ಸಾರಾಂಶ
ಕೊಣಾಜೆ ಮಂಗಳಗಂಗೋತ್ರಿ ವಿಶ್ವಮಂಗಳ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಅವರನ್ನು ಸಮಾಜದ ಸಂಪತ್ತನ್ನಾಗಿ ರೂಪಿಸುವ ಜವಾಬ್ದಾರಿ ಪೋಷಕರದ್ದು. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರಷ್ಟೇ ಶಿಕ್ಷಕರ ಪಾತ್ರವೂ ಮಹತ್ತರವಾದುದು. ಕೊಣಾಜೆಯ ವಿಶ್ವಮಂಗಳ ವಿದ್ಯಾಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ನಿರಂತರವಾದ ಶೈಕ್ಷಣಿಕ ಸೇವೆಯೊಂದಿಗೆ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.ಅವರು ಕೊಣಾಜೆ ಮಂಗಳಗಂಗೋತ್ರಿ ವಿಶ್ವಮಂಗಳ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವಮಂಗಳ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ವಿಶ್ವನಾಥ, ಆಂಗ್ಲ ಭಾಷೆಯಲ್ಲಿ ಮತ್ತಷ್ಟು ಪ್ರೌಢಿಮೆಯನ್ನು ಬೆಳೆಸುವ ಉದ್ದೇಶದಿಂದ ಶಾಲೆಯಲ್ಲಿ ಇಂಗ್ಲಿಷ್ ಲ್ಯಾಂಗ್ವೇಜ್ ಲ್ಯಾಬ್ ಆರಂಭಿಸಲಾಗಿದೆ. ಮುಂದಿನ ವಾರದಿಂದಲೇ ಶಿಕ್ಷಕಿಯರಿಗೆ ತರಬೇತಿ ನಡೆಯಲಿದೆ. ಅಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಳಿಗೆ ಪೂರಕವಾಗಿ ಅನೇಕ ಅಭಿವೃದ್ಧಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಹರೀಶ್ ಪೂಜಾರಿ ಉಪಸ್ಥಿತರಿದ್ದರು.ಶೈಕ್ಷಣಿಕ ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ವಿವಿಧ ವಿಭಾಗಗಳ ಮುಖ್ಯ ಶಿಕ್ಷಕಿಯರಾದ ಪ್ರಿಯ, ಪೂರ್ಣಿಮಾ, ಹಂಸಗೀತ, ಶೋಭಾವತಿ ವಾರ್ಷಿಕ ಶೈಕ್ಷಣಿಕ ವರದಿ ವಾಚಿಸಿದರು.ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರೊ.ವಿನಯ್ ರಜತ್ ಸ್ವಾಗತಿಸಿದರು. ಕೋಶಾಧಿಕಾರಿ ಪ್ರೊ.ಪರಮೇಶ್ವರ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.