ಮಂಗಳೂರು: 10 ಕೋಟಿ ರು.ಗಳ ವಂಚನೆ ಕೇಸ್ ಸಿಐಡಿ ತನಿಖೆಗೆ

| Published : Jul 23 2025, 12:30 AM IST

ಸಾರಾಂಶ

ಜೆಪ್ಪಿನಮೊಗರು ಬೊಲ್ಲಗುಡ್ಡ ನಿವಾಸಿ ರೋಶನ್ ಸಲ್ಡಾನ (೪೩) ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ೧೦ ಕೋಟಿ.ರು. ವಂಚನೆ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಸಿಐಡಿಗೆ ವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಹುಕೋಟಿ ಮೊತ್ತ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಜೆಪ್ಪಿನಮೊಗರು ಬೊಲ್ಲಗುಡ್ಡ ನಿವಾಸಿ ರೋಶನ್ ಸಲ್ಡಾನ (೪೩) ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ೧೦ ಕೋಟಿ.ರು. ವಂಚನೆ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಸಿಐಡಿಗೆ ವಹಿಸಲಾಗಿದೆ.

ವಂಚನೆಯ ಮೊತ್ತ ೧೦ ಕೋ.ರು. ಮತ್ತು ಅದಕ್ಕಿಂತ ಹೆಚ್ಚಿದ್ದರೆ ಸಿಐಡಿಗೆ ವರ್ಗಾಯಿಸಲು ಅವಕಾಶವಿದೆ. ಅದರಂತೆ ೧೦ ಕೋ.ರು. ಮೊತ್ತದ ಪ್ರಕರಣದ ತನಿಖೆ ನಡೆಸುವಂತೆ ಈ ಮೊದಲೇ ಸಿಐಡಿ ಪತ್ರ ಬರೆಯಲಾಗಿತ್ತು. ಇದೀಗ ಸಿಐಡಿ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಬಿಹಾರ ಮೂಲದ ಉದ್ಯಮಿಯೊಬ್ಬರು ಭೂ ಖರೀದಿ ವಿಚಾರದಲ್ಲಿ ವಂಚನೆಗೆ ಒಳಗಾದ ಪ್ರಕರಣ ಇದಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೆನ್ ಠಾಣೆಯಲ್ಲಿ ದಾಖಲಾಗಿರುವ ಇತರ ಪ್ರಕರಣಗಳ ತನಿಖೆಯನ್ನು ಪೊಲೀಸರೇ ತನಿಖೆ ನಡೆಸಲಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ತಿಳಿಸಿದ್ದಾರೆ.

ಈ ಮಧ್ಯೆ ಸೋಮವಾರ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ತನಗೆ ರೋಶನ್‌ನಿಂದ ೧ ಕೋ.ರು. ವಂಚನೆ ಆಗಿದೆ ಎಂದು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದಾರೆ. ಆತನ ದೂರನ್ನು ಆಧರಿಸಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ರೋಶನ್ ವಿರುದ್ಧ ಸಿಐಡಿಗೆ ವಹಿಸಿದ ಪ್ರಕರಣ ಸೇರಿ ಎರಡು ಪ್ರಕರಣ ಈ ಹಿಂದೆ ದಾಖಲಾಗಿತ್ತು. ಇತ್ತೀಚೆಗೆ ಆತನನ್ನು ಬಂಧಿಸಿದ ಬಳಿಕ ಮಹಾರಾಷ್ಟ್ರದ ಉದ್ಯಮಿಗೆ ೫ ಕೋ.ರು. ಮತ್ತು ಅಸ್ಸಾಂ ಮೂಲದ ವ್ಯಕ್ತಿಗೆ ೨೦ ಕೋ.ರು. ವಂಚನೆ ಮಾಡಿರುವ ಕುರಿತಂತೆ ಪ್ರಕರಣ ದಾಖಲಾಗಿತ್ತು. ಅಲ್ಲದೆ ಚಿತ್ರದುರ್ಗ ನಗರ ಠಾಣೆಯಲ್ಲೂ ಆಂಧ್ರದ ಉದ್ಯಮಿಗೆ ೪೦ ಲಕ್ಷ ರು. ವಂಚನೆ ಮಾಡಿರುವ ಕುರಿತು ಕೇಸ್ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರೋಶನ್‌ನ ಇನ್ನಷ್ಟು ಖಾತೆಗಳನ್ನು ಪತ್ತೆಹಚ್ಚಲಾಗಿದ್ದು, ೫೦ ಕೋ.ರು. ಹೆಚ್ಚು ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಅವುಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ವಂಚನೆಗೆ ಒಳಗಾದವರನ್ನು ಪತ್ತೆ ಹಚ್ಚಲಾಗುತ್ತಿದೆ. ರೋಶನ್‌ನಿಂದ ವಂಚನೆಗೆ ಒಳಗಾದವರು ಯಾರೇ ಆದರೂ ದೂರು ನೀಡಲು ಅವಕಾಶವಿದ್ದು, ಮಂಗಳೂರಿಗೆ ಬಂದು ಅಥವಾ ತಮ್ಮ ವ್ಯಾಪ್ತಿಯ ಠಾಣೆಯಲ್ಲಿ ದೂರು ನೀಡಬಹುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ರೋಶನ್‌ನನ್ನು ಕಸ್ಟಡಿಗೆ ಪಡೆಯುವ ನಿಟ್ಟಿನಲ್ಲಿ ಪೊಲೀಸರು ಪೂರಕ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಜು.೨೩ರಂದು ಆತನನ್ನು ವಶಕ್ಕೆ ಪಡೆಯಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.