ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಸ್ತೆ ಆಗಿಲ್ಲ, ಡ್ರೈನೇಜ್ ವ್ಯವಸ್ಥೆ ಸರಿಯಿಲ್ಲ, ಮನೆಗೆ ರಾಜಕಾಲುವೆಯ ಕೊಳಚೆ ನೀರು ಹರಿಯುವುದು ಇತ್ಯಾದಿ ಮೂಲಭೂತ ಸಮಸ್ಯೆಗಳನ್ನು ನಾಗರಿಕರು ಮೇಯರ್ ಮನೋಜ್ ಕುಮಾರ್ ಬಳಿ ತೋಡಿಕೊಂಡಿದ್ದಾರೆ.ಶುಕ್ರವಾರ ನಡೆದ ಮೇಯರ್ ಫೋನ್- ಇನ್ ಕಾರ್ಯಕ್ರಮದಲ್ಲಿ ಒಟ್ಟು 23 ಕರೆಗಳು ಸಾರ್ವಜನಿಕರಿಂದ ಬಂದಿದ್ದು, ಹೆಚ್ಚಿನ ಕರೆಗಳು ರಸ್ತೆ, ಒಳಚರಂಡಿ, ಕಸದ ಸಮಸ್ಯೆಗೆ ಸಂಬಂಧಿಸಿದ್ದೇ ಆಗಿದ್ದವು.
ವೆಲೆನ್ಸಿಯಾದ ನಿರ್ಮಲಾ ಎಂಬವರು ಕರೆ ಮಾಡಿ ತಮ್ಮ ಮನೆ ಬಳಿ ಸುಮಾರು 25ರಿಂದ 30 ಮನೆಗಳಿಗೆ ಡ್ರೈನೇಜ್ ವ್ಯವಸ್ಥೆಯೇ ಇಲ್ಲ ಎಂದು ದೂರಿದರೆ, ಪಡೀಲ್ ಕರ್ಮಾರ್ ನಿವಾಸಿ ಗಣೇಶ್ ಭಟ್ ಎಂಬವರು ತಮ್ಮ ಮನೆ ಬಳಿಯ ತೋಡಿಗೆ ಕೊಳಚೆ ನೀರು ಹರಿಯುತ್ತಿರುವುದಾಗಿ ಅಳಲು ತೋಡಿಕೊಂಡರು. ಹೊಸಬೆಟ್ಟು ಹೊನ್ನಕಟ್ಟೆಯ ಜನಾರ್ದನ ಎಂಬವರು ಡ್ರೈನೇಜ್ ವ್ಯವಸ್ಥೆಯಿಲ್ಲದೆ ಹಲವು ಸಮಯದಿಂದ ಈ ಭಾಗದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಪದೇ ಪದೇ ರಸ್ತೆ ಅಗೆಯುವುದು ಬಿಟ್ಟು ಬೇರೇನೂ ಆಗುತ್ತಿಲ್ಲ ಎಂದರು. ಬಿಜೈ ಆನೆಗುಂಡಿ ರಸ್ತೆಯಲ್ಲಿರುವ ರಾಜಕಾಲುವೆ ನೀರು ಮನೆ ಅಂಗಳಕ್ಕೆ ಹರಿಯುತ್ತಿದೆ ಎಂದು ಸ್ಥಳೀಯರು ದೂರು ಹೇಳಿಕೊಂಡರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೇಯರ್ ಭರವಸೆ ನೀಡಿದರು.ಉಳ್ಳಾಲ ಹೊಯ್ಗೆಯ ನೇತ್ರಾವತಿ ಸೇತುವೆ ಬಳಿ ಸಣ್ಣ ಸೇತುವೆ ಬಿದ್ದು ಹಲವು ಸಮಯವಾಗಿದೆ. ರಿಕ್ಷಾಕ್ಕೆ ದುಬಾರಿ ದರ ನೀಡಿ ದೂರದಿಂದ ಪ್ರಯಾಣಿಸಬೇಕಾಗಿದೆ. ನಾವು ಊಟ ಕೇಳುತ್ತಿಲ್ಲ, ದಾರಿ ಮಾಡಿಕೊಡಿ ಎಂದು ಸ್ಥಳೀಯರೊಬ್ಬರು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಮೇಯರ್, ಅಲ್ಲಿ ಕಿರು ಸೇತುವೆಗಾಗಿ ಈಗಾಗಲೇ 2 ಕೋಟಿ ರು. ಕಾಯ್ದಿರಿಸಲಾಗಿದ್ದು, ಎನ್‌ಜಿಟಿಗೆ ದೂರು ಹೋಗಿರುವ ಕಾರಣ ವಿಳಂಬವಾಗಿದೆ ಎಂದು ತಿಳಿಸಿದರು.ನಾಯಿಗೆ ಅನ್ನ ಹಾಕಿದರೆ ಕತ್ತಿ ತೋರಿಸ್ತಾರೆ:
ಮನೆ ಸಮೀಪ ಬೀದಿ ನಾಯಿಗಳಿಗೆ ಅನ್ನ ಹಾಕಿದರೆ ಸ್ಥಳೀಯರೊಬ್ಬರು ಆಕ್ಷೇಪಿಸುತ್ತಾರೆ. ಕೈಯ್ಯಲ್ಲಿ ಕತ್ತಿ ಹಿಡಿದು ಹೆದರಿಸುತ್ತಾರೆ, ಕಲ್ಲು ಬಿಸಾಡುತ್ತಾರೆ. ಪ್ರಾಣಿಗಳಿಗೆ ಬದುಕಲು ಹಕ್ಕಿಲ್ಲವೇ ಎಂದು ಬೊಂದೆಲ್ ಪರಿಸರದ ನಿವಾಸಿ ಮಹಿಳೆಯೊಬ್ಬರು ಮೇಯರ್ ಗಮನಕ್ಕೆ ತಂದರು.ಅಕ್ರಮ ಹೋಮ್‌ಸ್ಟೇ:
ಬೋಂದೆಲ್ ಬಳಿ ತಮ್ಮನೆ ಪಕ್ಕದಲ್ಲೇ ಹೋಂ ಸ್ಟೇಯನ್ನು ಸ್ಥಳೀಯರ ಒಪ್ಪಿಗೆ ಇಲ್ಲದೆ ನಡೆಸಲಾಗುತ್ತಿದೆ. ಇನ್ನೊಂದು ಹೋಮ್‌ಸ್ಟೇ ಪರವಾನಗಿ ಇಲ್ಲದೆ ನಡೆಸಲು ಅಣಿಯಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರೊಬ್ಬರು ಮನವಿ ಮಾಡಿದರು. ಅತ್ತಾವರದ ನಂದಿಗುಡ್ಡೆ ರಸ್ತೆಯಲ್ಲಿ ಸಾರ್ವಜನಿಕರು ಕಸದ ರಾಶಿ ಹಾಕುತ್ತಿದ್ದು ಬ್ಲಾಕ್ ಸ್ಪಾಟ್ ಆಗಿದೆ ಎಂದು ಇನ್ನೊಬ್ಬರು ದೂರಿದರು.ಉಪ ಮೇಯರ್ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಮಂಗಳ ಇದ್ದರು.
ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮಕ್ಕೆ ಆಗ್ರಹನಗರದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ನಡೆಸಲಾಗುತ್ತಿದ್ದು, ಗೋ ಮಾಂಸ ಕೂಡ ಎಗ್ಗಿಲ್ಲದೆ ಸಿಗುತ್ತಿದೆ. ಅಕ್ರಮ ಇಲ್ಲದಿದ್ದರೆ ನಗರದ ಹೊಟೇಲ್, ಮಾರುಕಟ್ಟೆಗಳಲ್ಲಿ ಬೀಫ್ ಹೇಗೆ ಸಿಗುತ್ತಿದೆ. ಕೂಡಲೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರದೀಪ್ ಕದ್ರಿ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಮೇಯರ್, ಕುದ್ರೋಳಿಯಲ್ಲಿ ಇದ್ದ ಕಸಾಯಿಖಾನೆ ಮುಚ್ಚಲಾಗಿದೆ. ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ, ಕ್ರಮ ಕೈಗೊಳ್ಳುವುದಾಗಿ ಹೇಳಿದರು.