ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸುಮಾರು ಒಂದು ವರ್ಷ ಕಳೆದಿರುವ ಮಂಗಳೂರು ಮಹಾನಗರ ಪಾಲಿಕೆ ಗುರುವಾರ ಆಡಳಿತಾಧಿಕಾರಿಗಳಿಂದ 2026-27ನೇ ಸಾಲಿನ ಬಜೆಟ್‌ ಮಂಡನೆಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.

ಮಂಗಳೂರು: ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸುಮಾರು ಒಂದು ವರ್ಷ ಕಳೆದಿರುವ ಮಂಗಳೂರು ಮಹಾನಗರ ಪಾಲಿಕೆ ಗುರುವಾರ ಆಡಳಿತಾಧಿಕಾರಿಗಳಿಂದ 2026-27ನೇ ಸಾಲಿನ ಬಜೆಟ್‌ ಮಂಡನೆಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.

ಸಾಮಾನ್ಯವಾಗಿ ಬಜೆಟ್‌ ಅಧಿವೇಶನ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರಿಂದ ಪರ ವಿರೋಧ ಚರ್ಚೆ, ವಾದ ಪ್ರತಿವಾದಕ್ಕೆ ಆಸ್ಪದವಾಗುತ್ತಿತ್ತು. ಆದರೆ ಆಡಳಿತಾಧಿಕಾರಿಗಳಿಂದ ನಿರ್ವಹಿಸಲ್ಪಡುತ್ತಿರುವ ಪಾಲಿಕೆಯಲ್ಲಿ ಮಂಡಿಸಲಾದ ಬಜೆಟ್‌, ಬಳಿಕ ಪತ್ರಕರ್ತರ ಕೆಲವೊಂದು ಪ್ರಶ್ನೆಗಳಿಗೆ ಆಡಳಿತಾಧಿಕಾರಿಯ ಉತ್ತರದೊಂದಿಗೆ ಕೊನೆಗೊಂಡಿತು.ಪಾಲಿಕೆಯ ಆಡಳಿತಾಧಿಕಾರಿ ಹಾಗೂ ದ.ಕ. ಜಿಲ್ಲಾಧಿಕಾರಿಯೂ ಆಗಿರುವ ದರ್ಶನ್‌ ಎಚ್‌.ವಿ. ಅವರು ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ 156.17 ಕೋಟಿ ರು.ಗಳ ಮಿಗತೆ ಬಜೆಟ್‌ ಮಂಡಿಸಿದರು.

2026-27ನೇ ಸಾಲಿನ ಬಜೆಟ್‌ ಅಂದಾಜು (ಆರಂಭಿಕ ಶುಲ್ಕ ಸೇರಿದಂತೆ) ಮೊತ್ತ 93,768.94 ಲಕ್ಷ ರು. (937.69 ಕೋಟಿ ರು.) ಇದರಲ್ಲಿ ಅಂದಾಜು 781.51 ಕೋಟಿ ರು. ವೆಚ್ಚ ತೋರಿಸಲಾಗಿದೆ.2025-26ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು 644.64 ಕೋಟಿ ರು. ಜಮೆ ನಿರೀಕ್ಷಿಸಲಾಗಿದ್ದು, ಡಿಸೆಂಬರ್‌ 2025ರ ಅಂತ್ಯಕ್ಕೆ 342.25 ಕೋಟಿ ರು. ಜಮೆ ಸ್ವೀಕರಿಸಲಾಗಿದೆ. ಇದೇ ವೇಳೆ ಕಳೆದ ಸಾಲಿನಲ್ಲಿ 789.72 ಕೋಟಿ ರು. ಪಾವತಿಗಳಲ್ಲಿ ಪಾಲಿಕೆಯ ಸ್ವಯಂ ಸಂಪನ್ಮೂಲ ಕ್ರೋಢೀಕರಣ ಹಾಗೂ ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳ ಆಧಾರದಲ್ಲಿ ಡಿಸೆಂಬರ್‌ ಅಂತ್ಯಕ್ಕೆ 393.47 ಕೋಟಿ ರು. ಪಾವತಿಸಿರುವುದಾಗಿ ತಿಳಿಸಿದರು.2026-27ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 90 ಕೋಟಿ ರು., ನೀರು ಸರಬರಾಜು ಶುಲ್ಕವಾಗಿ 55 ಕೋಟಿ ರು., ಘನತ್ಯಾಜ್ಯ ನಿರ್ವಹಣಾ ಕರ 26 ಕೋಟಿ ರು., ಇತರ ಆದಾಯವಾಗಿ 26.48 ಕೋಟಿ ರು. ಕಟ್ಟಡ ಪರವಾನಿಗೆ- ಪ್ರೀಮಿಯಂ ಎಫ್‌ಎಆರ್‌ನಿಂದ 26 ಕೋಟಿ ರು., ಮಾರುಕಟ್ಟೆ ಸಾಲ7.31 ಕೋಟಿ ರು., ಬ್ಯಾಂಕ್‌ ಬಡ್ಡಿ 15 ಕೋಟಿ ರು., ಮಾರುಕಟ್ಟೆ, ಇತರ ಬಾಡಿಗೆಯಾಗಿ 5.47 ಕೋಟಿ ರು., ರಸ್ತೆ ಕಡಿತ, ಪುನರ್‌ ನಿರ್ಮಾಣ ಶುಲ್ಕದಿಂದ 3 ಕೋಟಿ ರು. ಸೇರಿದಂತೆ ಒಟ್ಟು 337.25 ಕೋಟಿ ರು.ಗಳ ಆದಾಯ ನಿರೀಕ್ಷಿಸಲಾಗಿದೆ. ರಾಜ್ಯ ಸರ್ಕಾರದಿಂದ ವೇತನ, ಎಸ್‌ಎಫ್‌ಸಿ ಮುಕ್ತ ನಿಧಿ, ಪೌರ ಕಾರ್ಮಿಕರ ನೇರ ಪಾವತಿ ವೇತನ, ಸ್ಟ್ಯಾಂಪ್‌ ಶುಲ್ಕದ ಸರ್‌ಚಾರ್ಜ್‌ ಸೇರಿದಂತೆ ವಿವಿಧ ಯೋಜನೆಗಳಿಗೆ ಒಟ್ಟು 199.23 ಕೋಟಿ ರು. ಅನುದಾನವನ್ನು ನಿರೀಕ್ಷಿಸಲಾಗಿದೆ. ಕೇಂದ್ರದಿಂದ ಅಮೃತ್‌ 2.0 ಜಲ್‌ ಹಿ ಅಮೃತ್‌, ನಲ್ಮ್‌, ಸ್ವಚ್ಛ ಭಾರತ ಮಿಷನ್‌, 15ನೇ ಹಣಕಾಸು ಮುಕ್ತ ಅನುದಾನ, 16ನೇ ಹಣಕಾಸು, ಎನ್‌ಜಿಟಿ ಸೇರಿದಂತೆ ಒಟ್ಟು 93.36 ಕೋಟಿ ರು. ಗಳನ್ನು ನಿರೀಕ್ಷಿಸಲಾಗಿದೆ.

ಬಜೆಟ್‌ನಲ್ಲಿ ಹೊಸ ಯೋಜನೆಗಳುಮಡಿಲು ಯೋಜನೆ ವಿಸ್ತರಣೆ:

ಪಾಲಿಕೆ ಕಚೇರಿಯಲ್ಲಿ ಆರಂಭಿಸಿರುವ ‘ಮಡಿಲು’ ಶಿಶುಪಾಲನಾ ಕೇಂದ್ರವನ್ನು ವಲಯ ಕಚೇರಿಗಳಾದ ಸುರತ್ಕಲ್‌ ಹಾಗೂ ಕದ್ರಿಯಲ್ಲಿಯೂ ತೆರೆಯಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಮಾದರಿಯಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವ ಮೂಲಕ ಅಲ್ಲಿ ಸರ್ಕಾರಿ ಕಚೇರಿ ಸಿಬ್ಬಂದಿ, ಅಧಿಕಾರಿಗಳ ಮಕ್ಕಳ ಜತೆ ಸೀಮಿತ ಅವಧಿಗೆ ಸಾರ್ವಜನಿಕರ ಮಕ್ಕಳಿಗೂ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ. ಈ ಉದ್ದೇಶಕ್ಕೆ 50 ಲಕ್ಷ ರು. ಕಾಯ್ದಿರಿಸಲಾಗಿದೆ.

ಆಸರೆ- ಹೆಣ್ಣು ಮಕ್ಕಳ ಭರವಸೆಯ ಮಡಿಲು:

ಪಾಲಿಕೆ ವ್ಯಾಪ್ತಿಯಲ್ಲಿ 14 ವರ್ಷದೊಳಗಿನ ಹೆಣ್ಣು ಮಕ್ಕಳು ವಿವಿಧ ರೀತಿಯ ದೌರ್ಜನ್ಯ, ಶೋಷಣೆಗೆ ಒಳಗಾದ, ಪೋಷಕರು- ಸಂಬಂಧಿಕರನ್ನು ಕಳೆದುಕೊಂಡು ಅನಾಥವಾಗಿರುವ, ರಸ್ತೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡರುವ ಹೆಣ್ಣು ಮಕ್ಕಳ ಪೋಷಣೆ, ರಕ್ಷಣೆ, ಶಿಕ್ಷಣ ಹಾಗೂ ಭವಿಷ್ಯದ ಮೇಲ್ವಿಚಾರಣೆ, ಜವಾಬ್ದಾರಿ ವಹಿಸುವ ಸಂಸ್ಥೆಗಳಿಗೆ ತಲಾ 15 ಲಕ್ಷ ರು.ನಂತೆ 30 ಲಕ್ಷ ರು.ಗಳ ಪ್ರೋತ್ಸಾಹ ಧನ.

ನಮ್ಮ ಯೋಧ ಯೋಜನೆ: ದೇಶಕ್ಕಾಗಿ ಹೋರಾಡಿ ಮೃತಪಟ್ಟವೀರ ಯೋಧರ ಕುಟುಂಬಕ್ಕೆ ಸ್ಪಂದಿಸವ ನಿಟ್ಟಿನಲ್ಲಿ ಭೂಸೇನೆ, ವಾಯುಪಡೆ, ನೌಕಾಪಡೆಗಳ ಜತೆಗೆ ಅರೆ ಸೈನಿಕ ಪಡೆಗಳ (ಬಿಎಸ್‌ಎಫ್‌, ಸಿಆರ್‌ಪಿಎಫ್‌, ಸಿಐಎಸ್‌ಎಫ್‌, ಅಸ್ಸಾಂ ರೈಫಲ್ಸ್‌, ಎಸ್‌ಎಸ್‌ಬಿ ಮತ್ತು ಎನ್‌ಎಸ್‌ಜಿ) ವೀರ ಮರಣ ಹೊಂದಿದ ಯೋಧರ ಆಸರೆಗಾಗಿ ತಲಾ 5 ಲಕ್ಷ ರು.ನಂತೆ ಧನ ಸಹಾಯ ನೀಡಲು 20 ಲಕ್ಷ ರು. ಮೀಸಲಿಡಲಾಗಿದೆ. 

ಕಂಬಳದ ಹೆಜ್ಜೆಗೆ ಸಂಸ್ಕೃತಿಯ ಸ್ಪಂದನ: ಕಂಬಳವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಂಗಳೂರು ನಗರದಲ್ಲಿ ನಡೆಯುವ ಮೂರು ಕಂಬಗಳಿಗೆ ತಲಾ 3 ಲಕ್ಷ ರು.ನಂತೆ ಅನುದಾನ ನೀಡಲು 9 ಲಕ್ಷ ರು. ಮೀಸಲಿರಿಸಲಾಗಿದೆ.ಯಕ್ಷಗಾನಕ್ಕೆ ಪ್ರೋತ್ಸಾಹ: ಯಕ್ಷಗಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 10 ಲಕ್ಷ ರು. ಗಳ ಅನುದಾನ ನಿಗದಿ.

ತುಳು ಭಾಷೆಯ ಸಂಸ್ಕೃತಿ, ಕಲಾರೂಪಗಳಿಗೆ ಉತ್ತೇಜನ: ತುಳು ಭಾಷೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತುಳು ಯುವ ಕವಿಗಳು, ಕಲಾಕೃತಿಗಳು ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ ನಾಟಕಗಳಿಗೆ ಗೌರವ ನೀಡುವ ಉದ್ದೇಶದಿಂದ 50 ಲಕ್ಷ ರು. ಅನುದಾನ ಕಾಯ್ದಿರಿಸಲಾಗಿದೆ.ಪೌರ ಕಾರ್ಮಿಕರಿಗೆ ಕಲ್ಯಾಣ ನಿಧಿ: ಪೌರ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ದೃಢಪಡಿಸುವ ಉದ್ದೇಶದಿಂದ 2026-27ನೇ ಸಾಲಿಗೆ 50 ಲಕ್ಷ ರು.ಗಳ ಗುಂಪು ಜೀವ ವಿಮಾ ಯೋಜನೆಯನ್ನು ಮೀಸಲಿರಿಸಲಾಗಿದೆ. ಪ್ರತಿ ಕಾರ್ಮಿಕರಿಗೆ ತಗಲುವ ವಾರ್ಷಿಕ ಪ್ರೀಮಿಯಂನ್ನು ಪಾಲಿಕೆಯಿಂದಲೇ ಭರಿಸಲಾಗುತ್ತದೆ.

ಸಖಿ ಶೌಚಾಲಯ: ಪಾಲಿಕೆ ವ್ಯಾಪ್ತಿಯ ಜನಸಂದಣಿ ಇರುವ ಸ್ಥಳಗಳಲ್ಲಿ ವಿಶೇಷವಾಗಿ ಬಸ್‌ ನಿಲ್ದಾಣ, ಮಾರುಕಟ್ಟೆ, ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸುಸಜ್ಜಿತ ಶೌಚಾಲಯ ನಿರ್ಮಾಣ ಹಾಗೂ ಹಾಲಿ ಇರುವ ಸಾರ್ವಜನಿಕ ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲು 1 ಕೋಟಿ ರು. ಕಾಯ್ದಿರಿಸಲಾಗಿದೆ.

ಬೀದಿ ನಾಯಿಗಳ ಪುನರ್ವಸತಿ ಕೇಂದ್ರ: ಬೀದಿ ನಾಯಿಗಳ ಹಾವಳಿ ತಡೆಗಟ್ಟಿ ಅವುಗಳಿಗೆ ಸೂಕ್ತ ಆಶ್ರಯ ಒದಗಿಸಲು ಈಗಾಗಲೇ ಮಂಗಳೂರು ತಾಲೂಕಿನ ಬೊಂಡಂತಿಲ ಗ್ರಾಮದಲ್ಲಿ 5 ಎಕರೆ ಜಾಗವನ್ನು ಗುರುತಿಸಲಾಗಿದೆ. ಅಲ್ಲಿ ವ್ಯವಸ್ಥೆ ಕಲ್ಪಿಸಲು 2 ಕೋಟಿ ರು. ಕಾಯ್ದಿರಿಸಲಾಗಿದ್ದು, ಆಸಕ್ತ ಸರ್ಕಾರೇತರ ಸಂಸ್ಥೆ ಅಥವಾ ಖಾಸಗಿ ಸಂಸ್ಥೆಗಳ ಮೂಲಕ ನಿರ್ವಹಣೆಗೆ ಯೋಜನೆ.

ವಿನೂತನಾ ನಿಧಿ: ಪಚ್ಚನಾಡಿ ಪ್ರದೇಶದ ಡಂಪಿಂಗ್‌ ಯಾರ್ಡ್‌ನಿಂದ ಸ್ಥಳೀಯರಿಗೆ ಆಗುತ್ತಿರುವ ದುರ್ವಾಸನೆಯನ್ನು ತಡೆಗಟ್ಟಲು ಆಧುನಿಕ ತಂತ್ರಜ್ಞಾನ ಬಳಸಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಸೂಕ್ತ ಪರಿಹಾರ ನೀಡುವ ವ್ಯಕ್ತಿ ಅಥವಾ ಸಂಸ್ಥಗಳಿಗೆ ಉತ್ತೇಜನ ಹಾಗೂ ನಗರ ವ್ಯಾಪ್ತಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ವಿನೂತನ ವಿಧಾನಗಳಿಗೆ 50 ಲಕ್ಷ ರು. ಕಾಯ್ದಿರಿಸಲಾಗಿದೆ.

ರಾಷ್ಟ್ರ ಧ್ವಜಗಳ ನಿರ್ವಹಣೆ: ಕದ್ರಿಯಲ್ಲಿ ನಿರ್ಮಾಣವಾಗಿರುವ ಹಾಗೂ ಟಾಗೋರ್‌ ಪಾರ್ಕ್ನಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್‌ ಗಾತ್ರದ ರಾಷ್ಟ್ರ ಧ್ವಜಗಳ ವಾರ್ಷಿಕ ನಿರ್ವಹಣೆಯನ್ನು ಪಾಲಿಕೆಯಿಂದ ಮಾಡಲಾಗುವುದು. ಪ್ರತಿ ತಿಂಗಳು ರಾಷ್ಟ್ರ ಧ್ವಜ ಬದಲಾವಣೆಯೊಂದಿಗೆ ಸಮರ್ಪಕ ನಿರ್ವಹಣೆಗಾಗಿ 12 ಲಕ್ಷ ರು. ಕಾಯ್ದಿರಿಸಲಾಗಿದೆ.

ವಿಷನ್‌ 2032: ಮಂಗಳೂರು ನಗರವನ್ನು 2032ರ ವೇಳೆಗೆ ಸುಸಜ್ಜಿತ ಹಾಗೂ ನವೀನ ಮಾದರಿಯ ಸೌಕರ್ಯಗಳನ್ನು ಹೊಂದಿದ ಪ್ರಥಮ ಮಾದರಿ ನಗರವನ್ನಾಗಿಸಲು ಸ್ವಚ್ಛ ಮಂಗಳೂರು ಪರಿಕಲ್ಪನೆಯಡಿ ಸರ್ವತೋಮುಖ ಅಭಿವೃದ್ಧಿಗಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 30 ಲಕ್ಷ ರು. ಮೀಸಲಿಡಲಾಗಿದೆ.

ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌, ಕಂದಾಯ ಅಧಿಕಾರಿ (ಆಡಳಿತ) ಅಕ್ಷತಾ ಇದ್ದರು.

‘ಸ್ವಚ್ಛ ವಾಹಿನಿ’ ವಿಶೇಷ ಕಾರ್ಯಪಡೆ: ನಗರದ ಸ್ವಚ್ಛತೆಯನ್ನು ಖಾತರಿಪಡಿಸುವುದು ಹಾಗೂ ತ್ಯಾಜ್ಯ ಸುರಿಯುವ ಸ್ಥಳಗಳಲ್ಲಿ ಜಿಪಿಎಸ್‌ ಮತ್ತು ಸಮಯ ಮುದ್ರಿತ ಛಾಯಾಚಿತ್ರದೊಂದಿಗೆ ಸಾರ್ವಜನಿಕರು ತಮ್ಮ ದೂರನ್ನು ಪಾಲಿಕೆಯ ಅಧಿಕೃತ ವಾಟ್ಸಾಪ್‌ ಸಂಖ್ಯೆಗೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ಅವಧಿಯಲ್ಲಿ ದೂರು ನೀಡಿದರೆ, ದೂರು ನೀಡಿದ 6 ಗಂಟೆಯೊಳಗೆ ತೆರವುಗೊಳಿಸಲು ‘ಸ್ವಚ್ಛವಾಹಿನಿ’ ಎಂಬ ವಿಶೇಷ ಕಾರ್ಯಪಡೆಯನ್ನು ರಚಿಸಲಾಗುತ್ತದೆ.

ಇದಕ್ಕಾಗಿ ಪ್ರತ್ಯೇಕ ವಾಟ್ಸಾಪ್‌ ಸಂಖ್ಯೆಯನ್ನು ಶೀಘ್ರವೇ ಪ್ರಕಟಿಸಲಾಗುವುದು. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲೂ ಎಲ್ಲೆಂದರಲ್ಲಿ ಕಸ ಸುರಿಯುವವರ ವಿರುದ್ಧ ದಂಡವನ್ನು ಹೆಚ್ಚಿಸಿ ಎಚ್ಚರಿಕೆ ಮೂಡಿಸುವ ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಡಳಿತಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದರು.

22 ಕಿ.ಮೀ. ಕಡಲ ತೀರ ರಸ್ತೆಗೆ ಡಿಪಿಆರ್‌: ಕರಾವಳಿಯ ಮೂರು ಜಿಲ್ಲೆಗಳನ್ನು ಒಳಗೊಂಡು ಈಗಾಗಲೇ ತಲಪಾಡಿಯಿಂದ ಕಾರವಾರದವರೆಗಿನ ಕರಾವಳಿ ತೀರದ ರಸ್ತೆಯನ್ನು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ 22 ಕಿ.ಮೀ. ಉದ್ದದ ಕಡಲ ತೀರವನ್ನು ಅತ್ಯಾಧುನಿಕ ಮಾದರಿಯ ರಸ್ತೆಯನ್ನಾಗಿಸಲು ಪ್ರಥಮ ಹಂತದ ವಿಸ್ತೃತಾ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ನಿರ್ಧರಿಸಲಾಗಿದೆ ಎಂದು ದರ್ಶನ್‌ ಎಚ್‌.ವಿ. ತಿಳಿಸಿದರು.