ಸಾರಾಂಶ
ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯ 21ನೇ ವರ್ಷದ ‘ಕಲಾ ಸಂಗಮ’ ಕಾರ್ಯಕ್ರಮ ಫೆ. 23ರಂದು ಪರ್ಕಳ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಲಿದೆ ಎಂದು ವೇದಿಕೆಯ ಸಂಚಾಲಕ ಎಂ. ಮಂಜುನಾಥ ಉಪಾಧ್ಯ ಪರ್ಕಳ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯ 21ನೇ ವರ್ಷದ ‘ಕಲಾ ಸಂಗಮ’ ಕಾರ್ಯಕ್ರಮ ಫೆ. 23ರಂದು ಪರ್ಕಳ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಲಿದೆ ಎಂದು ವೇದಿಕೆಯ ಸಂಚಾಲಕ ಎಂ. ಮಂಜುನಾಥ ಉಪಾಧ್ಯ ಪರ್ಕಳ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಧ್ಯಾಹ್ನ 2 ಗಂಟೆಗೆ ನಿವೃತ್ತ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಪರ್ಕಳ ಹಾಗೂ ಸ್ವಾಗತ್ ಹೊಟೇಲ್ ಮಾಲೀಕ ಮೋಹನದಾಸ ನಾಯಕ್ ನಾಯಕ್ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಅಪರಾಹ್ನ 2.15ಕ್ಕೆ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ‘ಗಜಗೌರಿ ವ್ರತ’ ಹರಿಕಥಾ ಕಾಲಕ್ಷೇಪ, ಸಂಜೆ 4 ಗಂಟೆಗೆ ಸಾನ್ವಿ ರವೀಂದ್ರ ನಾಯಕ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಜರುಗಲಿದೆ. ಸಂಜೆ 4.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ, ವೇದಿಕೆಯ ಗೌರವ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಾಹಿತಿ ವಸಂತ ಕುಮಾರ್ ಪೆರ್ಲ, ತುಳು ನಟ ಭೋಜರಾಜ ವಾಮಂಜೂರು, ಪದ್ಮಶ್ರೀ ಪುರಸ್ಕೃತ ಅಮೈ ಮಾಲಿಂಗ ನಾಯ್ಕ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಹಾಗೂ ಚಲನಚಿತ್ರ ನಟ ಯೋಗೀಶ್ ಶೆಟ್ಟಿ ಧರ್ಮಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸಂಜೆ 6.15ಕ್ಕೆ ಮರ್ಣೆ ಶ್ರೀ ಮಹಾಲಿಂಗೇಶ್ವರ ನಾಟ್ಯ ತಂಡದ ಕಲಾವಿದರಿಂದ ದೀಕ್ಷಾ ಗುಂಡುಪಾದೆ ನಿರ್ದೇಶನದಲ್ಲಿ ‘ರಾಮಾಯಣ’ ಹಾಗೂ ‘ಕಲ್ಕಿಯುಗ’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. 6.45ಕ್ಕೆ ಸಂಪ್ರೀತ್ ನಾಯಕ್ ಮತ್ತು ಸೃಜನ್ ನಾಯಕ್ ಅವರಿಂದ ಕೊಳಲು ವಾದನ, ಸಂಜೆ 7ಕ್ಕೆ ಗಂಗಾಧರ ಆಚಾರ್ಯ ಅರ್ಪಿಸುವ ಸಿಂಚನಾ ಮ್ಯೂಸಿಕಲ್ಸ್ ಬಳಗದವರಿಂದ ಸಂಗೀತ ರಸಮಂಜರಿ ಹಾಗೂ ಜೂನಿಯರ್ ವಿಷ್ಣುವರ್ಧನ್ (ಜಯಶ್ರೀರಾಜ್ ಬೆಂಗಳೂರು), ಜೂನಿಯರ್ ಅಂಬರೀಷ್ (ಆರಾಧ್ಯ ಭದ್ರಾವತಿ) ಹಾಗೂ ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ದೀಕ್ಷಿತ್ ಗೌಡ ಕಡಬ ಅವರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಸಂದೀಪ್ ನಾಯ್ಕ್ ಕಬ್ಯಾಡಿ, ಸಹ ಸಂಚಾಲಕ ಗೋಪಿ ಹಿರೇಬೆಟ್ಟು, ಕಾರ್ಯದರ್ಶಿ ಶ್ರೀನಿವಾಸ ನಾಯಕ್, ಕೋಶಾಧಿಕಾರಿ ಗಣೇಶ್ ಸಣ್ಣಕ್ಕಿಬೆಟ್ಟು ಉಪಸ್ಥಿತರಿದ್ದರು.