ಮಂಗಳೂರು: ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ಆಶ್ರಯದಲ್ಲಿ ಶೈಕ್ಷಣಿಕ ಕಾರ್ಯಗಾರವು ಸಂಘದ ಡಾ.ಎ.ವಿ. ರಾವ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಡಾ. ಸದಾನಂದ ಪೂಜಾರಿ ನೇತೃತ್ವದಲ್ಲಿ ಜರುಗಿತು.

ಡಾ. ಸದಾನಂದ ಪೂಜಾರಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಈ ಶೈಕ್ಷಣಿಕ ಕಾರ್ಯಗಾರವನ್ನು ಸಂಸ್ಥೆಯ ಸದಸ್ಯರ ನಿರಂತರ ವೈದ್ಯಕೀಯ ಶಿಕ್ಷಣ ಅಂಗವಾಗಿ ಆಯೋಜಿಸಲಾಗಿದೆ ಎಂದು ನುಡಿದು, ಸದಸ್ಯರು ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರು ಡಾ. ಅನಿಮೇಶ್ ಜೈನ್ ಸಂಪಾದಕ್ವದ ಸಂಘದ ವಾರ್ತಾಗೃಹ ಪತ್ರಿಕೆ “ಮೆಡಿಲೋರ್”ನ್ನು ಅನಾವರಣಗೊಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ನಗರದ ಎ.ಜೆ. ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ತಜ್ಞ ಡಾ. ರಾಘವೇಂದ್ರ ನಾಯಕ್‌ ಭಾಗವಹಿಸಿ, ಮೂತ್ರ ಪಿಂಡ ಮತ್ತು ಹೃದ್ರೋಗ ಶಾಸ್ತ್ರದಲ್ಲಿ ಇತ್ತೀಚಿಗಿನ ಬೆಳವಣಿಗೆಗಳು, ಪರಿಕಲ್ಪನೆಗಳು ಮತ್ತು ಚಿಕಿತ್ಸಾ ವಿಧಿವಿಧಾನಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ತಜ್ಞ ಡಾ. ಪ್ರದೀಪ್ ಪಿರೇರಾ ಅವರು ಹೃದಯಾಘಾತ, ವೈಫಲ್ಯ ಸಂದರ್ಭದಲ್ಲಿ ತುರ್ತು ನಿರ್ವಹಣೆ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ಮುಂಬೈ ನಗರದ ಹಿಂದುಜಾ ಆಸ್ಪತ್ರೆಯ ಅರ್ಬುದ ರೋಗ ಚಿಕಿತ್ಸಕ ಡಾ. ಮುರದ ಲಾಲ ಅವರು 42 ದಿನ ಅವಧಿಯಲ್ಲಿ ಮೌಂಟ್ ಎವೆರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಪರ್ವತಾರೋಹಣದ ಬಗ್ಗೆ ಹಾಗೂ ಎದುರಿಸಿದ ಸನ್ನಿವೇಶಗಳನ್ನು ಸಾಕ್ಷ್ಯಾಧಾರಿತ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮದ ಮೂಲಕ ತಿಳಿಸಿದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಂಘದ ಕೋಶಾಧಿಕಾರಿ ಡಾ. ಜುಲಿಯನ್ ಸಲ್ದಾನ ಉಪಸ್ಥಿತರಿದ್ದರು. ನಗರದ ರೆಡ್‌ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಗೆ ಆಯ್ಕೆಯಾದ ಡಾ. ಸತೀಶ್ ರಾವ್ ಅವರನ್ನು ಅಭಿನಂದಿಸಲಾಯಿತು. ಸಂಘದ ಚುನಾಯಿತ ಅಧ್ಯಕ್ಷ ಡಾ. ಉಲ್ಲಾಸ್ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು.

------------


ಫೋಟೊ

7ಐಎಂಎ