ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಭಾನುವಾರ ಆಳ್ವಾಸ್ ನುಡಿಸಿರಿ ವಿರಾಸತ್ ಬೆಳ್ತಂಗಡಿ ಘಟಕದ ವತಿಯಿಂದ 500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಓದಿನ ಜತೆ ಸಾಂಸ್ಕೃತಿಕ ವಿಚಾರಗಳಿಗೂ ಹೆಚ್ಚಿನ ಒತ್ತು ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಎತ್ತರಕ್ಕೇರಿಸಬಹುದು. ಈ ವಿಚಾರದಲ್ಲಿ ಡಾ. ಮೋಹನ್ ಆಳ್ವ ಮಹತ್ವದ ಪಾತ್ರ ವಹಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ವಿದ್ಯಾರ್ಥಿಗಳ ಪ್ರೌಢಿಮೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಉತ್ತಮ ಅಡಿಪಾಯ ನಿರ್ಮಿಸುತ್ತಿವೆ. ಕೀರ್ತಿ ಶೇಷರಾದ ವಿಜಯರಾಘವ ಪಡುವೆಟ್ನಾಯ, ಪ್ರೊ. ಎಸ್. ಪ್ರಭಾಕರ್, ಡಾ. ಯಶೋವರ್ಮ ಮಾರ್ಗದರ್ಶನದಲ್ಲಿ ಬೆಳೆದಿರುವ ಉಜಿರೆ ಸಾಂಸ್ಕೃತಿಕ ವಿಚಾರಗಳಿಗೆ ಸದಾ ಬೆನ್ನೆಲುಬಾಗಿದೆ ಎಂದರು.

ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಬೆಳ್ತಂಗಡಿ ಘಟಕದಿಂದ ವರ್ಷಕ್ಕೆ ಕನಿಷ್ಠ ಎರಡು ಕಾರ್ಯಕ್ರಮ ನಡೆಸುವ ಯೋಜನೆ ರೂಪಿಸಲಾಗಿದೆ ಎಂದರು.

ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಶುಭ ಹಾರೈಸಿದರು.


ಎಂಎಲ್ ಸಿ ಪ್ರತಾಪ ಸಿಂಹ ನಾಯಕ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಎಸ್., ಅನಿಲ್ ಕುಮಾರ್ ಎಸ್. ಎಸ್., ಪೂರನ್ ವರ್ಮ, ಮೋಹನ್ ಕುಮಾರ್, ಡಾ.ಎಂ.ಪಿ. ಶ್ರೀನಾಥ್, ಡಾ. ಹರ್ಷ ಸಂಪಿಗೆತ್ತಾಯ, ಮಚ್ಚಿಮಲೆ ಅನಂತ ಭಟ್, ವಸಂತ ಶೆಟ್ಟಿ, ರವೀಂದ್ರ ಶೆಟ್ಟಿ, ರಾಜೇಶ್ ಪೈ, ಡಾ. ಪ್ರದೀಪ್ ಆಟಿಕುಕ್ಕೆ, ಅರವಿಂದ ಕಾರಂತ್, ಶ್ರೇಯಾ ಶೆಟ್ಟಿ, ಉಮೇಶ್ ಶೆಟ್ಟಿ, ಅಶ್ವಿನಿ ಎ. ಹೆಬ್ಬಾರ್, ಪ್ರಕಾಶ ನಾರಾಯಣ ರಾವ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಅಂಬರೀಶ ಚಿಪಳೂಣ್ಕರ್ ಕಾರ್ಯಕ್ರಮ ಸಂಘಟಿಸಿದರು.

3 ಗಂಟೆ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯ ಕಲಾಸಕ್ತರು ಭಾಗವಹಿಸಿದ್ದರು.

ಜಾಗತಿಕವಾಗಿ 17 ನುಡಿಸಿರಿ, 30 ವಿರಾಸತ್ ಕಾರ್ಯಕ್ರಮಗಳು ಮೂಡಿಬಂದಿವೆ. 88 ಘಟಕಗಳು ದೇಶ-ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಮ್ಮದು ಸಂಸ್ಕೃತಿ ಬೆಳೆಸುವ ಉದ್ದೇಶವೇ ಹೊರತು ಸ್ಪರ್ಧೆಯಲ್ಲ. ಕಲೆಯ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಹೊಸ ರೂಪಗಳು ಮೂಡಿ ಬರಬೇಕು.

-ಡಾ. ಎಂ. ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು