ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸಾವಿರಾರು ವರ್ಷಗಳ ಇತಿಹಾಸ ಇರುವ ಮಂಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅ.೩ರಿಂದ ೧೪ರವರೆಗೆ ವಿಜೃಂಭಣೆಯಿಂದ ಜರುಗಲಿದೆ.ನವರಾತ್ರಿ ಸಂದರ್ಭದಲ್ಲಿ ದೇವರಿಗೆ ವಿಶೇಷ ಅಲಂಕಾರವಾಗಿ ದುರ್ಗಾದೇವಿ, ಆರ್ಯದೇವಿ, ಭಗವತಿ, ಕುಮಾರಿ, ಅಂಬಿಕೆ, ಮಹಿಷಮರ್ದಿನಿ, ಚಂಡಿಕೆ, ಸರಸ್ವತಿ ವಾಗೀಶ್ವರಿ, ಮಂಗಳಾದೇವಿಯ ಅಲಂಕಾರ ಮಾಡಲಾಗುತ್ತದೆ.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿತ್ಯ ಜರುಗಲಿವೆ. ಅ.೧೪ರಂದು ಸಂಜೆ ೭ಕ್ಕೆ ಅವಭೃತ ಮಂಗಳ ಸ್ನಾನದೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ. ಹೆಚ್ಚಿನ ಸಂಖೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕು ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ್ ತಿಳಿಸಿದ್ದಾರೆ.ಉತ್ಸವದ ಆರಂಭವು ಕೊಪ್ಪರಿಗೆ ಏರಿಸುವುದರಿಂದ ಆರಂಭವಾದರೆ, ದೇವಿಯನ್ನು ನವ ವಿಧಗಳಲ್ಲಿ ಅಲಂಕರಿಸಿ, ಕಲ್ಪೋಕ್ತ ಪೂಜೆಗಳು ನಡೆಯಲಿವೆ. ಮಹಾನವಮಿಯಂದು ಚಂಡಿಕಾ ಹೋಮ, ರಂಗಪೂಜೆ ಹಾಗೂ ಸಣ್ಣ ರಥೋತ್ಸವ ಜರುಗಲಿದೆ. ವಿಜಯದಶಮಿಯ ದಿನ ಪ್ರಾತಃಕಾಲ ತೆನೆ ತೆರುವ ಉತ್ಸವವಿದೆ. ಈ ತೆನೆಯನ್ನು ದೇವಿಯ ಸನ್ನಿಧಿಯಲ್ಲಿರಿಸಿ, ಪೂಜೆ ಮಾಡಿ, ಭಕ್ತರೆಲ್ಲರೂ ತಮ್ಮ ಮನೆ ತುಂಬಿಸಿಕೊಳ್ಳುವ ಕ್ರಮವಿದೆ.
ತೆನೆಯನ್ನು ಮನೆಗೆ ಕೊಂಡೊಯ್ಯುವ ದಿನ ಚಿಕ್ಕ ಮಕ್ಕಳಿಗೆ ಶ್ರೀದೇವಿಯ ಸನ್ನಿಧಿಯಲ್ಲಿ ವಿದ್ಯಾರಂಭ ಮಾಡುವ ಪದ್ಧತಿ ನಡೆಯಲಿದೆ. ಅಂದು ನಡೆಯುವ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳಲಿದ್ದಾರೆ.ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಯೋಜಿಸಲಾಗಿದೆ. ವಿಜಯ ದಶಮಿಯಂದು ಬೆಳಗ್ಗೆ ತೆನೆ ಹಬ್ಬವಿರಲಿದ್ದು, ೮ ಗ್ರಾಮದ ಜನರಿಗೆ ತೆನೆ ನೀಡುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ತದನಂತರ ತುಲಾಭಾರ ಸೇವೆ, ಮಧ್ಯಾಹ್ನ ರಥಾರೋಹಣವಾಗಿ ಸಂಜೆ ಗಂಟೆ ೬ಕ್ಕೆ ಸರಿಯಾಗಿ ರಥೋತ್ಸವ ಕಾರ್ಯಕ್ರಮ ಜರಗುತ್ತದೆ.