ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಗಣೇಶೋತ್ಸವ ಎಂದರೆ ದೇಶಾದ್ಯಂತ ಸಡಗರ- ಸಂಭ್ರಮ. ಈ ಸಂದರ್ಭ ಗಣೇಶ ವಿಗ್ರಹಗಳಿಗೆ ಎಲ್ಲಿಲ್ಲದ ಬೇಡಿಕೆ. ಆದರೆ ದೂರದ ಅಮೆರಿಕ ದೇಶದ ಕ್ಯಾಲಿಫೋರ್ನಿಯಾದಲ್ಲಿ ಆರಾಧಿಸಲ್ಪಡುವ ಗಣೇಶ ವಿಗ್ರಹ ಹೋಗೋದು ಮಾತ್ರ ಮಂಗಳೂರಿನಿಂದ. ಅದೂ ಕಳೆದ 27 ವರ್ಷಗಳಿಂದ!
ಅಮೆರಿಕದಲ್ಲಿ ಕರಾವಳಿ ಮೂಲದ ಶೆರ್ಲೆಕರ್ ಕುಟುಂಬ ವಾಸವಾಗಿದ್ದು, ಪ್ರತಿವರ್ಷ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಅದಕ್ಕಾಗಿ ಮಂಗಳೂರಿನ ಮಣ್ಣಗುಡ್ಡೆಯ ‘ಶ್ರೀ ಗಣೇಶ್’ ಮನೆಯಲ್ಲಿ ತಯಾರಾಗುವ ಮೂರ್ತಿಯೇ ಆಗಬೇಕು. 27 ವರ್ಷಗಳಿಂದಲೂ ಈ ಸಂಪ್ರದಾಯ ಮುಂದುವರಿದಿದೆ. ಈ ಬಾರಿಯೂ ಮಂಗಳೂರಿನಲ್ಲಿ ತಯಾರಾದ ಸುಮಾರು 4.5 ಕೆಜಿ ಗಣೇಶ ವಿಗ್ರಹ ಅಮೆರಿಕಕ್ಕೆ ತೆರಳಿದೆ.‘ಶೆರ್ಲೆಕರ್ ಕುಟುಂಬದವರು ಪ್ರತಿವರ್ಷ ಮಂಗಳೂರಿಗೆ ಖುದ್ದು ಬಂದು ವಿಗ್ರಹ ಕೊಂಡೊಯ್ಯುತ್ತಾರೆ. ನಾವು ಪರಂಪರಾಗತವಾಗಿ ಸಂಪ್ರದಾಯಬದ್ಧವಾಗಿ ವಿಗ್ರಹ ರಚನೆ ಮಾಡುತ್ತಾ ಬರುತ್ತಿರುವುದರಿಂದ ನಾವು ರಚಿಸುವ ವಿಗ್ರಹದ ಮೇಲೆ ಅವರ ಕುಟುಂಬಕ್ಕೆ ನಂಟು ಜಾಸ್ತಿ. ಹೀಗಾಗಿ ಕಳೆದ 27 ವರ್ಷಗಳಿಂದಲೂ ಇದು ನಡೆದುಕೊಂಡು ಬರುತ್ತಿದೆ’ ಎಂದು ಮಣ್ಣಗುಡ್ಡೆಯ ವಿಗ್ರಹ ತಯಾರಿಕಾ ಕುಟುಂಬದ ವೆಂಕಟೇಶ್ ರಾವ್.
ತಲೆಮಾರುಗಳಿಂದ ಗಣೇಶ ಕಾಯಕ:ಮಂಗಳೂರಿನ ಮಣ್ಣಗುಡ್ಡೆ ನಿವಾಸಿ ರಾಮಚಂದ್ರ ರಾವ್ ಮುಂದಾಳತ್ವದಲ್ಲಿ ಪ್ರತಿವರ್ಷ ಗಣಪತಿ ವಿಗ್ರಹಗಳನ್ನು ರಚನೆ ಮಾಡಲಾಗುತ್ತಿದೆ. ಯಾವುದೇ ವಾಣಿಜ್ಯ ಉದ್ದೇಶವಿಲ್ಲದೆ ಇವರ ಇಡೀ ಕುಟುಂಬ ಸೇರಿ ಈ ಕಾರ್ಯದಲ್ಲಿ ತೊಡಗಿದೆ. ಅಮೆರಿಕ ಮಾತ್ರವಲ್ಲ, ಕೇರಳದ ಕಾಸರಗೋಡು, ಕಾಂಞಂಗಾಡ್, ಕುಂಬ್ಳೆ ಸೇರಿದಂತೆ ಕರಾವಳಿಯಾದ್ಯಂತ ಇವರು ತಯಾರಿಸಿದ ಗಣೇಶನ ಮೂರ್ತಿಗಳಿಗೆ ಆರಾಧನೆ ನಡೆಯುತ್ತದೆ. ರಾಮಚಂದ್ರ ರಾವ್ ಅವರ ತಂದೆ ಮೋಹನ್ ರಾವ್ ಮಹಾರಾಷ್ಟ್ರದಲ್ಲಿ ಉದ್ದಿಮೆ ನಡೆಸುತ್ತಿದ್ದಾಗ ಅಲ್ಲಿನ ಗಣೇಶೋತ್ಸವದಿಂದ ಪ್ರೇರಣೆಗೊಂಡು ಊರಿಗೆ ಆಗಮಿಸಿ ಗಣೇಶ ಮೂರ್ತಿ ತಯಾರಿ ಕೆಲಸ ಆರಂಭಿಸಿದರು. ಆಗ ಆರಂಭವಾದ ಈ ಕಾರ್ಯ ಇದೀಗ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಕಾಲದವರೆಗೂ ನಿರಂತರವಾಗಿ ಸಾಗಿಕೊಂಡು ಬಂದಿದೆ. ಇವರಲ್ಲಿ 9 ಇಂಚಿನ ಗಣಪನಿಂದ 10 ಅಡಿ ಎತ್ತರದ ಗಣಪ ತಯಾರಾಗುತ್ತಾನೆ.
ಈ ಕುಟುಂಬದ ಯಾರಿಗೂ ವಿಗ್ರಹ ಮಾಡುವುದೇ ಕಾಯಕವಲ್ಲ. ಎಲ್ಲರೂ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರೇ. ಚೌತಿ ಬಂದಾಗ ಒಂದು ತಿಂಗಳು ರಜೆ ಹಾಕಿ ಎಲ್ಲರೂ ಸೇರಿ ಗಣಪತಿ ಮೂರ್ತಿ ತಯಾರು ಮಾಡುತ್ತಾರೆ. ಈ ಬಾರಿ ಬರೋಬ್ಬರಿ 260ರಷ್ಟು ಗಣಪತಿ ಮೂರ್ತಿಗಳನ್ನು ಈ ಕುಟುಂಬ ತಯಾರಿಸಿದೆ. ಬರೀ ಆವೆಮಣ್ಣು, ಬೈಹುಲ್ಲು, ಪರಿಸರ ಪೂರಕ ಬಣ್ಣ ಬಳಸಿ ಮೂರ್ತಿಗಳ ರಚನೆಯಾಗಿದೆ. ಮಂಗಳೂರು ನಗರದ ಆಸುಪಾಸಿನಲ್ಲಿ ಪ್ರತಿಷ್ಠಾಪಿಸುವ ಹೆಸರಾಂತ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ತಯಾರಿಸೋದು ಇದೇ ಕುಟುಂಬ.ಆಧುನಿಕ ಕಾಲಘಟ್ಟದಲ್ಲೂ ತಲೆಮಾರುಗಳಿಂದ ಕುಟುಂಬವೊಂದು ಇಂತಹ ಕಾರ್ಯದಲ್ಲಿ ತೊಡಗಿರುವುದು ವಿಶೇಷ.ನಮ್ಮ ಅಜ್ಜ ಮೋಹನ್ ರಾವ್ ಅವರು ಧಾರ್ಮಿಕ ಪ್ರಜ್ಞೆಯನ್ನು ಉಳಿಸುವ ಉತ್ತಮ ತತ್ವವನ್ನು ನೀಡಿ ಹೋಗಿದ್ದಾರೆ. ಇದನ್ನು ನಮ್ಮ ಕುಟುಂಬದ ಎಲ್ಲರೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದೆ ಶುದ್ಧ ಆವೆಮಣ್ಣಿನಲ್ಲಿ ತಯಾರಿಸುತ್ತಿದ್ದೇವೆ.
- ವೆಂಕಟೇಶ ರಾವ್, ಗಣೇಶ ವಿಗ್ರಹ ತಯಾರಕರು.ಫೋಟೊ4ಗಣೇಶ1,2,3,4