ಮಂಗಳೂರು ಹಲಸು ಮೇಳದಲ್ಲಿ ವೈವಿಧ್ಯಮಯ ಹಲಸಿನ ಅನಾವರಣ!

| Published : May 19 2024, 01:54 AM IST

ಮಂಗಳೂರು ಹಲಸು ಮೇಳದಲ್ಲಿ ವೈವಿಧ್ಯಮಯ ಹಲಸಿನ ಅನಾವರಣ!
Share this Article
  • FB
  • TW
  • Linkdin
  • Email

ಸಾರಾಂಶ

ಹಲಸಿನ ವೈವಿಧ್ಯಮಯ ಖಾದ್ಯಗಳಾದ ಹಲಸಿನ ವಾಡಾಪಾವ್‌, ಹಲಸಿನ ಮಂಚೂರಿ, ಕಬಾಬ್‌, ಪಲಾವ್‌, ಜಾಮೂನ್‌, ಗಾರಿಗೆ, ಪತ್ರೊಡೆ, ಅಂಬಡೆ, ಹೋಳಿಗೆ ಭಾರೀ ಬೇಡಿಕೆ ಹಲಸು ಮೇಳದಲ್ಲಿ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಗೆ ಬಗೆಯ ಹಲಸಿನ ಹಣ್ಣುಗಳು, ಹಲಸಿನ ಹಣ್ಣಿನಿಂದಲೇ ತಯಾರಿಸಿದ ಪೂರಿ, ಪಲ್ಯ, ಸಿಹಿ ಖಾದ್ಯಗಳು..

ಇವೆಲ್ಲವನ್ನು ನೋಡಬೇಕಾದರೆ, ಸವಿಯಬೇಕಾದರೆ ಮಂಗಳೂರಿನ ಶರವು ದೇವಸ್ಧಾನ ಬಳಿಯ ಬಾಳಂಭಟ್‌ ಸಭಾಂಗಣಕ್ಕೆ ಬರಲೇ ಬೇಕು.

ಇದು ಸಾವಯವ ಕೃಷಿಕ ಬಳಗದ ಆಶ್ರಯದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಹಲಸು ಮೇಳದ ನೋಟ. ಈ ಮೇಳ ಭಾನುವಾರ ಸಂಜೆ ವರೆಗೆ ಇರಲಿದೆ. ಹಲಸು ಪ್ರಿಯರಿಗೆ ದೊಡ್ಡಬಳ್ಳಾಪುರದ ಸೂರ್ಯ, ಚಂದ್ರ ತಳಿಯ ತಾಜಾ ಹಲಸಿನ ಜತೆಗೆ ಸ್ಥಳೀಯ ಬರ್ಕೆ ಹಲಸಿನ ಹಣ್ಣು ಖರೀದಿಸುವ, ಸವಿಯುವ ಅವಕಾಶವಿದೆ. ಹಲಸಿನ ವೈವಿಧ್ಯಮಯ ಖಾದ್ಯಗಳಾದ ಹಲಸಿನ ವಾಡಾಪಾವ್‌, ಹಲಸಿನ ಮಂಚೂರಿ, ಕಬಾಬ್‌, ಪಲಾವ್‌, ಜಾಮೂನ್‌, ಗಾರಿಗೆ, ಪತ್ರೊಡೆ, ಅಂಬಡೆ, ಹೋಳಿಗೆ ಭಾರೀ ಬೇಡಿಕೆ ಹಲಸು ಮೇಳದಲ್ಲಿ ವ್ಯಕ್ತವಾಗಿದೆ.

ದೊಡ್ಡಬಳ್ಳಾಪುರ ತೂಬುಕೆರೆಯ ಮುನಿರಾಜು ಮತ್ತು ತಂಡ ಸುಮಾರು ಸುಮಾರು 2.5 ಟನ್‌ ಹಲಸನ್ನು ತಂದಿದ್ದು, ಬರದಿಂದಾಗಿ ಈ ಬಾರಿ ಹಲಸಿನ ಫಸಲು ಕಡಿಮೆಯಾಗಿರುವ ಜತೆಗೆ ಸಾಗಾಟ ವೆಚ್ಚವೂ ದುಬಾರಿಯಾಗಿದೆ. ಆದರೆ ಮಂಗಳೂರಿನಲ್ಲಿ ಗ್ರಾಹಕರಿಂದ ಬೇಡಿಕೆ ಉತ್ತಮವಾಗಿದೆ ಎನ್ನುತ್ತಾರವರು.

ಪಾಣೆಮಂಗಳೂರಿನ ಶ್ರೀಕಾಂತ್‌ ಭಟ್‌ ಅವರು ತುಮಕೂರಿನಿಂದ ಸುಮಾರು 4.5 ಟನ್‌ನಷ್ಟು ಹಲಸನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಕಾರ್ಕಳದ ಸುಧಾಕರ್‌, ಪುತ್ತೂರಿನ ಸುಹಾಸ್‌ ಹಾಗೂ ಸ್ಥಳೀಯರಾದ ಉದಯ ಶಂಕರ್‌ ಅವರು ಸ್ಥಳೀಯವಾಗಿ ಬೆಳೆಯುವ ಬರ್ಕೆ ಹಲಸಿನ ಹಣ್ಣಿನ ಮಾರಾಟ ನಡೆಸುತ್ತಿದ್ದಾರೆ.

ಹಲಸಿ ಹಣ್ಣಿನ ಕೇಕ್‌, ಮಿಲ್ಕ್‌ಶೇಕ್‌ ಜತೆಗೆ ಹಲಸಿನ ನಾನಾ ಬಗೆಯ ಉತ್ಪನ್ನಗಳ ಮಳಿಗೆಗಳು ಸೇರಿ ಸುಮಾರು 40ರಷ್ಟು ಮಳಿಗೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಮೇಳಕ್ಕೆ ಭೇಟಿ ನೀಡಿದ ನೂರಾರು ಮಂದಿ ಹಲಸು ಪ್ರಿಯರು ಹಲಸಿನ ಖಾದ್ಯಗಳ ರುಚಿ ಸವಿಯುವ ಜತೆಗೆ ಹಲಸಿನ ಹಣ್ಣನ್ನು ಖರೀದಿಸಿ ಮನೆಗೆ ಕೊಂಡೊಯ್ದರು.

ಹಲಸಿನ ಹಬ್ಬ ನಡೆಯುತ್ತಿರುವ ಸಭಾಂಗಣದ ಹೊರ ಆವರಣದಲ್ಲಿ ಹಲಸು ಸೇರಿದಂತೆ ಬಗೆ ಬಗೆಯ ಹಣ್ಣು ಹಂಪಲುಗಳ ಗಿಡಗಳ ಮಾರಾಟವೂ ನಡೆಯುತ್ತಿದೆ.

ಉದ್ಘಾಟನಾ ಸಮಾರಂಭದಲ್ಲಿ ಲೆಕ್ಕ ಪರಿಶೋಧಕ ಚಂದ್ರಶೇಖರ ಶೆಟ್ಟಿ, ಬಳಗದ ಅಧ್ಯಕ್ಷ ಜಿ.ಆರ್‌.ಪ್ರಸಾದ್‌, ಗೌರವ ಸಲಹೆಗಾರ ಪ್ರದೀಪ್‌ ಕುಮಾರ್‌ ಕಲ್ಕೂರ, ಗೌರವಾಧ್ಯಕ್ಷ ಅಡ್ಡೂರು ಕೃಷ್ಣರಾವ್‌ ಮತ್ತಿತರರಿದ್ದರು. ಕಿರಣ ರಾಜೇಶ್‌ ತಾರಸಿಯಲ್ಲಿ ಮಲ್ಲಿಗೆ ಕೃಷಿ ಕುರಿತು ಮಾಹಿತಿ ನೀಡಿದರು. ಕಣಚೂರು ಆಸ್ಪತ್ರೆ ವತಿಯಿಂದ ಉಚಿತ ವೈದ್ಯಕೀಯ ತಪಾಸಣೆಯೂ ಏರ್ಪಾಟಾಗಿದೆ.ಸಾವಯವ ಕೃಷಿ, ಹಲಸು ಬೆಳೆಗಾರರನ್ನು ಪ್ರೋತ್ಸಾಹಿಸುವುದು, ಇದಕ್ಕೆ ಪೂರಕವಾಗಿ ರೈತರು ಮತ್ತು ಗ್ರಾಹಕರಿಗೆ ಒಂದೇ ಕಡೆ ಮಾರಾಟ, ಖರೀದಿಗೆ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶವಾಗಿದ್ದು ಜನರ ಸ್ಪಂದನೆ ಉತ್ತಮವಾಗಿದೆ.

-ರತ್ನಾಕರ ಕುಳಾಯಿ, ಕಾರ್ಯದರ್ಶಿ, ಸಾವಯವ ಕೃಷಿಕ ಬಳಗ

------------------