ಮಂಗಳೂರು: ಉದ್ಯಮ ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಯ ಪ್ರಮುಖ ಕೇಂದ್ರವಾಗಿ ಮಂಗಳೂರು ಹೊರಹೊಮ್ಮುತ್ತಿದೆ ಎಂದು ‘ವರ್ಟೆಕ್ಸ್ ಸಿಎಕ್ಸ್‌ಒ ಕಾನ್‌ಕ್ಲೇವ್‌- ೨೦೨೬’ ಸಮಾವೇಶದಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಡಾ. ಟಿಎಂಎ ಪೈ ಇಂಟರ್‌ ನ್ಯಾಷನಲ್‌ ಕನ್ವೆನ್ಶನ್ ಸೆಂಟರ್‌ನಲ್ಲಿ ವರ್ಟೆಕ್ಸ್ ವರ್ಕ್‌ಸ್ಪೇಸ್ ಆಯೋಜಿಸಿದ್ದ ಮೂರು ದಿನಗಳ ಸಮಾವೇಶದಲ್ಲಿ ಉದ್ಯಮ ವಲಯದ ನಾಯಕರು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮತ್ತು ಸಂಸ್ಥೆಯ ಉನ್ನತ ಮಟ್ಟದ ನಿರ್ವಹಣಾಧಿಕಾರಿಗಳು ಭಾಗವಹಿಸಿ, ಬೆಂಗಳೂರಿನ ಹೊರಗಿನ ಪ್ರದೇಶಗಳಲ್ಲಿ ವ್ಯವಹಾರ ವಿಸ್ತರಣೆಯ ಅವಕಾಶಗಳ ಕುರಿತು ಚರ್ಚಿಸಿದರು. ಮಂಗಳೂರನ್ನು ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಳೆಯುವ ಕೇಂದ್ರವನ್ನಾಗಿ ರೂಪಿಸುವ ಕುರಿತು ಚಿಂತನೆ ನಡೆಯಿತು.ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಹಾಗೂ ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಹೊರಗಿನ ಪ್ರದೇಶಗಳಲ್ಲಿ ಹೂಡಿಕೆ ಹೆಚ್ಚಿಸಲು ರೂಪಿಸಿದ ನೀತಿಗಳನ್ನು ವಿವರಿಸಿದರು.

ಕಿಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ್, ಕೆಡಿಇಎಂನ ಸಮೀರ್ ವೇಣುಗೋಪಾಲ್, ಭರತ್ ಚಂದ್ರ ಬಿ.ಕೆ. ಮತ್ತು ವೈಶಾಕ್ ಪೈ ಅವರು, ಕಂಪನಿಗಳು ದೊಡ್ಡ ನಗರಗಳ ಹೊರಗೂ ವಿಸ್ತರಿಸಲು ಮೂಲಸೌಕರ್ಯ, ಪ್ರತಿಭೆ ಮತ್ತು ನಿಯಮಾತ್ಮಕ ಸೌಲಭ್ಯಗಳಿಗೆ ನೀಡುವ ಪ್ರೋತ್ಸಾಹಗಳನ್ನು ವಿವರಿಸಿದರು.ವರ್ಟೆಕ್ಸ್ ವರ್ಕ್‌ಸ್ಪೇಸ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವಿನಾಯಕ್ ಪಲನಕರ್ ಮಾತನಾಡಿ, ಸಂಸ್ಥೆ ಕೇವಲ ಕಾರ್ಯಸ್ಥಳ ಒದಗಿಸುವುದಲ್ಲ, ವ್ಯವಹಾರ ಬೆಳವಣಿಗೆಗೆ ಸಹಾಯ ಮಾಡುವತ್ತ ಕೆಲಸ ಮಾಡುತ್ತಿದೆ. ಕಂಪನಿಗಳಿಗೆ ನೇಮಕಾತಿ ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುವುದು ಗುರಿಯಾಗಿದೆ ಎಂದು ಅವರು ತಿಳಿಸಿದರು.ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಂಗಳೂರಿನ ಶೈಕ್ಷಣಿಕ ಹಿನ್ನೆಲೆ, ಸುಧಾರಿಸುತ್ತಿರುವ ಮೂಲಸೌಕರ್ಯ ಮತ್ತು ಐಟಿ ಸಂಸ್ಥೆಗಳ ವಿಸ್ತರಣೆಯನ್ನು ಉಲ್ಲೇಖಿಸಿದರು. ಜೊತೆಗೆ ಪ್ರತಿಭೆ ಉಳಿಸಿಕೊಳ್ಳುವುದು ಹಾಗೂ ಉದ್ಯಮ ಸಹಯೋಗವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಉಲ್ಲೇಖಿಸಿದರು.ಎಕ್ಸ್‌ಫೆನೊ ಸಹ-ಸಂಸ್ಥಾಪಕ ಕಮಲ್ ಕಾರಂತ್ ಮಾತನಾಡಿ, ಮಂಗಳೂರು-ಉಡುಪಿ ಪ್ರದೇಶದಲ್ಲಿ ಹೊಸ ಮತ್ತು ಅನುಭವಿ ಉದ್ಯೋಗಿಗಳು ಸಾಕಷ್ಟಿದ್ದರೂ, ಹಿರಿಯ ವೃತ್ತಿಪರರ ಕೊರತೆ ಇದೆ. ಉದ್ಯೋಗಿಗಳು ದೊಡ್ಡ ನಗರಗಳಿಗೆ ಹೋಗುವುದನ್ನು ತಡೆಯಲು ಉತ್ತಮ ನೇಮಕಾತಿ ವ್ಯವಸ್ಥೆ ಮತ್ತು ಸ್ಥಳೀಯ ಸೌಲಭ್ಯಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಇದ್ದರೂ, ಅವನ್ನು ಪಡೆಯುವ ಪ್ರಕ್ರಿಯೆ ಸ್ಪಷ್ಟವಾಗಿಲ್ಲ. ಕಂಪನಿಗಳಿಗೆ ಈ ಸೌಲಭ್ಯಗಳು ಮತ್ತು ಉದ್ಯೋಗಿಗಳ ಸಂಪರ್ಕದಲ್ಲಿ ಸಹಾಯ ಮಾಡುವುದಾಗಿ ವರ್ಟೆಕ್ಸ್ ವರ್ಕ್‌ಸ್ಪೇಸ್ ತಿಳಿಸಿದೆ. ಈ ಸಂದರ್ಭದಲ್ಲಿ ಸಹಕಾರವನ್ನು ಹೆಚ್ಚಿಸಲು ಸಂಸ್ಥೆಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಸಮಾರೋಪದಲ್ಲಿ ವರ್ಟೆಕ್ಸ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಮಾತನಾಡಿ, ಈ ಕಾರ್ಯಕ್ರಮ ಸಮಾವೇಶಕ್ಕೆ ಮಾತ್ರ ಸೀಮಿತವಾಗದೆ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ನಾಯಕತ್ವ ಕಾರ್ಯಕ್ರಮಗಳು, ಉದ್ಯೋಗ ಮೇಳಗಳು ಹಾಗೂ ಉದ್ಯಮಗಳಿಗೆ ಬೆಂಬಲ ನೀಡುವ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.ಕಾರ್ಯಕ್ರಮದಲ್ಲಿ ಉದ್ಯಮ ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಕಾರ್ಯಾಚರಣೆಗೆ ಬೆಂಬಲ ನೀಡುವ ಉದ್ದೇಶದಿಂದ ರೂಪಿಸಲಾದ ವರ್ಟೆಕ್ಸ್ ಅಶೋಕ ಎಂಬ ಮೂಲಸೌಕರ್ಯ ಯೋಜನೆಯನ್ನು ಪರಿಚಯಿಸಲಾಯಿತು. ಇದು ಮಂಗಳೂರಿನ ಬೆಳೆಯುತ್ತಿರುವ ವ್ಯಾಪಾರ ಕೇಂದ್ರದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಹೆಜ್ಜೆಯಾಗಿದೆ.