತಾಲೀಮು ನಡೆಸುತ್ತಿವೆ. ಮಂಗಳವಾರ ಅಂತಿಮ ಹಂತದ ತಾಲೀಮು ನಡೆಸಲಾಯಿತು.