ಸಾರಾಂಶ
ಜಿಲ್ಲಾಡಳಿತ ಎಚ್ಚೆತ್ತು ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಅಕ್ರಮವಾಗಿ ಮಣ್ಣುತೆಗೆದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಹೃದಯಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಡೀಲ್‌ನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಮೀಪದ ಗುಡ್ಡವೊಂದು ಕುಸಿಯುವ ಭೀತಿಯಲ್ಲಿದ್ದು, ಗುಡ್ಡದ ಮೇಲಿನ ನಿವಾಸಿಗಳು ಆತಂಕಗೊಂಡಿದ್ದಾರೆ.ಪಡೀಲ್‌ನ ಕೊಡಕ್ಕಲ್ ಎಂಬ ಪ್ರದೇಶದ ಇದಾಗಿದ್ದು, ಗುಡ್ಡದ ಮೇಲೆ ಸುಮಾರು 40 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದಾರೆ. ಇನ್ನು ಗುಡ್ಡದ ಬುಡದಲ್ಲೇ ಅಂಗಡಿ ಮಳಿಗೆಗಳು ಹಾಗೂ ಮನೆಗಳಿದ್ದು, ಇದೂ ಕೂಡಾ ಅಪಾಯದ ಅಂಚಿನಲ್ಲಿದೆ. ಈಗಾಗಲೇ ಗುಡ್ಡ ಸ್ವಲ್ಪ ಕುಸಿತ ಉಂಟಾಗಿದ್ದು, ಗುಡ್ಡದ ಅಂಚಿನಲ್ಲಿರುವ ಶೌಚಾಲಯವೊಂದು ಬೀಳುವ ಸ್ಥಿತಿಯಲ್ಲಿ ಇದೆ. ಇಲ್ಲಿ ಗುಡ್ಡ ಕುಸಿತ ಸಂಭವಿಸಿದರೆ ಭಾರಿ ಪ್ರಮಾಣದ ಅನಾಹುತ ಉಂಟಾಗುವ ಸಾಧ್ಯತೆ ಇದೆ. ಮಳೆ ಇನ್ನೂ ದೂರವಾಗದ ಕಾರಣ ಗುಡ್ಡ ಕುಸಿತದ ಆತಂಕ ಕೂಡಾ ದೂರವಾಗಿಲ್ಲ. ಮಳೆಗಾಲವನ್ನು ಆತಂಕದಲ್ಲೇ ಕಳೆದಿದ್ದ ಇಲ್ಲಿನ ನಿವಾಸಿಗಳು ಇದೀಗ ಮಳೆಯ ಭಯ ಕಾಡಲು ಆರಂಭವಾಗಿದೆ. ಗುಡ್ಡದ ಕೆಳ ಪ್ರದೇಶದ ಜಮೀನು ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನು ಮಾಲೀಕರು ಬಹಳಷ್ಟು ವರ್ಷದ ಹಿಂದೆಯೇ ಗುಡ್ಡ ಅಗೆತ ಮಾಡಿರುವುದೇ ಕಾರಣ ಎನ್ನಲಾಗಿದೆ.
ಆ ವೇಳೆಯೇ ಸರಿಯಾದ ರೀತಿಯಲ್ಲಿ ಗುಡ್ಡ ಕಡಿತ ಮಾಡದೇ 85 ಡಿಗ್ರಿಯಲ್ಲಿ ಮಣ್ಣು ತೆಗೆದಿರುವುದೇ ಸದ್ಯದ ಗುಡ್ಡ ಕುಸಿಯುವ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತು ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಅಕ್ರಮವಾಗಿ ಮಣ್ಣುತೆಗೆದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.