ಸಾರಾಂಶ
ಈ ಬಾರಿ ಮೇಯರ್ ಸ್ಥಾನಕ್ಕೆ ಎಸ್ಸಿ ಮೀಸಲಾತಿ ಬಂದಿದ್ದರೂ, ಚುನಾವಣೆ ನಡೆಯುವಾಗ ಅರ್ಜಿ ಹಾಕಲು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಇಲ್ಲ. ಕಳೆದ ಪಾಲಿಕೆ ಚುನಾವಣೆಯಲ್ಲಿ ಈ ವರ್ಗದ ಅಭ್ಯರ್ಥಿಗಳು ಯಾರೂ ಗೆಲ್ಲದಿರುವ ಹಿನ್ನೆಲೆಯಲ್ಲಿ ಮತ್ತು ಬಿಜೆಪಿಗೆ ಪಾಲಿಕೆಯಲ್ಲಿ ಸ್ಪಷ್ಟ ಬಹುಮತವೂ ಇರುವುದರಿಂದ ಈ ಸಲದ ಮೇಯರ್ ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆಯ 25ನೇ ಅವಧಿಯ ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ (ಎ) ಮಹಿಳೆ ಮೀಸಲಾತಿಗೆ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಹಾಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಉಪಮೇಯರ್ ಸುನೀತಾ ಅವರ ಅಧಿಕಾರವಧಿ ಸೆ.8ರಂದು ಮುಕ್ತಾಯವಾಗಲಿದ್ದು, ಅದಕ್ಕಿಂತ ಮೊದಲೇ ನೂತನ ಮೇಯರ್, ಉಪಮೇಯರ್ ಮೀಸಲಾತಿಯನ್ನು ಕೊನೆಗೂ ಸರ್ಕಾರ ಪ್ರಕಟಿಸಿದೆ.
ಪ್ರಸ್ತುತ ಬಿಜೆಪಿ ಸದಸ್ಯರಲ್ಲಿ ಮೀಸಲಾತಿ ಪ್ರಕಾರ ಮನೋಜ್ ಕೋಡಿಕಲ್, ಭರತ್ ಕುಮಾರ್, ಸುನೀತಾ ಅವರಿಗೆ ಮಾತ್ರ ಮೇಯರ್ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಇದೆ. ಸುನೀತಾ ಅವರು ಈಗಾಗಲೆ ಉಪಮೇಯರ್ ಆಗಿರುವುದರಿಂದ ಉಳಿದಿಬ್ಬರು ಅಭ್ಯರ್ಥಿಗಳ ಪೈಕಿ ಒಬ್ಬರನ್ನು ಬಿಜೆಪಿ ಪಕ್ಷ ಅಂತಿಮಗೊಳಿಸುವ ನಿರೀಕ್ಷೆ ಹೊಂದಲಾಗಿದೆ.ಉಪ ಮೇಯರ್ ಸ್ಥಾನಕ್ಕೆ ಸುಮಾರು ಹತ್ತರಷ್ಟು ಸದಸ್ಯರು ಅರ್ಹರಾಗಿದ್ದು, ಅದಕ್ಕೂ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ಈ ಬಾರಿ ಮೇಯರ್ ಸ್ಥಾನಕ್ಕೆ ಎಸ್ಸಿ ಮೀಸಲಾತಿ ಬಂದಿದ್ದರೂ, ಚುನಾವಣೆ ನಡೆಯುವಾಗ ಅರ್ಜಿ ಹಾಕಲು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಇಲ್ಲ. ಕಳೆದ ಪಾಲಿಕೆ ಚುನಾವಣೆಯಲ್ಲಿ ಈ ವರ್ಗದ ಅಭ್ಯರ್ಥಿಗಳು ಯಾರೂ ಗೆಲ್ಲದಿರುವ ಹಿನ್ನೆಲೆಯಲ್ಲಿ ಮತ್ತು ಬಿಜೆಪಿಗೆ ಪಾಲಿಕೆಯಲ್ಲಿ ಸ್ಪಷ್ಟ ಬಹುಮತವೂ ಇರುವುದರಿಂದ ಈ ಸಲದ ಮೇಯರ್ ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ.ಈಗ ಮೀಸಲಾತಿ ನಿಗದಿಯಾದರೂ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣೆ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಅದರ ಪ್ರಕ್ರಿಯೆ ಮುಗಿಯಲು ಕನಿಷ್ಠ ಎರಡು ವಾರಗಳಾದರೂ ಬೇಕಾಗಬಹುದು ಎಂದು ಪಾಲಿಕೆ ಸದಸ್ಯರು ತಿಳಿಸಿದ್ದಾರೆ.