ಮಂಗಳೂರು: ಮತದಾನ ಹೆಚ್ಚಿಸಲು ಅಪಾರ್ಟ್‌ಮೆಂಟ್‌ ಅಭಿಯಾನಕ್ಕೆ ಚಾಲನೆ

| Published : Apr 01 2024, 12:47 AM IST

ಮಂಗಳೂರು: ಮತದಾನ ಹೆಚ್ಚಿಸಲು ಅಪಾರ್ಟ್‌ಮೆಂಟ್‌ ಅಭಿಯಾನಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನ ಜಾಗೃತಿಗೆ ವಿಲಾಸಿ ಅಪಾರ್ಟ್‌ಮೆಂಟ್‌ನ್ನು ಆಯ್ದುಕೊಳ್ಳಲಾಗಿತ್ತು. ಭಾನುವಾರ ಸಂಜೆ 5 ಗಂಟೆಗೆ ಜಾಗೃತಿ ಕಾರ್ಯಕ್ರಮ ನಿಗದಿಪಡಿಸಿದ್ದರೂ ಅಪಾರ್ಟ್‌ಮೆಂಟ್‌ ನಿವಾಸಿಗಳು ಆಗಮಿಸುವ ಸೂಚನೆ ದೊರೆಯದ ಹಿನ್ನೆಲೆಯಲ್ಲಿ ನಗರದ ಮಾಲ್‌ವೊಂದರಲ್ಲಿ ಕೆಲಸ ಮಾಡುವ ಕಾರ್ಮಿಕ ಮಹಿಳೆಯರನ್ನು ಕರೆತಂದು ಪ್ರೇಕ್ಷಕರ ಸ್ಥಾನದಲ್ಲಿ ಕೂರಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರದಲ್ಲಿ ಅತಿ ಕಡಿಮೆ ಮತದಾನ ಆಗುತ್ತಿರುವ ಹಿನ್ನೆಲೆಯಲ್ಲಿ ನಗರವಾಸಿಗಳಲ್ಲಿ ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ದ.ಕ. ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಅಪಾರ್ಟ್‌ಮೆಂಟ್‌ ಅಭಿಯಾನ ಆರಂಭಿಸಲಾಗಿದೆ.

ನಗರದ ಉರ್ವಸ್ಟೋರ್‌ ಬಳಿಯ ಕೆನೊಪಿ ಅಪಾರ್ಟ್‌ಮೆಂಟ್‌ನಲ್ಲಿ ಈ ಅಭಿಯಾನಕ್ಕೆ ಭಾನುವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವ ಯಶಸ್ವಿಯಾಗಲು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಹಿಂದೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಕೇವಲ ಪುರುಷರಿಗೆ ಮಾತ್ರ ಮತದಾನದ ಹಕ್ಕು ಇತ್ತು, ಮಹಿಳೆಯರಿಗೆ ಇರಲಿಲ್ಲ. ಆದರೆ ನಮ್ಮ ದೇಶದ ಸಂವಿಧಾನ ಆರಂಭದಿಂದಲೇ ಭೇದ ಭಾವ ಇಲ್ಲದೆ ಪ್ರತಿಯೊಬ್ಬರಿಗೂ ಮತದಾನ ಮಾಡುವ ಅವಕಾಶ ನೀಡಿದೆ. ಎಲ್ಲರೂ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಬೆಂಗಳೂರು ನಂತರ ಅತಿ ಹೆಚ್ಚು ಆರ್ಥಿಕ ಸಂಪನ್ಮೂಲ ನೀಡುತ್ತಿರುವ ನಗರ ಮಂಗಳೂರು. ಕಳೆದ ಚುನಾವಣೆಯಲ್ಲಿ ಮಂಗಳೂರು ನಗರದಲ್ಲಿ ಜಿಲ್ಲೆಯಲ್ಲೇ ಅತಿ ಕಡಿಮೆ ಮತದಾನವಾಗಿತ್ತು. ನಗರವಾಸಿಗಳು ತಮ್ಮ ಮತದಾನದ ಹಕ್ಕನ್ನು ಅರಿತುಕೊಂಡು ಓಟಿನ ಅವಕಾಶವನ್ನು ಯಾವುದೇ ರೀತಿಯಲ್ಲಿ ತಪ್ಪಿಸಿಕೊಳ್ಳಬಾರದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ್‌ ಮಾತನಾಡಿ, ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭ ಜಿಲ್ಲೆಯ ಗ್ರಾಮಾಂತರದಲ್ಲಿ ಹೆಚ್ಚಿನ ಮತದಾನವಾಗಿತ್ತು. ಆದರೆ ಮಂಗಳೂರಲ್ಲಿ ಕೇವಲ ಶೇ.70 ಮತದಾನವಾಗಿದೆ. ಎಲ್ಲರೂ ತಪ್ಪದೆ ಮತದಾನ ಮಾಡಬೇಕಿದೆ ಎಂದು ಹೇಳಿದರು.

ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಿ ಎನ್ನುವ ಆಮಂತ್ರಣ ಪತ್ರಿಕೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ವಿತರಿಸಿದರು. ಅಪಾರ್ಟ್‌ಮೆಂಟ್‌ ನಿವಾಸಿ, ಪ್ರಥಮ ಬಾರಿಗೆ ಮತದಾನದ ಹಕ್ಕು ಪಡೆದುಕೊಂಡಿರುವ ಸ್ವಾತಿ ಅವರಿಗೂ ಆಮಂತ್ರಣ ಪತ್ರಿಕೆ ನೀಡಿ ಮತದಾನಕ್ಕೆ ಆಹ್ವಾನ ನೀಡಿದರು. ಮತದಾನದ ಸೆಲ್ಫಿ ಸ್ಟ್ಯಾಂಡಿನಲ್ಲಿ ನಿಂತು ಸೆಲ್ಫಿ ತೆಗೆಯುವ ಮೂಲಕ ಜಾಗೃತಿ ಮೂಡಿಸಲಾಯಿತು.ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಆನಂದ್ ಸಿ.ಎಲ್., ಎಆರ್‌ಒ ಗಿರೀಶ್ ನಂದನ್, ಕೆನೊಪಿ ಅಪಾರ್ಟ್‌ಮೆಂಟ್ ಉಪಾಧ್ಯಕ್ಷ ರಾಜೇಶ್ವರ ಹೊಳ್ಳ ಇದ್ದರು.ಕಾರ್ಮಿಕರ ಕರೆತಂದು ಕೂರಿಸಿದ ಅಧಿಕಾರಿಗಳು!

ಮತದಾನ ಜಾಗೃತಿಗೆ ವಿಲಾಸಿ ಅಪಾರ್ಟ್‌ಮೆಂಟ್‌ನ್ನು ಆಯ್ದುಕೊಳ್ಳಲಾಗಿತ್ತು. ಭಾನುವಾರ ಸಂಜೆ 5 ಗಂಟೆಗೆ ಜಾಗೃತಿ ಕಾರ್ಯಕ್ರಮ ನಿಗದಿಪಡಿಸಿದ್ದರೂ ಅಪಾರ್ಟ್‌ಮೆಂಟ್‌ ನಿವಾಸಿಗಳು ಆಗಮಿಸುವ ಸೂಚನೆ ದೊರೆಯದ ಹಿನ್ನೆಲೆಯಲ್ಲಿ ನಗರದ ಮಾಲ್‌ವೊಂದರಲ್ಲಿ ಕೆಲಸ ಮಾಡುವ ಕಾರ್ಮಿಕ ಮಹಿಳೆಯರನ್ನು ಕರೆತಂದು ಪ್ರೇಕ್ಷಕರ ಸ್ಥಾನದಲ್ಲಿ ಕೂರಿಸಲಾಗಿತ್ತು. ಕೇವಲ ಬೆರಳೆಣಿಕೆ ಮಂದಿ ಮಾತ್ರ ಅಪಾರ್ಟ್‌ಮೆಂಟ್‌ ನಿವಾಸಿಗಳಿದ್ದರು. ಅಪಾರ್ಟ್‌ಮೆಂಟ್‌ ಅಭಿಯಾನಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿತ್ತು!