ಮಾರುಕಟ್ಟೆಗೆ ಲಗ್ಗೆ ಇಟ್ಟ ಹಣ್ಣುಗಳ ರಾಜ ಮಾವು

| Published : Apr 03 2024, 01:30 AM IST

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಮಳೆಯು ಕಡಿಮೆಯಾಗಿದ್ದರಿಂದ ಮಾವು ಬೆಳೆಯು ಕುಂಠಿತವಾಗಿದೆ. ಇದರಿಂದ ಆರಂಭದಲ್ಲಿ ಮಾವಿನ ಹಣ್ಣಿನ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ

ಅಶೋಕ ಸೊರಟೂರ ಲಕ್ಷ್ಮೇಶ್ವರ

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಆಗಮಿಸುವ ಮೂಲಕ ಮಾವು ಪ್ರಿಯರಲ್ಲಿ ಸವಿಯುವ ಆಸೆ ಹುಟ್ಟುವಂತೆ ಮಾಡಿದೆ.

ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವಂತೆ ಮಾವಿನ ಹಣ್ಣಿನ ಗ್ರಾಹಕರು ಬೆಲೆ ಕೇಳಿ ದೂರದಿಂದಲೇ ನೋಡಿ ಕಹಿ ಅನುಭವಿಸುವಂತಾಗಿದೆ.

ಮಾವು ಬೆಳೆ ಕುಸಿತ- ಬೆಲೆ ಏರಿಕೆ:

ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಮಳೆಯು ಕಡಿಮೆಯಾಗಿದ್ದರಿಂದ ಮಾವು ಬೆಳೆಯು ಕುಂಠಿತವಾಗಿದೆ. ಇದರಿಂದ ಆರಂಭದಲ್ಲಿ ಮಾವಿನ ಹಣ್ಣಿನ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ ಎಂದರೆ ತಪ್ಪಾಗಲಾರದು.

ಈಗ ಮಾರುಕಟ್ಟೆಯಲ್ಲಿ ಆಫೂಸ್ ಮಾವಿನ ಹೆಣ್ಣಿನ ಬೆಲೆಯು ಕೆಜಿಗೆ ₹250 ರಿಂದ ₹ 500 ವರೆಗೆ ಇದ್ದು, ಗ್ರಾಹಕರು ಜೇಬಿನ ಮೇಲೆ ಕೈ ಇಟ್ಟುಕೊಳ್ಳುವುದು ಗ್ಯಾರಂಟಿಯಾಗಿದೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಸುಮಾರು 125 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು. ಈ ವರ್ಷ ಯಾವುದೇ ತೋಟದಲ್ಲಿಯೂ ಮಾವಿನ ಫಸಲು ಅಷ್ಟೊಂದು ಉತ್ತಮವಾಗಿಲ್ಲ.

ಲಕ್ಷಾಂತರ ಖರ್ಚು ಮಾಡಿದ್ದರೂ ಇಳುವರಿ ಬಾರದ ಕಾರಣ ಖರ್ಚು ಮಾಡಿದ ಹಣ ವಾಪಸ್ ಬಾರದಂತಾಗಿದೆ ಎನ್ನುತ್ತಾರೆ ಉಂಡೇನಹಳ್ಳಿಯ ರೈತ ಬಸವರಾಜ ಗುಡ್ಡಳ್ಳಿ.

ಮಾವು ಇಳುವರಿ ಕುಂಠಿತಕ್ಕೆ ಕಾರಣ: ತಾಲೂಕಿನಲ್ಲಿ ಮಾವು ಇಳುವರಿ ಕುಂಠಿತವಾಗಲು ಮುಂಗಾರು ಹಂಗಾಮಿನ ಮಳೆಯು ಕಡಿಮೆಯಾಗಿರುವ ಜತೆಯಲ್ಲಿ ನವೆಂಬರ್ ತಿಂಗಳಲ್ಲಿ ಮಾವಿನ ಗಿಡಗಳು ಹೂವು ಬಿಡುವ ಸಮಯದಲ್ಲಿ ಸುರಿದ ಅಕಾಲಿಕ ಮಳೆಯೂ ಪ್ರಮುಖವಾಗಿದೆ. ಇದರಿಂದ ಹೂವು ಕಟ್ಟುವ ಬದಲು ಮಾವಿನ ಗಿಡದಲ್ಲಿ ಎಲೆಗಳು ಚಿಗುರಲು ಆರಂಭಿಸಿದ್ದರಿಂದ ಹೂವು ಕಟ್ಟುವಲ್ಲಿ ವಿಳಂಬವಾಗಿ ಫಸಲು ಹೆಚ್ಚು ಬಂದಿಲ್ಲ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ. ಸುರೇಶ ಕುಂಬಾರ ಹೇಳುತ್ತಾರೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಸುಮಾರು 125 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಆಫೂಸ್‌ ಮಾವಿನ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದೆ.

ಬೇಸಿಗೆ ಆರಂಭದಲ್ಲಿ ಪಟ್ಟಣಕ್ಕೆ ಆಗಮಿಸಿದ ಮಾವಿನ ಹಣ್ಣಿನ ಬೆಲೆ ಕೇಳಿ ಗ್ರಾಹಕರು ವಿಚಾರ ಮಾಡುವಂತಾಗಿದೆ. ಆರಂಭದಲ್ಲಿ ಕೊಂಚ ಹಿಂಜರಿಕೆ ಕಂಡುಬರುತ್ತಿದೆ ಎನ್ನುತ್ತಾರೆ ನೂರಸಾಬ ಗವಾರಿ.