ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಸಂಯುಕ್ತ ಆಶ್ರಯದಲ್ಲಿ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ ನಗರದ ಕಬ್ಬನ್‌ ಪಾರ್ಕ್‌ನಲ್ಲಿ ಮೇ 8ರಿಂದ 17ರವರೆಗೆ ನಡೆಯಲಿದೆ. ಸಹಜವಾಗಿ ಮಾಗಿದ, ಕಾರ್ಬೈಡ್‌ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಸಂಯುಕ್ತ ಆಶ್ರಯದಲ್ಲಿ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ ನಗರದ ಕಬ್ಬನ್‌ ಪಾರ್ಕ್‌ನಲ್ಲಿ ಮೇ 8ರಿಂದ 17ರವರೆಗೆ ನಡೆಯಲಿದೆ. ಸಹಜವಾಗಿ ಮಾಗಿದ, ಕಾರ್ಬೈಡ್‌ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ.

ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಹಾಗೂ ಗ್ರಾಹಕರಿಗೆ ಗುಣಮಟ್ಟದ ರಾಸಾಯನಿಕ ರಹಿತ ಹಣ್ಣುಗಳನ್ನು ಒದಗಿಸುವುದು ಮೇಳದ ಉದ್ದೇಶ. ಮಾವು, ಹಲಸಿನ ವಿವಿಧ ತಳಿಗಳನ್ನು ವೀಕ್ಷಿಸುವ ಮತ್ತು ಸವಿಯುವ ಅವಕಾಶ ಇಲ್ಲಿ ದೊರೆಯಲಿದೆ ಎಂದು ನಿಗಮದ ಅಧ್ಯಕ್ಷ ಡಾ.ಬಿ.ಸಿ. ಮುದ್ದುಗಂಗಾಧರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

70ಕ್ಕೂ ಅಧಿಕ ಮಳಿಗೆ:

ರಾಮನಗರ, ಮಂಡ್ಯ, ತುಮಕೂರು, ಉತ್ತರ ಕನ್ನಡ ಜಿಲ್ಲೆಗಳ ಮಾವು- ಹಲಸು ಬೆಳೆಗಾರರ 70ಕ್ಕೂ ಅಧಿಕ ಮಳಿಗೆಗಳು ಮೇಳದಲ್ಲಿ ಇರಲಿವೆ. ಭಾಗವಹಿಸುವ ರೈತರಿಗೆ ಯಾವುದೇ ಪ್ರವೇಶ ಶುಲ್ಕ ವಿಧಿಸಲಾಗುವುದಿಲ್ಲ ಎಂದರು.

ಜಿಐ ಮಾನ್ಯತೆ ಹೊಂದಿರುವ ಕರಿ ಇಶಾಡ್‌ (ಉತ್ತರ ಕನ್ನಡ), ಬಾದಾಮಿ, ಮಲ್ಲಿಕಾ, ಸೆಂದೂರಾ, ರಸಪೂರಿ, ಚಾಲ್ತಿ ಮತ್ತಿತರ ಮಾವಿನ ತಳಿಗಳು, ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ, ತೂಬಗೆರೆ, ಲಾಲ್‌ಬಾಗ್‌ ಹಲಸಿನ ಹಣ್ಣು ಇಲ್ಲಿ ಖರೀದಿಗೆ ಲಭ್ಯ. ಮೇಳದ ಉದ್ಘಾಟನೆ ಮೇ 8ರಂದು ಮಧ್ಯಾಹ್ನ 12.15ಕ್ಕೆ ನಡೆಯಲಿದೆ ಎಂದು ಮುದ್ದುಗಂಗಾಧರ್‌ ತಿಳಿಸಿದರು.

ಇತರೆಡೆಯೂ ಮಾವು ಮೇಳ:

ಈ ಬಾರಿ ಕೋಲಾರದಲ್ಲಿ ಮಾವು ಕಟಾವು ವಿಳಂಬವಾಗಿದ್ದು, ಅಲ್ಲಿ ಕಟಾವು ಆರಂಭವಾದೊಡನೆ ನಗರದ ವಿವಿಧ ಕಡೆಗಳಲ್ಲಿ ಮಾವು ಮೇಳ ಆಯೋಜಿಸುವ ಉದ್ದೇಶವಿದೆ ಎಂದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್‌. ವೇದಮೂರ್ತಿ ಇದ್ದರು.

ಮಾವು ಇಳುವರಿ ಶೇ.60 ಕುಸಿತ!

ರಾಜ್ಯದಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವು ಇಳುವರಿ ಶೇ.60-70ರಷ್ಟು ಕುಸಿದಿದೆ. ಅಕಾಲಿಕ ಮಳೆ, ಬೇಸಗೆಯ ಅಧಿಕ ಉಷ್ಣಾಂಶದ ಕಾರಣದಿಂದಲೂ ಬೆಳೆ ನಷ್ಟವಾಗುತ್ತಿದೆ. ಶೇ.33ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದ ರೈತರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೆರವು ನೀಡಲು ಸೂಚಿಸಲಾಗಿದೆ. ಅನೇಕ ಕಡೆಗಳಲ್ಲಿ ಹವಾಮಾನ ವೈಪರೀತ್ಯದಿಂದ ಹೂ ಬಿಡುವ ಪ್ರಕ್ರಿಯೆ ತಡವಾಗಿದ್ದರಿಂದ ವಿವಿಧ ಹಂತಗಳಲ್ಲಿ ಬೆಳೆ ಕಟಾವಿಗೆ ಬರುತ್ತಿದೆ. ಇದರಿಂದ ಈ ಬಾರಿ ಮಾವಿನ ಹಣ್ಣು ಲಭ್ಯವಾಗುವ ಅವಧಿಯೂ ಹೆಚ್ಚಾಗಲಿದೆ ಎಂದು ಮುದ್ದು ಗಂಗಾಧರ್ ಹೇಳಿದರು.