ಸವಾಲಿಗೆ ಪರ್ಯಾಯವಾಗಿ ತಯಾರಾಗುವುದು ಅಗತ್ಯ: ಡಾ.ಸಿಬಂತಿ

| Published : May 10 2025, 01:19 AM IST

ಸಾರಾಂಶ

ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಡಾ. ಯು ಆರ್ ರಾವ್ ಸಭಾಂಗಣದಲ್ಲಿ ‘ಕನ್ನಡ ಮಾಧ್ಯಮ ಕ್ಷೇತ್ರ-ಅವಕಾಶಗಳು ಮತ್ತು ಕೌಶಲಗಳು’ ವಿಷಯಾಧಾರಿತವಾಗಿ ಮೂರು ದಿನಗಳಿಂದ ನಡೆದ ರಾಷ್ಟ್ರೀಯ ಕಾರ್ಯಾಗಾರ ಶುಕ್ರವಾರ ಸಮಾರೋಪಗೊಂಡಿತು.

ಮಂಗಳೂರು ವಿವಿ: ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಸಮಾರೋಪಕನ್ನಡಪ್ರಭ ವಾರ್ತೆ ಉಳ್ಳಾಲ

ಮಾಧ್ಯಮ ಕ್ಷೇತ್ರಗಳಲ್ಲಿ ಇಂದಿಗೂ ವಿಪುಲ ಅವಕಾಶಗಳಿವೆ. ಆದರೆ ಇಂದಿನ ಆಧುನಿಕತೆಯ ಸವಾಲು, ಆತಂಕದ‌ ನಡುವೆ ಇದಕ್ಕೆ ಪೂರಕವಾಗಿ ನಮ್ಮೊಳಗೆ ಜ್ಞಾನ, ಕೌಶಲಗಳ ಜೊತೆಗೆ ಸೃಜನಶೀಲತೆ ಬೆಳೆಸಿಕೊಂಡು ಮುನ್ನಡೆಯಬೇಕಾದ ಅನಿವಾರ್ಯತೆ ಇದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಹೇಳಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಪ್ರಧಾನಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆ ಪ್ರಾಯೋಜಕತ್ವದಲ್ಲಿ ವಿಶ್ವವಿದ್ಯಾನಿಲಯದ ಡಾ. ಯು ಆರ್ ರಾವ್ ಸಭಾಂಗಣದಲ್ಲಿ ‘ಕನ್ನಡ ಮಾಧ್ಯಮ ಕ್ಷೇತ್ರ-ಅವಕಾಶಗಳು ಮತ್ತು ಕೌಶಲಗಳು’ ವಿಷಯಾಧಾರಿತವಾಗಿ ಮೂರು ದಿನಗಳಿಂದ ನಡೆದ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ನಾವೀಗ ಕೃತಕ ಬುದ್ಧಿಮತ್ತೆ ಕಾಲದಲ್ಲಿದ್ದೇವೆ. ಅದು ಬರಿ ಲೇಖನ ಮಾತ್ರವಲ್ಲ ಕವನವನ್ನೂ ಬರೆಯುವುದರಿಂದ ಹಿಡಿದು ಎಲ್ಲವನ್ನು ಪರ್ಯಾಯವಾಗಿ ಮಾಡಿಕೊಡುವ ಹಂತಕ್ಕೆ ಬಂದಿದೆ. ನಮ್ಮ ಕೆಲಸಗಳನೆಲ್ಲ ಅದು ಕಸಿಯುವ ಆತಂಕವೂ ಇದೆ. ಹಿಂದೆ ಕಂಪ್ಯೂಟರ್ ಬಂದಾಗಲೂ ಉದ್ಯೋಗ ಕಸಿಯುವ ಆತಂಕ ಎದುರಾಗಿತ್ತು. ಎಲ್ಲಾ ಸವಾಲಿಗೆ ಪರ್ಯಾಯವಾಗಿ ತಯಾರಾಗಬೇಕಾದ ಅಗತ್ಯವಿದೆ ಎಂದರು.ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕತೆಯಲ್ಲಿ ಬಹು ಕೌಶಲ್ಯ, ಹೊಸತನದೊಂದಿಗೆ ಬೆಳೆಯಬೇಕಾದ ಅನಿವಾರ್ಯತೆ ಇದೆ ಎಂದರು.ಪ್ರಾಧ್ಯಾಪಕ ಡಾ.ಮಾಧವ ಎಂ.ಕೆ. ಮಾತನಾಡಿ, ಮೂರು ದಿನಗಳ ಕಾಲ ನಡೆದ ಕಾರ್ಯಾಗಾರ ಅರ್ಥಪೂರ್ಣವಾಗಿದೆ. ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಿದೆ ಎಂದರು.ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಮಾಧ್ಯಮ ಪಾತ್ರ ಮಹತ್ತರವಾದುದು. ಈ ಕ್ಷೇತ್ರದಲ್ಲಿ ದುಡಿಯಬೇಕಾದರೆ ಬಹಳ ಮುಖ್ಯ ಎಚ್ಚರಿಕೆಯೂ ಇರಬೇಕು ಜೊತೆಗೆ ನಮ್ಮ ಬರವಣಿಗೆಯೂ ಜವಾಬ್ಧಾರಿಯುತವಾಗಿರಬೇಕು ಎಂದರು.

ಪ್ರಾಧ್ಯಾಪಕ ಡಾ.ನಾಗಪ್ಪ ಗೌಡ ಉಪಸ್ಥಿತರಿದ್ದರು.

ಕಾರ್ಯಾಗಾರದ ಸಂಚಾಲಕ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸಕ ಡಾ.ಯಶುಕುಮಾರ್ ನಿರೂಪಿಸಿದರು. ಕಾರ್ಯಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.