ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಸೆಂಟ್ರಲ್ - ತಿರುವನಂತಪುರ ನಡುವಿನ ವಿಸ್ತರಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಗುಜರಾತ್‌ನ ಅಹಮ್ಮದಾಬಾದ್‌ನಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ದೇಶದ ವಿವಿಧೆಡೆಯ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಸೇರಿದಂತೆ ರೈಲ್ವೆ ಇಲಾಖೆಗೆ ಸಂಬಂಧಿಸಿದ 85 ಸಾವಿರ ಕೋ.ರು. ವೆಚ್ಚದ 2,000 ರೈಲ್ವೆ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು.ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣದ ಮಳಿಗೆಗಳಲ್ಲೂ ಇದೇ ವೇಳೆ ಉದ್ಘಾಟಿಸಲಾಯಿತು.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಮಾತನಾಡಿ, ಕಾಸರಗೋಡು ತಿರುವನಂತಪುರ ನಡುವಿನ ರೈಲನ್ನು ಮಂಗಳೂರಿಗೆ ವಿಸ್ತರಣೆ ಮಾಡುವಂತೆ ರೈಲ್ವೆ ಸಚಿವರಿಗೆ ಮೊದಲು ಬೇಡಿಕೆ ಇರಿಸಿದ್ದೆ. ಸಚಿವರು ಮೊದಲು ಮಡಗಾಂವ್- ಮಂಗಳೂರು ರೈಲು ಆರಂಭಿಸುತ್ತೇವೆ. ನಂತರ ವಿಸ್ತರಿತ ರೈಲು ನೀಡುತ್ತೇವೆ ಎಂದಿದ್ದರು. ಇದೀಗ ಎರಡನೇ ವಂದೇ ಭಾರತ್ ರೈಲು ಮಂಗಳೂರಿಗೆ ಲಭಿಸಿದೆ ಎಂದರು.ಬೆಂಗಳೂರಿಗೆ ವಂದೇ ಭಾರತ್ ರೈಲು ಆರಂಭಿಸಬೇಕು ಎನ್ನುವ ದೊಡ್ಡ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಈಗಾಗಲೇ ಈ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಗಳು ನಡೆಯುತ್ತಿದೆ. ಶಿರಾಡಿಯಲ್ಲಿ 22 ಕಿ.ಮೀ. ಕಾಮಗಾರಿ ಬಾಕಿಯಿದ್ದು, ಮೇ ಅಂತ್ಯದೊಳಗೆ ಮುಗಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಬಳಿಕ ಜೂನ್‌ನಲ್ಲಿ ಮಂಗಳೂರು- ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಲಿದೆ ಎಂದರು.
ಕೇರಳ ಪ್ರವಾಸಕ್ಕೆ ಅನುಕೂಲ:ಮಂಗಳೂರು ಮತ್ತು ಕೇರಳ ಹತ್ತಿರ ಸಂಬಂಧ ಇರುವ ಪ್ರದೇಶ. ಧಾರ್ಮಿಕ ನಂಬಿಕೆಯಲ್ಲಿ ಒಂದೇ ರೀತಿಯ ಭಾವನೆಯುಳ್ಳ ಜನರು ಇಲ್ಲಿದ್ದಾರೆ. ಮಂಗಳೂರಿನಿಂದ ಶಬರಿಮಲೆ, ಗುರುವಾಯೂರು, ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನಕ್ಕೆ ಸಾಕಷ್ಟು ಮಂದಿ ಹೋಗುತ್ತಾರೆ. ಕೊಚ್ಚಿಯ ಮಾತಾ ಅಮೃತಾನಂದಮಯೀ ಮಠ, ಜಿಎಸ್‌ಬಿಗಳ ಕೇಂದ್ರ, ಮಂಗಳೂರಿನಲ್ಲಿ ಉದ್ಯಮಿಗಳಾಗಿ ಕೇರಳ ಭಾಗದ ಸಾಕಷ್ಟುಮಂದಿ ಇದ್ದಾರೆ. ಕೇರಳ- ಮಂಗಳೂರು ನಡುವಿನ ಪ್ರವಾಸಿ ಅಭಿವೃದ್ಧಿಯೂ ಸೇರಿದಂತೆ ಈ ರೈಲಿನಿಂದ ಸಾಕಷ್ಟು ಅನುಕೂಲವಾಗಿದೆ.
ವಂದೇ ಭಾರತ್ ರೈಲು 8.45 ನಿಮಿಷ ಅವಧಿಯಲ್ಲಿ ತಿರುವನಂತಪುರ ತಲುಪಲಿದ್ದು, ಇತರ ರೈಲುಗಳು 17 ಗಂಟೆಗಳ ಪ್ರಯಾಣವನ್ನು ಮಾಡಬೇಕಿದೆ. ಮಂಗಳೂರಿನಿಂದ ಬೆಳಗ್ಗೆ 6.25ಕ್ಕೆ ಹೊರಟು ಸಂಜೆ 3.05ಕ್ಕೆ ತಿರುವನಂತಪುರ ತಲುಪಲಿದೆ. ಅಲ್ಲಿಂದ ಸಂಜೆ 4.05ಕ್ಕೆ ಹೊರಟು ರಾತ್ರಿ 12.40ಕ್ಕೆ ಮತ್ತೆ ಮಂಗಳೂರಿಗೆ ತಲುಪಲಿದೆ ಎಂದರು.ಅಯೋಧ್ಯೆಗೆ ರೈಲು- ವಿಮಾನ: ಮಂಗಳೂರಿನಿಂದ ಅಯೋಧ್ಯೆಗೆ ರೈಲು ಆರಂಭಿಸುವ ಬೇಡಿಕೆಯಿದೆ, ಈಗಾಗಲೇ ರೈಲ್ವೆ ಸಚಿವರಿಗೆ ಈ ಬಗ್ಗೆ ಮನವಿ ಮಾಡಿದ್ದೇನೆ. ವೇಳಾಪಟ್ಟಿ ಸಿದ್ಧವಾಗುತ್ತಿದ್ದು, ಶೀಘ್ರ ಮಂಗಳೂರಿನಿಂದ ಅಯೋಧ್ಯೆಗೆ ರೈಲು ಆರಂಭವಾಗಲಿದೆ. ಈ ಮಧ್ಯೆ ವಿಮಾನ ಬೇಕು ಎನ್ನುವ ಬೇಡಿಕೆಯೂ ಇದೆ. ವಿಮಾನಯಾನ ಸಚಿವರಿಗೆ ಹಾಗೂ ಇಲಾಖೆ ಕಾರ್ಯದರ್ಶಿಯವರಿಗೂ ಈ ಬಗ್ಗೆ ಪತ್ರ ಬರೆಯಲಾಗಿದ್ದು, ವಯಾ ಬೆಂಗಳೂರು ಅಥವಾ ಮುಂಬಯಿ ಮೂಲಕ ವಿಮಾನ ಆರಂಭಿಸಬೇಕು ಎಂದು ಬೇಡಿಕೆ ಇರಿಸಲಾಗಿದೆ ಎಂದು ನಳಿನ್ ಕುಮಾರ್ ತಿಳಿಸಿದರು.
ವಿಧಾನ ಪರಿಪತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲ್ಘಾಟ್ ವಿಭಾಗದ ಡಿಆರ್‌ಎಂ ಆರುಣ್ ಕುಮಾರ್ ಚತುರ್ವೇದಿ, ಎಡಿಆರ್‌ಎಂ ಎಸ್. ಜಯಕೃಷ್ಣನ್ ಇದ್ದರು.