ಮಂಗಳೂರು ವೈದ್ಯ ದಂಪತಿ ಸಂಶೋಧನೆಗೆ ವಿಶ್ವ ಮನ್ನಣೆ

| Published : Oct 21 2025, 01:00 AM IST

ಸಾರಾಂಶ

ವಿಶ್ವದ ಅಪಾಯಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿರುವ ಟಿಬಿ (ಟ್ಯೂಬರ್‌ ಕ್ಯುಲಾಸಿಸ್‌) ಕುರಿತು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಂಗಳೂರಿನ ವೈದ್ಯ ದಂಪತಿ ಡಾ. ಅನುರಾಗ್ ಭಾರ್ಗವ್ ಮತ್ತು ಡಾ. ಮಾಧವಿ ಭಾರ್ಗವ್ ಅವರ ಸಂಶೋಧನೆಯ ಆಧಾರದಲ್ಲಿ ಈ ಮಾರ್ಗಸೂಚಿ ಬಿಡುಗಡೆಯಾಗಿದೆ ಎನ್ನುವುದು ವಿಶೇಷ.

ಟಿಬಿ ನಿರ್ವಹಣೆ ಬಗ್ಗೆ ಡಾ.ಭಾರ್ಗವ್‌ ದಂಪತಿ ರಿಸರ್ಚ್‌, ಇದರ ಆಧಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಕನ್ನಡಪ್ರಭ ವಾರ್ತೆ ಮಂಗಳೂರು

ವಿಶ್ವದ ಅಪಾಯಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿರುವ ಟಿಬಿ (ಟ್ಯೂಬರ್‌ ಕ್ಯುಲಾಸಿಸ್‌) ಕುರಿತು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಂಗಳೂರಿನ ವೈದ್ಯ ದಂಪತಿ ಡಾ. ಅನುರಾಗ್ ಭಾರ್ಗವ್ ಮತ್ತು ಡಾ. ಮಾಧವಿ ಭಾರ್ಗವ್ ಅವರ ಸಂಶೋಧನೆಯ ಆಧಾರದಲ್ಲಿ ಈ ಮಾರ್ಗಸೂಚಿ ಬಿಡುಗಡೆಯಾಗಿದೆ ಎನ್ನುವುದು ವಿಶೇಷ.

ಡಾ. ಅನುರಾಗ್ ಭಾರ್ಗವ್ ಅವರು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೆಡಿಸಿನ್ ವಿಭಾಗದ ಪ್ರೊಫೆಸರ್. ಕಳೆದ ಹಲವು ವರ್ಷಗಳಿಂದ ಟಿಬಿ ಮತ್ತು ಅನಾರೋಗ್ಯಕರ ಪೌಷ್ಟಿಕ ಆಹಾರದ ಸಂಬಂಧದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಡಾ. ಮಾಧವಿ ಭಾರ್ಗವ್ ಅವರು ಯೆನೆಪೋಯ ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರೊಫೆಸರ್. ಈ ದಂಪತಿಯ ಸಂಶೋಧನೆಯು ಟಿಬಿ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ.

ಭಾರತದಲ್ಲಿ ಪ್ರತಿವರ್ಷ ಸಾವಿರಾರು ಮಂದಿ ಟಿಬಿಯಿಂದ ಮರಣ ಹೊಂದುತ್ತಾರೆ. ಅನಾರೋಗ್ಯಕರ ಪೌಷ್ಟಿಕ ಆಹಾರವೇ ಇದಕ್ಕೆ ಪ್ರಮುಖ ಕಾರಣ ಎನ್ನುವುದು ಡಾ. ಅನುರಾಗ್ ಭಾರ್ಗವ್ ಸಂಶೋಧನೆಯ ತಿರುಳು. ಇವರ ಸಂಶೋಧನೆಯು ಟಿಬಿ ಚಿಕಿತ್ಸೆಯಲ್ಲಿ ಪೌಷ್ಟಿಕ ಆಹಾರ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ದೃಢಪಡಿಸಿದ್ದು, ಇದರ ಆಧಾರದಲ್ಲೇ ಡಬ್ಲ್ಯೂಎಚ್​​​ಒ, ಟಿಬಿ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಆಹಾರ ಮಾರ್ಗಸೂಚಿಯನ್ನು ಶಿಫಾರಸು ಮಾಡಿದೆ. 2017ರಲ್ಲಿ ಭಾರತದ ರಾಷ್ಟ್ರೀಯ ಟಿಬಿ ಕಾರ್ಯಕ್ರಮ (ಎನ್‌ಟಿಇಪಿ) ಈ ವೈದ್ಯ ದಂಪತಿಯನ್ನು ಇತರ ತಜ್ಞರೊಂದಿಗೆ ಟಿಬಿ ನಿರ್ಮೂಲನೆಗೆ ಮಾರ್ಗಸೂಚಿ ರೂಪಿಸಲು ಆಹ್ವಾನಿಸಿತ್ತು. ಈ ಮಾರ್ಗಸೂಚಿಯ ಪ್ರಕಾರ ಎಲ್ಲ ಟಿಬಿ ರೋಗಿಗಳು ಚಿಕಿತ್ಸೆಗೆ ದಾಖಲಾಗಬೇಕು ಮತ್ತು ಅವರಿಗೆ ಪೌಷ್ಟಿಕ ಆಹಾರದ ಕಿಟ್‌ ನೀಡಬೇಕು ಎಂದು ಹೇಳಲಾಗಿತ್ತು.

2024ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಟಿಬಿ ಕುರಿತಾದ 2013ರ ಮಾರ್ಗಸೂಚಿಗಳನ್ನು ಪರಿಷ್ಕೃತಗೊಳಿಸಲು ತಾಂತ್ರಿಕ ಸಲಹೆಗಾರರನ್ನಾಗಿ ಡಾ.ಭಾರ್ಗವ್‌ ದಂಪತಿಯನ್ನು ಆಹ್ವಾನಿಸಿತ್ತು. ಅಲ್ಲಿ ಈ ವೈದ್ಯರು ರೇಷನ್ಸ್ ಟ್ರಯಲ್​​ನ ಗುಣಾತ್ಮಕ ಸಂಶೋಧನೆಯನ್ನು ಪ್ರಸ್ತುತಪಡಿಸಿದರು. ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್‌ ನೀಡಿದ್ದರಿಂದ ಔಷಧ ಸೇವನೆ ಸುಲಭವಾಯಿತು. ಅಲ್ಲದೆ, ರೋಗಿಗಳ ಕುಟುಂಬ ಸದಸ್ಯರ ಆರೋಗ್ಯ ಸಾಮರ್ಥ್ಯವೂ ಹೆಚ್ಚಾಗಿದ್ದನ್ನು ಈ ಸಂಶೋಧನೆ ದೃಢಪಡಿಸಿತ್ತು. ಇದರ ಆಧಾರದಲ್ಲೇ ಡಬ್ಲ್ಯುಎಚ್‌ಒ ಅ.7ರಂದು ನೂತನ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ಈ ಕುರಿತು ಮಾತನಾಡಿದ ಡಾ. ಅನುರಾಗ್ ಭಾರ್ಗವ್, ಟಿಬಿಗೆ ರೋಗ ನಿರೋಧಕ ಶಕ್ತಿ ಅತ್ಯಂತ ಮುಖ್ಯ. ಹಾಗಾಗಿ ಪೌಷ್ಟಿಕಾಹಾರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕರ್ನಾಟಕದಲ್ಲಿ ವಾರ್ಷಿಕ 60,000 ಟಿಬಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಶೇ.7ರಷ್ಟು ಮರಣ ದರವಿದೆ. ರೋಗಿಗಳು ಮತ್ತು ಕುಟುಂಬದವರಿಗೆ 6 ತಿಂಗಳು ಪೌಷ್ಟಿಕ ಆಹಾರ ಸಹಾಯ ನೀಡಿದರೆ, ಟಿಬಿ ನಿವಾರಣೆಯಲ್ಲಿ ಅದು ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳುತ್ತಾರೆ.