ಮಂಗಳೂರು: ಜಿಲ್ಲೆಯ ಪುರಾತನ ಕ್ಷೇತ್ರಗಳಲ್ಲಿ ಒಂದಾದ ಸೂಟರ್‌ಪೇಟೆ ಶ್ರೀ ಕೋರ್‍ದಬ್ಬು ದೈವಸ್ಥಾನದಲ್ಲಿ ಮಾರ್ಚ್ 7ರಿಂದ 10ರವರೆಗೆ ವರ್ಷಾವಧಿ ನೇಮೋತ್ಸವ ಹಲವು ವಿಧಿ- ವಿಧಾನಗಳೊಂದಿಗೆ ನಡೆಯಲಿದೆ.ಮಾ.7ರಂದು ಬೆಳಗ್ಗೆ ಹೋಮದೊಂದಿಗೆ ನೇಮೋತ್ಸವಕ್ಕೆ ಚಾಲನೆ ದೊರೆಯಲಿದೆ. ಬಳಿಕ ಶ್ರೀ ಬಬ್ಬುಸ್ವಾಮಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ದರ್ಶನ ಸೇವೆಯೊಂದಿಗೆ ಭಂಡಾರ ಏರುವುದು. ಮಧ್ಯಾಹ್ನ ಸ್ಥಳದ ಗುಳಿಗ ದೈವದ ನೇಮ ನಡೆಯಲಿದ್ದು, ರಾತ್ರಿ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ನೇಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಮಾ.8ರಂದು ಸಂಜೆ ರಾಹು ಗುಳಿಗ ನೇಮ ಹಾಗೂ ರಾತ್ರಿ ಶ್ರೀ ಪಂಜುರ್ಲಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಮಾ.9ರಂದು ಮಧ್ಯಾಹ್ನ ಧರ್ಮದೈವದ ನೇಮ, ರಾತ್ರಿ ಸುಬ್ಬಿಗುಳಿಗ ಹಾಗೂ ಸುಬ್ಬಮ್ಮ ನೇಮೋತ್ಸವ ಜರುಗಲಿದೆ. ಮಾ.10ರಂದು ಮಧ್ಯಾಹ್ನ ಸಂಕಳೆ ಗುಳಿಗ ನೇಮ ನಡೆಯಲಿದ್ದು, ರಾತ್ರಿ ಶ್ರೀ ಕೊರಗಜ್ಜ ದೈವದ ನೇಮ ಹಾಗೂ ಭಂಡಾರ ಇಳಿಯುವುದರೊಂದಿಗೆ ನಾಲ್ಕು ದಿನಗಳ ನೇಮೋತ್ಸವ ಸಂಪನ್ನಗೊಳ್ಳಲಿದೆ.ಮಾ.6ರಂದು ಆಶ್ಲೇಷಾ ಪೂಜೆ, ಸತ್ಯನಾರಾಯಣ ಪೂಜೆ: ನೇಮೋತ್ಸವಕ್ಕೂ ಮುನ್ನ ಮಾರ್ಚ್ 6ರಂದು ಬೆಳಗ್ಗೆ 10 ಗಂಟೆಗೆ ದೈವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ನಾಗ ದೇವರಿಗೆ ಆಶ್ಲೇಷಾ ಪೂಜೆ, ತಂಬಿಲ ಸೇವೆ ಹಾಗೂ ಪಂಚಾಮೃತ ಅಭಿಷೇಕ ನಡೆಯಲಿದೆ. ವರ್ಷಂಪ್ರತಿ ನಡೆಯುವಂತೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಧರ್ಮದರ್ಶಿ ಭಾಸ್ಕರ ಐತಾಳ್ ಪೌರೋಹಿತ್ಯದಲ್ಲಿ ಮಧ್ಯಾಹ್ನ 12 ಗಂಟೆಗೆ ನೆರವೇರಲಿದ್ದು ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7.00 ಗಂಟೆಗೆ ವಿಜಯ ಫ್ರೆಂಡ್ಸ್ ಸರ್ಕಲ್ ಸೂಟರ್‌ಪೇಟೆ ಪ್ರಾಯೋಜಕತ್ವದಲ್ಲಿ “ನೃತ್ಯ ಗಾನ ಸಿಂಚನ” ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.ನೇಮೋತ್ಸವದ ನಾಲ್ಕು ದಿನಗಳಲ್ಲಿಯೂ ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಾನುಗ್ರಹ ಪಡೆಯುವಂತೆ ದೇವಸ್ಥಾನದ ಗುರಿಕಾರ ಎಸ್. ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.