ಮಂಗಳೂರು: ಐವರು ಸಾಧಕರಿಗೆ ರಚನಾ ಪ್ರಶಸ್ತಿ ಪ್ರದಾನ

| Published : Oct 07 2025, 01:03 AM IST

ಸಾರಾಂಶ

ಕೆಥೋಲಿಕ್‌ ಚೆಂಬರ್‌ ಆಫ್‌ ಕಾಮರ್ಸ್‌ ಆಂಡ್‌ ಇಂಡಸ್ಟ್ರಿ ‘ರಚನಾ’ ವತಿಯಿಂದ ಐವರು ಸಾಧಕರಿಗೆ 2023-25ನೇ ಸಾಲಿನ ರಚನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಮಿಲಾಗ್ರಿಸ್‌ ಹಾಲ್‌ನಲ್ಲಿ ಭಾನುವಾರ ನಡೆಯಿತು.

ಮಂಗಳೂರು: ಕೆಥೋಲಿಕ್‌ ಚೆಂಬರ್‌ ಆಫ್‌ ಕಾಮರ್ಸ್‌ ಆಂಡ್‌ ಇಂಡಸ್ಟ್ರಿ ‘ರಚನಾ’ ವತಿಯಿಂದ ಐವರು ಸಾಧಕರಿಗೆ 2023-25ನೇ ಸಾಲಿನ ರಚನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಮಿಲಾಗ್ರಿಸ್‌ ಹಾಲ್‌ನಲ್ಲಿ ಭಾನುವಾರ ನಡೆಯಿತು.

ಆಸ್ಟಿನ್‌ ರೋಚ್‌ ಬೆಂಗಳೂರು ಅವರಿಗೆ ರಚನಾ ಎಂಟರ್‌ಪ್ರಿನರ್‌ ಪ್ರಶಸ್ತಿ, ಜಾನ್‌ ರಿಚರ್ಡ್‌ ಲೋಬೊ (ಜೆ.ಆರ್‌. ಲೋಬೊ) ಅವರಿಗೆ ರಚನಾ ಪ್ರೊಫೆಶನಲ್‌ ಪ್ರಶಸ್ತಿ, ಡಾ.ಗಾಡ್ವಿನ್‌ ರೋಡ್ರಿಗಸ್‌ ಬೆಳುವಾಯಿ ಅವರಿಗೆ ರಚನಾ ಕೃಷಿ ಪ್ರಶಸ್ತಿ, ಪ್ರತಾಪ್‌ ಮೆಂಡೋನ್ಸಾ ದುಬೈ ಅವರಿಗೆ ರಚನಾ ಎನ್‌ಆರ್‌ಐ ಎಂಟರ್‌ಪ್ರಿನರ್‌ ಪ್ರಶಸ್ತಿ, ಶೋಭಾ ಮೆಂಡೋನ್ಸಾ ದುಬೈ ಅವರಿಗೆ ರಚನಾ ಔಟ್‌ಸ್ಟ್ಯಾಂಡಿಂಗ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮುಖ್ಯ ಅತಿಥಿಯಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್‌ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಸಚಿವ ಜಾರ್ಜ್, ಸಮಾಜದಲ್ಲಿ ಕಷ್ಟದಲ್ಲಿ ಇರುವವರಿಗೆ ನೆರವಾಗುವಂತೆ ಏಸುಕ್ರಿಸ್ತರು ಸಂದೇಶ ನೀಡಿದ್ದರು.ಅವರ ತತ್ವವನ್ನು ಪಾಲಿಸಿಕೊಂಡು ಕಾಂಗ್ರೆಸ್ ತನ್ನ ಇತಿಹಾಸದುದ್ದಕ್ಕೂ ಬಡವರಿಗೆ ನೆರವಾಗಿದೆ. ಈಗಲೂ ಗ್ಯಾರಂಟಿ ಯೋಜನೆಗಳ ಮೂಲಕ ಆ ಸಂದೇಶಗಳನ್ನು ಅನುಷ್ಠಾನ ಮಾಡುತ್ತಿದೆ ಎಂದರು.

ಗೃಹಜ್ಯೋತಿ ಯೋಜನೆಯಿಂದ ಎಂದೂ ರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೋರಿಲ್ಲ. ಬದಲಾಗಿ ವಿದ್ಯುತ್ ಉಳಿತಾಯ ಆಗುತ್ತಿದೆ ಎಂದು ಸಚಿವ ಜಾರ್ಜ್ ಸ್ಪಷ್ಟಪಡಿಸಿದರು.

ಮಂಗಳೂರು ಕೆಥೋಲಿಕ್‌ ಧರ್ಮಪ್ರಾಂತ್ಯದ ಬಿಷಪ್‌ ಅತಿ.ವಂ. ಡಾ.ಪೀಟರ್‌ ಪೌಲ್‌ ಸಲ್ಡಾನಾ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ, ಯುಎಇ ಉದ್ಯಮಿ ಜಾನ್‌ ಸುನಿಲ್‌, ಬೆಂಗಳೂರು ವಿವಿ ಮಾಜಿ ಕುಲಪತಿ ಡಾ.ಸಿಂಥಿಯಾ ಮಿನೆಜಸ್‌, ರಚನಾ ಅಧ್ಯಕ್ಷ ಜಾನ್‌ ಬಿ. ಮೊಂತೆರೊ, ಕಾರ್ಯದರ್ಶಿ ವಿಜಯ್‌ ವಿ. ಲೋಬೊ ಮತ್ತು ಪದಾಧಿಕಾರಿಗಳು ಇದ್ದರು.