ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯನ್ನು ಈ ಸಾಲಿನಿಂದ ಇನ್ನಷ್ಟು ಸರಳೀಕೃತ ಹಾಗೂ ವಿದ್ಯಾರ್ಥಿ ಸ್ನೇಹಿಯಾಗಿ ಮಾರ್ಪಡಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಪ್ರತ್ಯೇಕ ವಿಭಾಗವನ್ನು ವಿವಿಯಲ್ಲಿ ತೆರೆಯಲಾಗಿದೆ. ಈ ವಿಭಾಗ ಸಂಪರ್ಕಿಸುವ ಮೂಲಕ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆ ಸುಲಭಗೊಳಿಸಬಹುದಾಗಿದೆ ಎಂದರು.ಕಾಯಂ ಪ್ರಾಧ್ಯಾಪಕರ ನೇಮಕ ಬೇಡಿಕೆ:
ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ವಿವಿಧ ವಿಭಾಗಗಳ ಪ್ರಾಧ್ಯಾಪಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಜತೆಗೆ ಸಂಶೋಧನಾ ಕೇಂದ್ರಗಳು ಬಡವಾಗುತ್ತಿವೆ. 2018ರ ಬಳಿಕ ನಿವೃತ್ತರಾದ ಹುದ್ದೆಗಳಿಗೆ ನೇಮಕಾತಿ ಆಗುತ್ತಿಲ್ಲ. ಇದರಿಂದ ವಿವಿ ಕ್ಯಾಂಪಸ್ ತೊಂದರೆ ಅನುಭವಿಸುತ್ತಿರುವ ಬಗ್ಗೆ ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಪತ್ರದಲ್ಲಿ ತಿಳಿಸಲಾಗಿದೆ ಎಂದು ಧರ್ಮ ತಿಳಿಸಿದರು.ಕ್ಯಾಂಪಸ್‌ನಲ್ಲಿ ಪ್ರಾಧ್ಯಾಪಕರ ಕೊರತೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದು, ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದರು.ಪಿಂಚಣಿ ಸಮಸ್ಯೆ ಇತ್ಯರ್ಥ: ಮಂಗಳೂರು ವಿ.ವಿ.ಯ 460 ಪಿಂಚಣಿದಾರರ ಸಮಸ್ಯೆ ಬಗೆಹರಿಸಲಾಗಿದ್ದು, ತಿಂಗಳ ಮೊದಲ ವಾರದಲ್ಲಿ ಪಿಂಚಣಿ ಹಣ ಸಂದಾಯವಾಗುವ ಹಂತಕ್ಕೆ ತಲುಪಿದ್ದೇವೆ. ಪಿಂಚಣಿ ನಿಧಿ ಟ್ರಸ್ಟ್ ಮೂಲಕ ಹಣ ಹೊಂದಿಸಿ ಪಿಂಚಣಿ ಹಣ ಒದಗಿಸಲಾಗುತ್ತಿದೆ ಎಂದರು.
ಅನುಮತಿ ರಹಿತ ಪ್ರವೇಶಾತಿ ಇಲ್ಲ: ಮಂಗಳೂರು ವಿವಿಗೆ ಒಳಪಟ್ಟಕಾಲೇಜುಗಳಲ್ಲಿ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಿಂದ ಅನುಮೋದನೆ ಪಡೆಯದೆ ಆರಂಭಿಸಲಾದ ಹಲವು ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ವಿವಿಯಿಂದ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಶಾಶ್ವತವಾಗಿ ಬಂದ್ ಮಾಡಲಾಗಿಲ್ಲ ಎಂದರು.ಹಿಂದಿನ ಅವಧಿಯಲ್ಲಿ ಕೆಲವು ಕಾಲೇಜುಗಳಲ್ಲಿ ಪೂರ್ವಾನುಮತಿ ಇಲ್ಲದೆ ಕೆಲವೊಂದು ಹೊಸ ಕೋರ್ಸ್‌ಗಳನ್ನು ಆರಂಭಿಸಿದ್ದು, ಅದನ್ನು ಮುಂದುವರಿಸಲು ಕಷ್ಟಸಾಧ್ಯವಾಗುತ್ತಿದೆ. ಕಳೆದ ವರ್ಷ ಇಂತಹ 6 ವಿಭಾಗಗಳನ್ನು ಸ್ಥಗಿತಗೊಳಿಸಲಾಗಿತ್ತು. ಹಿಂದಿನ ವರ್ಷ 34 ವಿಭಾಗಗಳಲ್ಲಿ 46 ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಗೆ ದಾಖಲಾತಿ ನಡೆದಿದ್ದರೆ ಈ ವರ್ಷ 25 ವಿಭಾಗಗಳ 46 ಕಾರ್ಯಕ್ರಮಗಳಿಗೆ ದಾಖಲಾತಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಯುಜಿ ಶೇ. 98.47 ಫಲಿತಾಂಶ ಪೂರ್ಣ: ವಿವಿ ವ್ಯಾಪ್ತಿಯ ಎಲ್ಲ ಪದವಿ ಕಾರ್ಯಕ್ರಮಗಳ 6 ಮತ್ತು 8ನೇ ಸೆಮಿಸ್ಟರ್ ಪರೀಕ್ಷೆಗಳು ಜು. 10ಕ್ಕೆ ಮುಕ್ತಾಯಗೊಂಡಿದ್ದು, ಜು. 18ರಂದು ಮೌಲ್ಯಮಾಪನ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗ ಹಾಗೂ ಉದ್ಯೋಗದ ಹಿತದೃಷ್ಟಿಯಿಂದ 17,347 ವಿದ್ಯಾರ್ಥಿಗಳ ಪೈಕಿ 17,076 ವಿದ್ಯಾರ್ಥಿಗಳ ಫಲಿತಾಂಶವನ್ನು ಜು. 29ರಂದು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಯುಯುಸಿಎಂಸ್ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಫಲಿತಾಂಶ ವೀಕ್ಷಿಸಬಹುದು ಎಂದು ವಿವರಿಸಿದರು.ಪಿಜಿ ಪರೀಕ್ಷೆಗಳ ಫಲಿತಾಂಶಕ್ಕೆ ಸಂಬಂಧಿಸಿ ಪರೀಕ್ಷೆ ಬರೆದ 3,939 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶ ಪ್ರಕಟ ಪ್ರಕ್ರಿಯೆ ನಡೆಯುತ್ತಿದೆ. 2024-25ನೇ ಸಾಲಿನ ಯುಜಿ ಅಂಕ ಪಟ್ಟಿಗೆ ಸಂಬಂಧಿಸಿ 17,744 ವಿದ್ಯಾರ್ಥಿಗಳಲ್ಲಿ 17,670 ಅಂಕಪಟ್ಟಿಗಳು ಮುದ್ರಣ ಆಗಿವೆ ಎಂದು ಅವರು ತಿಳಿಸಿದರು.ಆಡಳಿತ ಕುಲಸಚಿವ ಸಂತೋಷ್, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಸಿದ್ಧಲಿಂಗ ಸ್ವಾಮಿ ಇದ್ದರು. ‘ಕ್ರೀಡಾ ಅಕಾಡೆಮಿ’ಯಾಗಿ ಬೆಳಪು ವಿಜ್ಞಾನ ಸಂಶೋಧನಾ ಕೇಂದ್ರಉಡುಪಿಯ ಬೆಳಪುವಿನಲ್ಲಿ ಮಂಗಳೂರು ವಿವಿಯ ವಿಜ್ಞಾನ ಸಂಶೋಧನಾ ಕೇಂದ್ರದ ಸ್ಥಿತಿಗತಿ ಬಗ್ಗೆ ವಿಧಾನ ಪರಿಷತ್ತಿನ ಅಧೀನ ಶಾಸನ ರಚನಾ ಸಮಿತಿ ಶರವಣ ಅವರು ಭೇಟಿ ನೀಡಿ ಸಭೆ ನಡೆಸಿದ್ದ ವೇಳೆ ಮಾಹಿತಿ ನೀಡಲಾಗಿದೆ. ಅದನ್ನು ಸುಸಜ್ಜಿತ ಕೇಂದ್ರವಾಗಿ ಮಾಡುವ ಶಕ್ತಿ ವಿವಿಗೆ ಇಲ್ಲ. ಹಿರಿಯ ಪ್ರಾಧ್ಯಾಪಕರಿಲ್ಲ, ಸಂಶೋಧಕರಿಲ್ಲ. ಪ್ರಯೋಗಾಲಯ ಉಪಕರಣಗಳಿಲ್ಲ. ಅದಕ್ಕಾಗಿ ಜನಪ್ರತಿನಿಧಿಗಳ ಸಲಹೆ ಮೇರೆಗೆ ಬೆಳಪು ಕೇಂದ್ರವನ್ನು ಸುಸಜ್ಜಿತ ಕ್ರೀಡಾ ಅಕಾಡೆಮಿಯಾಗಿ ರೂಪಿಸಲು ಮನವಿ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದ ಯುವ ಸಬಲೀಕರಣ ಇಲಾಖೆಯಡಿ ಸ್ಥಳೀಯ ಯುವ ಪ್ರತಿಭೆಗಳಿಗೆ ಪೂರಕವಾಗಿ ಸರ್ಕಾರಿ ಪ್ರಾಯೋಜಿತ ಕ್ರೀಡಾ ಅಕಾಡೆಮಿ ನಿರ್ಮಾಣದ ಸಲಹೆಯನ್ನು ಸರ್ಕಾರಕ್ಕೆ ಮಾಡಲಾಗುತ್ತಿದೆ ಎಂದು ಧರ್ಮ ತಿಳಿಸಿದರು.