ಮಾವು ಮೇಳಕ್ಕೆ ತೆರೆ: ₹2.60 ಕೋಟಿಗೂ ಅಧಿಕ ವಹಿವಾಟು

| Published : May 26 2025, 11:47 PM IST

ಸಾರಾಂಶ

ಕೊಪ್ಪಳ ಮಾವು ವೇಳದಲ್ಲಿ 280 ಟನ್‌ಗೂ ಹೆಚ್ಚಿನ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ರೈತರು ಮಾರಾಟ ಮಾಡಿದ್ದು ₹2.60 ಕೋಟಿಗೂ ಹೆಚ್ಚಿನ ವಹಿವಾಟು ದಾಖಲಾಗಿದೆ. ಮೇಳದಲ್ಲಿ 30 ಮಳಿಗೆಗಳನ್ನು ತೆರದಿದ್ದು ಜಿಲ್ಲೆಯ ಎಲ್ಲ ತಾಲೂಕುಗಳ ರೈತರು 15ಕ್ಕೂ ಹೆಚ್ಚಿನ ತಳಿಯ ಹಣ್ಣು ಮಾರಾಟ ಮಾಡಿದರು.

ಕೊಪ್ಪಳ:

ನಗರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ 14 ದಿನಗಳ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸೋಮವಾರ ತೆರೆ ಬಿದ್ದಿದ್ದು, ₹2.60 ಕೋಟಿಗೂ ಅಧಿಕ ವಹಿವಾಟು ನಡೆದಿದೆ.

ಮಾವು ಬೆಳೆಯುವ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ 9ನೇ ವರ್ಷದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿತ್ತು.

ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ರೈತರಿಗೆ ಪ್ರಮಾಣಪತ್ರ ವಿತರಿಸಿದರು. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಹಿರಿಯ ಸಹಾಯಕ ನಿರ್ದೇಶಕ ಜೆ. ಶಂಕ್ರಪ್ಪ ಉಪಸ್ಥಿತರಿದ್ದರು.

9ನೇ ವರ್ಷದ ಮಾವು ಮೇಳ:

ಈ ವೇಳದಲ್ಲಿ 280 ಟನ್‌ಗೂ ಹೆಚ್ಚಿನ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ರೈತರು ಮಾರಾಟ ಮಾಡಿದ್ದು ₹2.60 ಕೋಟಿಗೂ ಹೆಚ್ಚಿನ ವಹಿವಾಟು ದಾಖಲಾಗಿದೆ. ಮೇಳದಲ್ಲಿ 30 ಮಳಿಗೆಗಳನ್ನು ತೆರದಿದ್ದು ಜಿಲ್ಲೆಯ ಎಲ್ಲ ತಾಲೂಕುಗಳ ರೈತರು 15ಕ್ಕೂ ಹೆಚ್ಚಿನ ತಳಿಯ ಹಣ್ಣು ಮಾರಾಟ ಮಾಡಿದರು. ಕೇಸರ್ ಮತ್ತು ದಶಹರಿ ತಳಿಯ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, 200 ಟನ್‌ಗೂ ಹೆಚ್ಚು ಮಾರಾಟವಾಗಿದೆ. ಬೆನೆಶಾನ್, ಕೇಸರ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೂಸ್‌, ಮಲ್ಲಿಕಾ, ತೋತಾಪುರಿ, ಸಕ್ಕರೆ ಗುಟ್ಟಿ, ಖಾದರ್, ಪುನಾಸ್ ಮತ್ತು ಉಪ್ಪಿನಕಾಯಿಯ ವಿವಿಧ ತಳಿಯ ಮಾವಿನ ಹಣ್ಣುಗಳು 80 ಟನ್‌ಗೂ ಹೆಚ್ಚು ಮಾರಾಟವಾಗಿದೆ.

ಮಿಯಾಜಾಕಿ ಮಾವಿನ ಹಣ್ಣಿನ ಹವಾ:

ಮಿಯಾಜಾಕಿ ಮೇಳದಲ್ಲಿ ಹವಾ ಸೃಷ್ಟಿಸಿತ್ತು. 120ಕ್ಕೂ ಹೆಚ್ಚು ತಳಿ ಹಣ್ಣುಗಳ ಪ್ರದರ್ಶನ ಏರ್ಪಡಿಸಿದ್ದು 500ಕ್ಕೂ ಹೆಚ್ಚು ಹಣ್ಣಿನ ಗಿಡ ಮಾರಾಟವಾದವು. ಈ ತಳಿಯ ಮಾವಿನ ಸಸಿಗಳನ್ನು ವಿವಿಧ ನರ್ಸರಿಗಳಿಂದ ತಂದು ಜಿಲ್ಲೆಯಲ್ಲಿ ಬೆಳೆಯುತ್ತಿದ್ದು, ಮುಂದಿನ ವರ್ಷಗಳಲ್ಲಿ ಕೊಪ್ಪಳ ಮಾವು ಮೇಳದಲ್ಲಿ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆ ಇದೆ.

ಕೇಸರ್ ಮಾವಿನ ಬ್ರಾಂಡ್ ಬಾಕ್ಸ್‌ಗೆ ಬೇಡಿಕೆ:

ಕೊಪ್ಪಳ ಕೇಸರ್ ತಳಿಯ ಮಾವಿಗೆ ಹೆಚ್ಚಿನ ಬೇಡಿಕೆ ಬಂದು 2.50 ಕೆಜಿಯ 10 ಸಾವಿರಕ್ಕೂ ಹೆಚ್ಚಿನ ಬಾಕ್ಸ್‌ಗಳನ್ನು ವಿವಿಧ ನಗರಗಳಿಗೆ ಕಳುಹಿಸಲಾಯಿತು. ಮುಂದಿನ ದಿನಗಳಲ್ಲಿ ಕೇಸರ್ ತಳಿಯನ್ನು ಅಧಿಕ ಸಾಂದ್ರತೆ ಬೇಸಾಯ ಪದ್ಧತಿಯಲ್ಲಿ 2000ಕ್ಕೂ ಹೆಚ್ಚಿನ ಎಕರೆ ಪ್ರದೇಶದಲ್ಲಿ ಕೈಗೊಳ್ಳುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮೇಳದಲ್ಲಿ 40 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು, ₹2.60 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದೆ.