ಸಾರಾಂಶ
ನಂಬಿಯೋ (Numbeo) ಇತ್ತೀಚೆಗೆ ಬಿಡುಗಡೆ ಮಾಡಿದ 2025ರ ಮಧ್ಯಭಾಗದ ಸುರಕ್ಷತಾ ಸೂಚ್ಯಂಕದಲ್ಲಿ (Numbeo Safety Index), ಭಾರತದ ಟಾಪ್ 10 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರು ಅತ್ಯಂತ ಸುರಕ್ಷಿತ ನಗರವಾಗಿ ಪ್ರಥಮ ಸ್ಥಾನ ಪಡೆದಿದೆ.
ಮಂಗಳೂರು: ಕಡಲ ನಗರಿ ಮಂಗಳೂರು ದೇಶದಲ್ಲೇ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಜಾಗತಿಕವಾಗಿ 49ನೇ ಸ್ಥಾನ ಪಡೆದಿರುವುದು ಬಹಳ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಇದು ಕೇವಲ ಕರಾವಳಿಗೆ ಮಾತ್ರವಲ್ಲದೆ, ಜಾಗತಿಕವಾಗಿಯೂ ಮಂಗಳೂರಿನ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.ವಿಶ್ವದ ದೊಡ್ಡ ಡೇಟಾ ಸಂಗ್ರಹ ಸಂಸ್ಥೆಯಾದ ನಂಬಿಯೋ (Numbeo) ಇತ್ತೀಚೆಗೆ ಬಿಡುಗಡೆ ಮಾಡಿದ 2025ರ ಮಧ್ಯಭಾಗದ ಸುರಕ್ಷತಾ ಸೂಚ್ಯಂಕದಲ್ಲಿ (Numbeo Safety Index), ಭಾರತದ ಟಾಪ್ 10 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರು ಅತ್ಯಂತ ಸುರಕ್ಷಿತ ನಗರವಾಗಿ ಪ್ರಥಮ ಸ್ಥಾನ ಪಡೆದು ತುಳುನಾಡು ಹಾಗೂ ಕರ್ನಾಟಕದ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದ 393 ನಗರಗಳ ಪಟ್ಟಿಯಲ್ಲಿ ಮಂಗಳೂರು 74.2 ಸುರಕ್ಷತಾ ಸೂಚ್ಯಂಕ 49ನೇ ರ‍್ಯಾಂಕಿಂಗ್ ಪಡೆದುಕೊಂಡಿರುವುದು ಬಹಳ ಖುಷಿಪಡುವ ವಿಚಾರ ಎಂದು ಕ್ಯಾ. ಚೌಟ ಪ್ರತಿಕ್ರಿಯಿಸಿದ್ದಾರೆ.‘ಬ್ಯಾಕ್ ಟು ಊರಿಗೆ’ ಬನ್ನಿ..:
ಜಾಗತಿಕ ಮಟ್ಟದ ಈ ರೀತಿಯ ಮನ್ನಣೆಯು ವಿಶ್ವದೆಲ್ಲೆ ಇರುವ ನಮ್ಮೆಲ್ಲ ಯಶಸ್ವಿ ಮಂಗಳೂರಿನವರಿಗೆ ‘ಬ್ಯಾಕ್ ಟು ಊರಿಗೆ’(BackToOoru) ಬರಲು ಇನ್ನೊಂದು ಸಕಾರಣ ಹಾಗೂ ಸಕಾಲವೂ ಹೌದು. ಇಲ್ಲಿನ ವಿಪುಲ ಅವಕಾಶ-ಸಾಧ್ಯತೆಗಳನ್ನು ಬಳಸಿಕೊಳ್ಳಲು ಉತ್ತಮ ಅವಕಾಶ. ಅವರ ಕನಸುಗಳು, ಆಲೋಚನೆಗಳು, ಹೂಡಿಕೆಗಳು ಮತ್ತು ಬೆಳವಣಿಗೆಯ ನಿರೀಕ್ಷೆಗಳಿಗೆ ಮಂಗಳೂರು ನೆಚ್ಚಿನ ನಗರವಾಗಿದೆ. ಈ ಶ್ರೇಯಾಂಕ ಮಂಗಳೂರು ನಗರದ ಭವಿಷ್ಯದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಹೊಸ ದಿಕ್ಸೂಚಿ ತೆರೆದಿದ್ದು, ಎಲ್ಲ ಮಂಗಳೂರಿಗರೂ ಈ ಯಶಸ್ಸಿನಲ್ಲಿ ಭಾಗಿಯಾಗಿದ್ದು, ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನಗರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಉತ್ತೇಜನ ನೀಡಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.