ಇರುಳ ಬೆಳಗಿಸಿದ ಮಂಗಳೂರು ದಸರಾ ಶೋಭಾಯಾತ್ರೆ

| Published : Oct 25 2023, 01:15 AM IST

ಇರುಳ ಬೆಳಗಿಸಿದ ಮಂಗಳೂರು ದಸರಾ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ನವದುರ್ಗೆಯರು, ಶಾರದೆ, ಆದಿಶಕ್ತಿ, ಗಣಪತಿ, ನಾರಾಯಣ ಗುರುಗಳ ವಿಗ್ರಹಗಳ ಜತೆಗೆ 70ಕ್ಕೂ ಅಧಿಕ ವೈವಿಧ್ಯಮಯ ಟ್ಯಾಬ್ಲೊಗಳ ಮೆರವಣಿಗೆಗೆ ಜಾತಿ ಧರ್ಮ ಭೇದವಿಲ್ಲದೆ ದೇಶ- ವಿದೇಶಗಳೆಲ್ಲೆಡೆಯ ಲಕ್ಷಾಂತರ ಮಂದಿ ಸಾಕ್ಷಿಯಾದರು. ಕುದ್ರೋಳಿ ದೇವಾಲಯದ ಅಭಿವೃದ್ಧಿ ರೂವಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಈ ಬಾರಿಯೂ ದಸರಾ ಮಹೋತ್ಸವ ಜನರ ಮನದಂಗಳಕ್ಕಿಳಿದು ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಮಂಗಳೂರು ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ನವ ದಿನಗಳ ಪರ್ಯಂತ ಪೂಜಿಸಲ್ಪಟ್ಟು 10ನೇ ದಿನವಾದ ವಿಜಯದಶಮಿಯಂದು ನವದುರ್ಗೆಯರು ಹಾಗೂ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ‘ಮಂಗಳೂರು ದಸರಾ’ ಮಂಗಳ‍ವಾರ ಭಕ್ತಿಪೂರ್ವಕ ಸಡಗರ ಸಂಭ್ರಮದಿಂದ ನೆರವೇರಿತು. ನವದುರ್ಗೆಯರು, ಶಾರದೆ, ಆದಿಶಕ್ತಿ, ಗಣಪತಿ, ನಾರಾಯಣ ಗುರುಗಳ ವಿಗ್ರಹಗಳ ಜತೆಗೆ 70ಕ್ಕೂ ಅಧಿಕ ವೈವಿಧ್ಯಮಯ ಟ್ಯಾಬ್ಲೊಗಳ ಮೆರವಣಿಗೆಗೆ ಜಾತಿ ಧರ್ಮ ಭೇದವಿಲ್ಲದೆ ದೇಶ- ವಿದೇಶಗಳೆಲ್ಲೆಡೆಯ ಲಕ್ಷಾಂತರ ಮಂದಿ ಸಾಕ್ಷಿಯಾದರು. ಕುದ್ರೋಳಿ ದೇವಾಲಯದ ಅಭಿವೃದ್ಧಿ ರೂವಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಈ ಬಾರಿಯೂ ದಸರಾ ಮಹೋತ್ಸವ ಜನರ ಮನದಂಗಳಕ್ಕಿಳಿದು ಸಂಪನ್ನಗೊಂಡಿತು. ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೇವರುಗಳಿಗೆ ಪೂಜೆ ಸಲ್ಲಿಸಿ ಬಳಿಕ ಶೋಭಾಯಾತ್ರೆಯ ಭವ್ಯ ಮಂಟಪಗಳಲ್ಲಿ ಇರಿಸಲಾಯಿತು. ನವದುರ್ಗೆಯರ ಬಳಿಕ ಶಾರದೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಬಿ.ಜನಾರ್ದನ ಪೂಜಾರಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಜರಿದ್ದರು. ಶಾರದಾ ಮಾತೆಯನ್ನು ಎತ್ತಿಕೊಂಡು ಮೆರವಣಿಗೆಗೆ ಅಣಿಗೊಳಿಸುವಾಗ ಭಕ್ತ ಸಮೂಹದ ಜೈಕಾರ ಮುಗಿಲು ಮುಟ್ಟಿತ್ತು. ಶೋಭಾಯಾತ್ರೆಯು ಶ್ರೀಕ್ಷೇತ್ರ ಕುದ್ರೋಳಿಯಿಂದ ಹೊರಟು ಕಂಬ್ಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್‌ ಸರ್ಕಲ್‌, ಲಾಲ್‌ಬಾಗ್‌, ಬಲ್ಲಾಳ್‌ಬಾಗ್‌, ಪಿವಿಎಸ್‌ ಸರ್ಕಲ್‌, ನವಭಾರತ ಸರ್ಕಲ್‌, ಕೆಎಸ್‌ ರಾವ್‌ ರಸ್ತೆ, ಹಂಪನಕಟ್ಟೆ, ಕ್ಲಾಕ್‌ ಟವರ್‌ ವೃತ್ತದಿಂದ ಹಾದು ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್‌, ನ್ಯೂಚಿತ್ರಾ ಟಾಕೀಸ್‌, ಅಳಕೆಯಾಗಿ ಮರಳಿ ಶ್ರೀ ಕ್ಷೇತ್ರಕ್ಕೆ ಆಗಮಿಸಿತು. ಬುಧವಾರ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಕುದ್ರೋಳಿಯ ಪುಷ್ಕರಿಣಿಯಲ್ಲಿ ವಿಸರ್ಜನಾ ಮಹೋತ್ಸವ ವೈಭವೋಪೇತವಾಗಿ ನೆರವೇರಲಿದೆ. ಮನಸೂರೆಗೊಳಿಸಿದ ಶೋಭಾಯಾತ್ರೆ: ಮಂಗಳೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಹುಲಿವೇಷ ತಂಡಗಳು, ಅನಾರ್ಕಲಿ, ವಿವಿಧ ದೇವಸ್ಥಾನಗಳು, ಸಂಘ ಸಂಸ್ಥೆಗಳ ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು 70ಕ್ಕೂ ಅಧಿಕ ಸ್ತಬ್ಧಚಿತ್ರಗಳು, ರಾಜ್ಯದೆಲ್ಲೆಡೆಗಳಿಂದ ಆಗಮಿಸಿದ ಕಲಾ ತಂಡಗಳು, ಬ್ಯಾಂಡ್‌ ತಂಡಗಳು ಜನಮನ ಸೂರೆಗೊಳಿಸಿದವು. ಜತೆಗೆ ಚೆಂಡೆ, ನಾಸಿಕ್‌ ತಂಡಗಳು, ಡೊಳ್ಳು ಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ವೀರಗಾಸೆ ಕುಣಿತ ಇತ್ಯಾದಿಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಕಟ್ಟಡಗಳು ರಸ್ತೆಗಳು ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸಿದವು. ಶೋಭಾಯಾತ್ರೆ ಆರಂಭಕ್ಕೂ ಮುನ್ನ ಕುದ್ರೋಳಿಯ ಶ್ರೀ ಶಾರದೆಯ ಸನ್ನಿಧಿಯಲ್ಲಿ ಹಲವು ಮಂದಿ ಸೇವಾಕರ್ತರನ್ನು ಕ್ಷೇತ್ರಾಡಳಿತ ಮಂಡಳಿಯ ಪರವಾಗಿ ಸನ್ಮಾನಿಸಲಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ, ಮಂಗಳೂರು ಶಾಸಕ ಡಿ. ವೇದವ್ಯಾಸ ಕಾಮತ್‌, ಭಾರತ್‌ ಬ್ಯಾಂಕ್‌ ಮುಂಬೈನ ಕಾರ್ಯಾಧ್ಯಕ್ಷ ಸೂರ್ಯಕಾಂತ್‌ ಸುವರ್ಣ, ದೇವಸ್ಥಾನದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್‌, ಉಪಾಧ್ಯಕ್ಷೆ ಊರ್ಮಿಳಾ ರಮೇಶ್‌, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ್‌ ಮಿಜಾರ್‌, ಎಂ.ಶೇಖರ್‌ ಪೂಜಾರಿ, ಸಂತೋಷ್‌ ಕುಮಾರ್‌ ಜೆ, ಜಗದೀಪ್‌ ಡಿ ಸುವರ್ಣ, ಕೆ. ಮಹೇಶ್ಚಂದ್ರ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ. ಅನಸೂಯ ಬಿ.ಟಿ. ಸಾಲ್ಯಾನ್‌, ಡಾ.ಬಿ.ಜಿ. ಸುವರ್ಣ ಸೇರಿದಂತೆ ಹರಿಕೃಷ್ಣ ಬಂಟ್ವಾಳ್‌, ಸದಸ್ಯರಾದ ವೇದಕುಮಾರ್‌, ರಾಧಾಕೃಷ್ಣ, ಶೈಲೇಂದ್ರ ಸುವರ್ಣ, ಲೀಲಾಕ್ಷ ಕರ್ಕೇರಾ, ಚಂದನ್‌ದಾಸ್‌, ಗೌರವಿ, ಕಿಶೋರ್‌ ದಂಡೆಕೇರಿ ಮತ್ತಿತರರಿದ್ದರು. ಬಾಕ್ಸ್‌-1 ಮಂಗಳೂರು ದಸರಾಕ್ಕೆ ಭಾವೈಕ್ಯತೆಯ ಟಚ್‌ ಈ ಬಾರಿಯ ಮಂಗಳೂರು ದಸರಾ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಕ್ರಿಶ್ಚಿಯನ್‌ ಬಾಂಧವರಿಂದ ಸ್ತಬ್ಧಚಿತ್ರವೊಂದು ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಅದೇ ರೀತಿ ಮಂಗಳೂರು ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ‘ಮಂಗಳೂರು ಅಭಿವೃದ್ಧಿಯ ಹಿಂದೆ ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್‌ ಸಮುದಾಯದ ಸಹಬಾಳ್ವೆಯಿದೆ’ ಎಂಬ ಘೋಷವಾಕ್ಯದ ಸ್ತಬ್ಧಚಿತ್ರ ಸಾಮರಸ್ಯದ ಸಂಕೇತವನ್ನು ಸಾರಿತು. ಆದರೆ ದೈವಾರಾಧನೆಯ ಟ್ಯಾಬ್ಲೋಗಳಿಗೆ, ಜೀವಾಪಾಯ ತರುವಂತಹ ಸಾಹಸ ಪ್ರದರ್ಶನಗಳಿಗೆ ಅವಕಾಶ ನೀಡಿರಲಿಲ್ಲ. ಬಾಕ್ಸ್‌-2 ಎಲ್ಲರಿಗೂ ದೇವರು ಒಳಿತು ಮಾಡಲಿ: ಪೂಜಾರಿ ಮಂಗಳೂರು ದಸರಾಕ್ಕೆ ಜಿಲ್ಲೆಯ ಜನರು ಮಾತ್ರವಲ್ಲ ಹೊರ ಜಿಲ್ಲೆಯ, ಹೊರ ರಾಜ್ಯದವರು ಬಂದು ಭಕ್ತಿಯನ್ನು ತೋರಿಸುವ ಮೂಲಕ ಇಲ್ಲಿನ ದಸರಾ ವಿಶ್ವ ವಿಖ್ಯಾತಿ ಗಳಿಸುತ್ತಿರುವುದು ನನ್ನಲ್ಲಿ ಸಂತೃಪ್ತ ಭಾವನೆಯನ್ನು ಮೂಡಿಸಿದೆ. ಇಲ್ಲಿಗೆ ಬರುವ ಭಕ್ತರಿಗೆ ಪರಮಾತ್ಮನು ಸದಾ ಒಳಿತನ್ನು ಮಾಡಲಿ. ಕುದ್ರೋಳಿಯ ಗೋಕರ್ಣನಾಥ ಸದಾ ಕಾಲ ಎಲ್ಲರನ್ನು ಕಾಯಲಿ ಎಂದು ಜನಾರ್ದನ ಪೂಜಾರಿ ಆಶಿಸಿದರು. ಶಾರದಾ ದೇವಿಯ ಪೂಜೆಯ ಬಳಿಕ ಸುತ್ತಮುತ್ತ ಇದ್ದ ಜನಸಾಗರದ ನಡುವೆ ರಾಜಸ್ತಾನದ ದಂಪತಿಯನ್ನು ಗುರುತಿಸಿ ಹತ್ತಿರಕ್ಕೆ ಕರೆಸಿಕೊಂಡ ಪೂಜಾರಿ, ತಾವು ಎಲ್ಲಿಯವರು ಎಂದು ಪರಿಚಯ ಕೇಳಿಕೊಂಡು ಮಂಗಳೂರು ದಸರಾಕ್ಕೆ ಪ್ರತಿ ವರ್ಷವೂ ಬನ್ನಿ. ನಿಮಗೆ ಸದಾ ಒಳಿತಾಗಲಿ ಎಂದು ಶುಭ ಹಾರೈಸಿದರು. ಬಾಕ್ಸ್-3 ಭರ್ಜರಿ ವ್ಯಾಪಾರ ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರವಾಯಿತು. ವಿವಿಧ ರೀತಿಯ ಅಂಗಡಿಗಳು, ಸ್ಟಾಲ್‌ಗಳು, ಐಸ್‌ಕ್ರೀಮ್‌, ಚುರುಮುರಿ ಅಂಗಡಿಗಳು ಸೇರಿದಂತೆ ವೈವಿಧ್ಯಮಯ ಆಹಾರ ಮಳಿಗೆಗಳಲ್ಲಿ ವ್ಯಾಪಾರ ಬಿರುಸಾಗಿ ನಡೆಯಿತು. ಶೋಭಾಯಾತ್ರೆಯನ್ನು ನೋಡಲು ಬಂದವರು ಉತ್ತಮವಾಗಿ ವ್ಯಾಪಾರ, ವಹಿವಾಟಿಗೆ ಸಹಕಾರ ನೀಡಿದರು ಎಂದು ವ್ಯಾಪಾರಿಗಳು ಹೇಳಿಕೊಂಡರು. ಫೋಟೊ ಇಮೇಲ್‌ಗೆ ಬರಲಿವೆ.