ಭಾರತದ ಗ್ರೀನ್‌ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ಕಡಲ ಪವನ ಶಕ್ತಿ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಸರ್ಕಾರಕ್ಕೆ ಮನವಿ

ಮಂಗಳೂರು: ಭಾರತದ ಗ್ರೀನ್‌ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ಕಡಲ ಪವನ ಶಕ್ತಿ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಂಸದ ಕ್ಯಾ. ಚೌಟ, ಸಮುದ್ರ ತೀರದ ಪವನ ಶಕ್ತಿ ಉತ್ಪಾದನೆಗೆ ಮಂಗಳೂರಿನಲ್ಲಿ ವಿಫುಲ ಅವಕಾಶವಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಓಷಿಯಾನೋಗ್ರಫಿ ವರದಿಯನ್ನು ಉಲ್ಲೇಖಿಸಿ, ಭಾರತದ ಭರವಸೆಯ ಕಡಲ ಪವನ ಇಂಧನ ವಲಯ-2ರಲ್ಲಿ ಮಂಗಳೂರು ಕರಾವಳಿ ಗುರುತಿಸಿಕೊಂಡಿದ್ದು, ಪವನ ಇಂಧನ ಉತ್ಪಾದನೆಗೆ ಹೆಚ್ಚು ಪೂರಕವಾಗಿದೆ. ಇಲ್ಲಿ ಭೂಕಂಪನ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳ ಅಪಾಯ ಕಡಿಮೆ ಇರುವುದರಿಂದ ದೀರ್ಘಕಾಲದ ಪವನ ಇಂಧನ ಯೋಜನೆಗಳ ಸ್ಥಾಪನೆಗೆ ಅತ್ಯಂತ ಸೂಕ್ತ ಹಾಗೂ ಸುರಕ್ಷಿತ ಪ್ರದೇಶವಾಗಿದೆ. ಹೀಗಾಗಿ, ಮಂಗಳೂರು ಕಡಲ ತೀರವನ್ನು ಪವನ ಶಕ್ತಿ ಉತ್ಪಾದನೆ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಕ್ಯಾ. ಚೌಟ ಹೇಳಿದರು.

ಅತ್ಯುತ್ತಮ ಮೂಲಸೌಕರ್ಯ, ಬಹು ಬರ್ತ್‌ಗಳು, ಹೆಚ್ಚಿನ ಸರಕು ನಿರ್ವಹಣಾ ಸಾಮರ್ಥ್ಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ನವ ಮಂಗಳೂರು ಬಂದರಿನಲ್ಲಿದೆ. ವಿಂಡ್ ಟರ್ಬೈನ್‌ಗಳಂತಹ ಬೃಹತ್ ಯಂತ್ರೋಪಕರಣಗಳ ಸಾಗಣೆ ಮತ್ತು ಜೋಡಣೆಗೆ ಇಲ್ಲಿ ಪೂರಕ ವ್ಯವಸ್ಥೆಯಿದೆ. ಇದು ಕಡಲ ಪವನ ಇಂಧನ ಯೋಜನೆಗಳ ನಿರ್ವಹಣೆಗೆ ಒಂದು ಪ್ರಮುಖ ಲಾಜಿಸ್ಟಿಕ್‌ ನೆಲೆಯನ್ನಾಗಿ ಪರಿವರ್ತಿಸಬಹುದು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದು, 2025ರ ಆರಂಭದಲ್ಲಿ ರಾಜ್ಯದ ಗರಿಷ್ಠ ವಿದ್ಯುತ್ ಬೇಡಿಕೆಯು 18,000 ಮೆಗಾವ್ಯಾಟ್ ದಾಟಿದ್ದು, ಇಂಥಹ ಸಂದರ್ಭದಲ್ಲಿ ಪರ್ಯಾಯ ಇಂಧನ ಉತ್ಪಾದಿಸುವ ಪವನ ಶಕ್ತಿಯನ್ನು ಉತ್ತೇಜಿಸುವ ಅಗತ್ಯವಿದೆ. ಬಂಗಾಳ ಕೊಲ್ಲಿಯು ಸದಾ ಚಂಡಮಾರುತದ ಭೀತಿ ಎದುರಿಸುತ್ತಿರುವುದರಿಂದ ಅರಬ್ಬಿ ಸಮುದ್ರದ ಈ ವಲಯವು ಪವನ ಶಕ್ತಿಯ ಬಲವರ್ಧನೆಗೆ ಹೆಚ್ಚು ಸುರಕ್ಷಿತವಾಗಿದೆ ಎಂದು ಚೌಟ ಪ್ರತಿಪಾದಿಸಿದರು.