ಮಂಗಳೂರಿನ ಗಣಪತಿ ವಿಗ್ರಹಕ್ಕೆ ಅಮೆರಿಕದಲ್ಲಿ ಪೂಜೆ!

| Published : Aug 20 2025, 02:00 AM IST

ಸಾರಾಂಶ

ಮಂಗಳೂರಿನ ನಂಟು ಇರುವ ಶೆರ್ಲೇಕರ್ ಫ್ಯಾಮಿಲಿ ಅಮೆರಿಕದಲ್ಲಿ ಉದ್ಯಮ ನಡೆಸುತ್ತಿದೆ. ಗಣೇಶ ಚತುರ್ಥಿ ಸಂದರ್ಭ ಈ ಕುಟುಂಬ ಅಮೆರಿಕದಲ್ಲೇ ಗಣೇಶನ ಮೂರ್ತಿ ಇರಿಸಿ ಪೂಜೆ ಮಾಡುತ್ತದೆ‌. ಆದರೆ ಅಲ್ಲಿ ಪೂಜೆಗೊಳ್ಳುವ ಗಣಪನ ವಿಗ್ರಹ ಮಾತ್ರ ಕಳೆದ 28 ವರ್ಷಗಳಿಂದ ಮಣ್ಣಗುಡ್ಡ ಮೋಹನ್ ರಾವ್ ಕುಟುಂಬದಿಂದಲೇ ತಯಾರಾಗುತ್ತದೆ

ಮಂಗಳೂರು: ಗಾತ್ರದಲ್ಲಿ ಪುಟ್ಟದಾಗಿರುವ ಈ ಗಣಪನ ವಿಗ್ರಹ ಮಂಗಳೂರಿನಲ್ಲಿ ತಯಾರಾದರೂ ಪೂಜೆಗೊಳ್ಳುವುದು ದೂರದ ಅಮೆರಿಕದಲ್ಲಿ. ಇದೇ ಈತನ ವಿಶೇಷತೆ.

ಮಂಗಳೂರಿನಲ್ಲಿ ನಾಲ್ಕು ತಲೆಮಾರುಗಳಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿರುವ ಮಣ್ಣಗುಡ್ಡ ನಿವಾಸಿ ರಾಮಚಂದ್ರ ರಾವ್ ಅವರ ಮುಂದಾಳತ್ವದಲ್ಲಿ ಈ ಗಣಪನ ಮೂರ್ತಿ ಸಿದ್ಧಗೊಂಡಿದೆ. ಕಳೆದ 96 ವರ್ಷಗಳ ಹಿಂದೆ ರಾಮಚಂದ್ರ ರಾಯರ ತಂದೆ ದಿ.ಮೋಹನ್ ರಾವ್ ಗಣಪನ ವಿಗ್ರಹ ತಯಾರಿಕೆಯನ್ನು ಆರಂಭಿಸಿದ್ದರು. ಬಳಿಕ ಅವರ ನಾಲ್ವರು ಮಕ್ಕಳು, ಮೊಮ್ಮಕ್ಕಳು, ಇದೀಗ ಮರಿಮಕ್ಕಳು ಸೇರಿ ಗಣಪನ ಮೂರ್ತಿ ತಯಾರಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಂಗಳೂರಿನ ನಂಟು ಇರುವ ಶೆರ್ಲೇಕರ್ ಫ್ಯಾಮಿಲಿ ಅಮೆರಿಕದಲ್ಲಿ ಉದ್ಯಮ ನಡೆಸುತ್ತಿದೆ. ಗಣೇಶ ಚತುರ್ಥಿ ಸಂದರ್ಭ ಈ ಕುಟುಂಬ ಅಮೆರಿಕದಲ್ಲೇ ಗಣೇಶನ ಮೂರ್ತಿ ಇರಿಸಿ ಪೂಜೆ ಮಾಡುತ್ತದೆ‌. ಆದರೆ ಅಲ್ಲಿ ಪೂಜೆಗೊಳ್ಳುವ ಗಣಪನ ವಿಗ್ರಹ ಮಾತ್ರ ಕಳೆದ 28 ವರ್ಷಗಳಿಂದ ಮಣ್ಣಗುಡ್ಡ ಮೋಹನ್ ರಾವ್ ಕುಟುಂಬದಿಂದಲೇ ತಯಾರಾಗುತ್ತದೆ ಎನ್ನುವುದು ಗಮನಾರ್ಹ.

ಅಮೆರಿಕಗೆ ರವಾನೆಯಾಗುವ ಕಾರಣ ಸುಮಾರು ಎರಡು ಅಡಿ ಎತ್ತರದ ಗಣೇಶನ ವಿಗ್ರಹ ತಯಾರಿಸಲಾಗುತ್ತದೆ‌. ಪೂಜೆಗೊಳ್ಳುವ ಮೂರ್ತಿ ಭಗ್ನ ಆಗಬಾರದು ಎನ್ನುವ ಕಾರಣಕ್ಕೆ ಈ ಗಣಪ ಕ್ಯಾಬಿನ್ ಬ್ಯಾಗ್‌ನಲ್ಲಿ ಕುಳ್ಳಿರಿಸಿ ಅಮೆರಿಕಾಗೆ ತೆಗೆದುಕೊಂಡ ಹೋಗಲಾಗುತ್ತದೆ. ಮೂರು ದಿನಗಳ ಹಿಂದೆ ಬೆಳ್ಳಂಬೆಳಗ್ಗೆ ವಿಮಾನ ಏರಿ ಈ ಗಣಪ ಅಮೆರಿಕಾದತ್ತ ಹಾರಿದ್ದಾನೆ. ಈತ ಆ.27ರಂದು ಶೆರ್ಲೇಕರ್ ಫ್ಯಾಮಿಲಿಯಿಂದ ಕ್ಯಾಲಿಫೋರ್ನಿಯಾದಲ್ಲಿ ಪೂಜೆಗೊಳ್ಳಲಿದ್ದಾನೆ. ಶೆರ್ಲೇಕರ್ ಫ್ಯಾಮಿಲಿ ಹಾಗೂ ದಿ.ಮೋಹನ್ ರಾವ್ ಕುಟುಂಬದ ಈ ಬಂಧುತ್ವ ತಲೆಮಾರು ಕಳೆದರೂ ಹೀಗೆಯೇ ಮುಂದುವರಿದಿದೆ.