ಮಂಗಳೂರು ನಗರದಲ್ಲಿ ಒಳಚರಂಡಿ ಅವ್ಯವಸ್ಥೆ ಕುರಿತಂತೆ ಸಾರ್ವಜನಿಕವಾಗಿ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿರುವಂತೆಯೇ ಮಹಾನಗರ ಪಾಲಿಕೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಫೋನ್ ಇನ್
ಮಂಗಳೂರು: ಮಂಗಳೂರು ನಗರದಲ್ಲಿ ಒಳಚರಂಡಿ ಅವ್ಯವಸ್ಥೆ ಕುರಿತಂತೆ ಸಾರ್ವಜನಿಕವಾಗಿ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿರುವಂತೆಯೇ ಮಹಾನಗರ ಪಾಲಿಕೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲೂ ದೂರುಗಳ ಸರಮಾಲೆಯೇ ವ್ಯಕ್ತವಾಗಿದೆ. ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿ ದರ್ಶನ್ ಅಧ್ಯಕ್ಷತೆಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರು ಚರಂಡಿಯಲ್ಲಿ ಮಳೆ ನೀರು, ಫ್ಲ್ಯಾಟ್, ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು (ಒಳಚರಂಡಿ) ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿಬಂದಿದೆ. ಸುರತ್ಕಲ್ ಮುಕ್ಕದ ವಾರ್ಡ್ ನಂ. 1ರ ಚರ್ಚ್ ಮುಂಭಾಗದ ತೆರೆದ ನೀರಿನ ಚರಂಡಿಯಲ್ಲಿ ಸಮೀಪದ ಫ್ಲ್ಯಾಟ್‌ಗಳ ಕೊಳಚೆ ನೀರು ಬಿಡಲಾಗುತ್ತಿದೆ. ಈ ಬಗ್ಗೆ ಎರಡು ಮೂರು ಬಾರಿ ದೂರು ನೀಡಲಾಗಿದ್ದರೂ ಕ್ರಮ ಆಗಿಲ್ಲ. ಈ ಚರಂಡಿ ಸಮೀಪವೇ ಬಸ್ ನಿಲ್ದಾಣವಿದೆ. ಸಾವಿರಾರು ಮಕ್ಕಳು, ನಾಗರಿಕರು ಈ ಬಸ್ ನಿಲ್ದಾಣಕ್ಕೆ ಬರುವಾಗ ಈ ಕೊಳಚೆ ನೀರಿನ ತೊಂದರೆಯನ್ನು ಅನುಭವಿಸಬೇಕಾಗಿದೆ ಎಂದು ಫಾ. ಸ್ಟ್ಯಾನ್ಲಿ ಪಿಂಟೋ ಎಂಬವರು ದೂರಿದರು.ಯೆಯ್ಯಾಡಿಯ ಸುಭಾಶಿನಿ ಭಟ್ ಮಾತನಾಡಿ, ಕದ್ರಿ ಪದವು ಬಳಿ 40 ಮನೆಗಳಿದ್ದು, ಪಾಲಿಕೆಯಿಂದ ಒಳಚರಂಡಿ ವ್ಯವಸ್ಥೆ ಮಾಡಲಾಗಿಲ್ಲ. 20 ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುರತ್ಕಲ್ ಭಾಗದಲ್ಲಿ ಯುಜಿಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಸ್ಥಳೀಯರು 25 ವರ್ಷಗಳಿಂದ ಈ ಬಗ್ಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ನವೀನ್ ಬೈಕಂಪಾಡಿ ಎಂಬವರು ದೂರಿದರು.ಈ ದೂರುಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಫ್ಲ್ಯಾಟ್‌ಗಳು, ವಸತಿ ಸಮುಚ್ಚಯಗಳಿಗೆ ಒಳಚರಂಡಿ ನೀರು ಮಳೆ ನೀರು ಚರಂಡಿಗೆ ಹರಿಸದಿರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಈ ಬಗ್ಗೆ ಅಭಿಯಾನವನ್ನೂ ಮಂಗಳೂರು ನಗರ ಪಾಲಿಕೆಯಿಂದ ನಡೆಸಲಾಗುತ್ತಿದೆ. ತ್ಯಾಜ್ಯ ನೀರನ್ನು ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಮೂಲಕ ಸಂಸ್ಕರಿಸಲು ಅಪಾಟ್ರ್ಮೆಂಟ್‌ಗಳಿಗೆ ನಿರ್ದೇಶಿಸಲಾಗಿದೆ. ಉಲ್ಲಂಘಿಸುವವರ ವಿರುದ್ಧ ಎಂಸಿಸಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುತ್ತಿದೆ. ಪಾಲಿಕೆ ಆಯುಕ್ತರು ಅಪಾರ್ಟ್‌ಮೆಂಚ್ ಸಂಘಗಳ ಸಭೆಯನ್ನು ಸಹ ಕರೆದು, ಮಳೆನೀರಿನ ಚರಂಡಿಗಳಿಗೆ ಒಳಚರಂಡಿ ಬಿಡದಂತೆ ನಿರ್ದೇಶಿಸಿದ್ದಾರೆ. ಅಪಾರ್ಟ್‌ಮೆಂಟ್‌ಗಳು ತಮ್ಮದೇ ಆದ ಪರಿಹಾರ ಕ್ರಮಗಳನ್ನು ಅಳವಡಿಸಬೇಕಾಗಿದೆ ಎಂದರು. ಒಟ್ಟಾರೆಯಾಗಿ ನಗರದ ಕೆಲವೆಡೆ ಹಳೆಯ ಒಳಚರಂಡಿ ವ್ಯವಸ್ಥೆ ಶಿಥಿಲಾವಸ್ಥೆಯಲ್ಲಿರುವ ಕಾರಣ ನಗರಕ್ಕೆ ಸಮಗ್ರ ಹೊಸ ಒಳಚರಂಡಿ ವ್ಯವಸ್ಥೆಗಾಗಿ 1,200 ಕೋಟಿ ರು.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದರು.ಪಾದಚಾರಿ ಸೇತುವೆ ಪ್ರಸ್ತಾಪ:ಜಪ್ಪಿನಮೊಗರುವಿನಲ್ಲಿ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಉಳ್ಳಾಲ ಹೊಯಿಗೆಯನ್ನು ಸಂಪರ್ಕಿಸುವ ಪಾದಚಾರಿ ಸೇತುವೆ ನಿರ್ಮಿಸುವ ಪ್ರಸ್ತಾವನೆಗೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ)ಯು ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಅನುಮತಿಗಾಗಿ ಪರಿವೇಶ್ ಪೋರ್ಟಲ್ ಮೂಲಕ ವರದಿ ಸಲ್ಲಿಸಿದೆ ಎಂದು ಪಾಲಿಕೆ ಆಡಳಿತಾಧಿಕಾರಿ ದರ್ಶನ್ ಅವರು ಡಾಲ್ಫಿ ವೇಗಸ್ ಪ್ರಶ್ನೆಗೆ ಉತ್ತರಿಸಿದರು.
ಸೇತುವೆ ಕಾಮಗಾರಿ ಯೋಜನೆಗೆ ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಸಮಿತಿಯಿಂದ ಅನುಮೋದನೆ ಕಡ್ಡಾಯವಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಕೆಸಿಎಸ್‌ಎಂಸಿ ಸಭೆ ನಡೆಯುವ ಸಾಧ್ಯತೆಯಿದೆ. ಸಿಆರ್‌ಝಡ್ ಅನುಮೋದನೆ ಪಡೆದ ನಂತರ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಕಂದಾಯ ಅಧಿಕಾರಿ ಅಕ್ಷತಾ ಮತ್ತಿತರರಿದ್ದರು. ಬಾಕ್ಸ್---
ನೀರಿನ ಸಮಸ್ಯೆ ಬಗ್ಗೆ ಜ.29ರಂದು ಅಧಿಕಾರಿಗಳ ಸಭೆನಗರದ ಸೈಮನ್ ಲೇನ್‌ನಿಂದ ಕರೆ ಮಾಡಿದ ನಿತ್ಯಾ ಎಂಬವರು ಹಲವು ಮನೆಗಳಿಗೆ ಕಳೆದ ಎರಡು ತಿಂಗಳಿನಿಂದ ನೀರು ಬರುತ್ತಿಲ್ಲ. ನೀರಿಗಾಗಿ ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸುವಂತಗಿದೆ ಎಂದು ದೂರಿದರು.
ಅಧಿಕಾರಿಗಳಿಂದ ಉತ್ತರ ಪಡೆದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಲಸಿರಿ ಯೋಜನೆಯಡಿಯಲ್ಲಿ ಹಾಕಲಾದ ನೀರು ಸರಬರಾಜು ಜಾಲಕ್ಕೆ ಸಂಪರ್ಕ ಕಲ್ಪಿಸಿ ಮೂರು ದಿನಗೊಳಗೆ ನೀರು ಪೂರೈಕೆ ಆರಂಭಿಸಲಾಗುವುದು ಎಂದರು. ಚೊಕ್ಕಬೆಟ್ಟುವಿನ ಹಮೀದ್ ಎಂಬವರು ಕೂಡಾ ಜಲಸಿರಿಯಡಿಯಲ್ಲಿ 24X7 ನೀರು ಸರಬರಾಜು ಇದೆ ಎಂದು ಹೇಳಿಕೊಂಡರೂ, ಈ ಪ್ರದೇಶಕ್ಕೆ ಪ್ರತಿ ಮೂರು ದಿನಗಳಿಗೊಮ್ಮೆ ಮಾತ್ರ ನೀರು ಕೆಲವು ಗಂಟೆ ಮಾತ್ರವೇ ಬರುತ್ತಿದೆ ಎಂದು ದೂರಿದರು.ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಜನಸಂಖ್ಯೆಯ ಬೆಳವಣಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ಹೆಚ್ಚಳದಿಂದಾಗಿ ನೀರು ಸರಬರಾಜು ಯಾವಾಗಲೂ ಸವಾಲಾಗಿದೆ. ಈಗ, ನೀರು ಸರಬರಾಜಿನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು. ಜಿಲ್ಲೆಯಾದ್ಯಂತ ನೀರಿನ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಸಭೆ ಗುರುವಾರ ನಡೆಯಲಿದೆ ಎಂದು ಅವರು ಹೇಳಿದರು.
----