ಮಂಗಳೂರು: ಪ್ರಥಮ ಬೀದಿಬದಿ ವ್ಯಾಪಾರ ವಲಯ ಉದ್ಘಾಟನೆ

| Published : Dec 24 2024, 12:46 AM IST

ಸಾರಾಂಶ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಟೋನ್ಮೆಂಟ್‌ ವಾರ್ಡ್‌-46ರ ಇಂದಿರಾ ಕ್ಯಾಂಟಿನ್‌ ಬಳಿ ನಿರ್ಮಿಸಲಾದ ನಗರದ ಪ್ರಥಮ ಬೀದಿ ಬದಿ ವ್ಯಾಪಾರಸ್ಥರ ವಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸೋಮವಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಟೋನ್ಮೆಂಟ್‌ ವಾರ್ಡ್‌-46ರ ಇಂದಿರಾ ಕ್ಯಾಂಟಿನ್‌ ಬಳಿ ನಿರ್ಮಿಸಲಾದ ನಗರದ ಪ್ರಥಮ ಬೀದಿ ಬದಿ ವ್ಯಾಪಾರಸ್ಥರ ವಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸೋಮವಾರ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಮೇಯರ್‌ ಮನೋಜ್‌ ಕುಮಾರ್‌ ಕೋಡಿಕಲ್‌, ಈ ಬೀದಿ ಬದಿ ವ್ಯಾಪಾರ ವಲಯದಲ್ಲಿ ನಗರದ 93 ವ್ಯಾಪಾರಸ್ಥರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನೀರು, ಬೀದಿದೀಪ ಸಹಿತ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಹಲವು ಕಡೆ ಬೀದಿ ಬದಿ ವ್ಯಾಪಾರ ವಲಯ ನಿರ್ಮಾಣ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೀನದಯಾಳ್‌ ಉಪಾಧ್ಯಾಯ್‌ ಅವರ ಕಲ್ಪನೆಯಂತೆ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಅನಿಲ್‌ ಕುಮಾರ್‌ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಆಶ್ರಯ ನೀಡುವ ಈ ಕಾರ್ಯ ಮಾಜಿ ಮೇಯರ್‌ಗಳು, ಆಡಳಿತ- ವಿಪಕ್ಷ ಸದಸ್ಯರು, ಅಧಿಕಾರಿಗಳು, ಸಂಘದ ಸದಸ್ಯರ ಸಹಕಾರದಿಂದ ಸಾಕಾರವಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಮಾತನಾಡಿದರು. ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕದ್ರಿ ಮನೋಹರ ಶೆಟ್ಟಿ, ವೀಣಾಮಂಗಳ, ಸುಮಿತ್ರಾ, ಸರಿತಾ ಶಶಿಧರ್‌, ಪಾಲಿಕೆ ಸದಸ್ಯ ಪ್ರವೀಣ್‌ ಚಂದ್ರ ಆಳ್ವ, ಪಾಲಿಕೆ ನಾಮ ನಿರ್ದೇಶಿತ ಸದಸ್ಯ ಸತೀಶ್‌ ಪೆಂಗಾಲ್‌, ಹೇಮಂತ್‌, ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌., ಬೀದಿ ಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಇದ್ದರು.