ಸಾರಾಂಶ
ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆಯ ಮಾವು - ಹಲಸು ಮೇಳಕ್ಕೆ ಚಾಲನೆ ದೊರೆತಿದ್ದು, ಮನಸ್ಸೋಯಿಚ್ಛೆ ದರ ನಿಗದಿ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಮಾವು ಮತ್ತು ಹಲಸು ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಈ ಮೇಳವು ಜೂ.10ರವರೆಗೆ ನಡೆಯಲಿದೆ. ಮೇಳದಲ್ಲಿ ಸುಮಾರು 100 ಮಳಿಗೆಗಳನ್ನು ತೆರೆಯಲಾಗಿದ್ದು 74 ಮಳಿಗೆಗಳು ಮಾವು ಬೆಳೆಗಾರರಿಗೆ, 12 ಮಳಿಗೆ ಹಲಸು ಬೆಳೆಗಾರರಿಗೆ ಮತ್ತು 14 ಮಳಿಗೆಗಳನ್ನು ಇತರೆ ಹಣ್ಣಿನ ಉತ್ಪನ್ನಗಳ ಮಾರಾಟಕ್ಕೆ ಒದಗಿಸಲಾಗಿದೆ. ಮೇಳ ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಕಾರ್ಬೈಡ್ ಮುಕ್ತ ಹಾಗೂ ಸಹಜವಾಗಿ ಮಾಗಿಸಿದ ಹಣ್ಣುಗಳನ್ನು ರೈತರ ತೋಟಗಳಿಂದ ನೇರವಾಗಿ ಗ್ರಾಹಕರಿಗೆ ಒದಗಿಸುವುದು ಮೇಳದ ಉದ್ದೇಶ. ಈ ಬಾರಿ 1000 ಟನ್ ಮಾವು ಮತ್ತು 2-3 ಸಾವಿರ ಹಲಸಿನ ಹಣ್ಣುಗಳ ಮಾರಾಟದ ಗುರಿ ಹೊಂದಲಾಗಿದೆ.ದುಬಾರಿ ಮೇಳ?:
ಮೇಳದಲ್ಲಿ ಮಾವು ಮತ್ತು ಹಲಸಿನ ಮಾರಾಟ ದರವನ್ನು ಎಲ್ಲಿಯೂ ಪ್ರದರ್ಶಿಸಿಲ್ಲ. ಹೀಗಾಗಿ ಮಾವು ಮಾರಾಟಗಾರರು ತಮ್ಮ ಮನಸ್ಸಿಗೆ ಬಂದ ದರವನ್ನು ಗ್ರಾಹಕರಿಂದ ಪಡೆಯುತ್ತಿದ್ದಾರೆ. ಮಲ್ಲಿಕಾ, ಮಲಗೋವಾ ಸೇರಿದಂತೆ ಇತರೆ ತಳಿಗಳ ಮಾವನ್ನು ಮಾವು ಅಭಿವೃದ್ಧಿ ನಿಗಮ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ. ಒಂದು ಮಳಿಗೆಯಲ್ಲಿ ಒಂದು ದರವಿದ್ದರೆ, ಪಕ್ಕದ ಮಳಿಗೆಯಲ್ಲಿ ಮತ್ತೊಂದು ದರ ಇದೆ. ಇದರಿಂದ ಗ್ರಾಹಕರು ಕೂಡ ಗೊಂದಲಕ್ಕೆ ಒಳಗಾಗುತ್ತಿದ್ದಾರೆ ಆರೋಪ ಕೇಳಿಬಂದಿದೆ. ಮೇಳದಲ್ಲಿ ತರೇವಾರಿ ಮಾವುಗಳಿದ್ದರೂ ಬೆಲೆಯೂ ಒಂದೊಂದು ಮಳಿಗೆಯಲ್ಲಿ ಒಂದೊಂದು ರೀತಿ ಇದೆ. ಮಾವು ನಿಗಮ ಈ ಗೊಂದಲ ನಿವಾರಿಸಬೇಕೆಂದು ಗ್ರಾಹಕರು ಆಗ್ರಹಿಸಿದ್ದಾರೆ.ಪ್ರತಿ ಮಳಿಗೆಯಲ್ಲಿ ದರಪಟ್ಟಿ ಹಾಕಿ
ಮೇಳದಲ್ಲಿ ಮಾವು ಅಭಿವೃದ್ಧಿ ನಿಗಮ ಯಾವುದೇ ರಿಯಾಯಿತಿ ಘೋಷಿಸಿಲ್ಲ. ಆದರೆ, ಈಗಾಗಲೇ ನಿಗದಿ ಮಾಡಿರುವಂತ ದರಪಟ್ಟಿಯನ್ನಾದರೂ ಪ್ರದರ್ಶಿಸಬೇಕು. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದ್ದು, ಮಾರಾಟಗಾರರು ತಮ್ಮ ಮನಸ್ಸಿಗೆ ಬಂದಂತೆ ದರವನ್ನು ಹೇಳುವುದು ತಪ್ಪುತ್ತದೆ. ಗ್ರಾಹಕರಿಗೆ ಉತ್ತಮ ಹಣ್ಣು ಮತ್ತು ಮಾವು, ಹಲಸು ಬೆಳೆಗಾರರಿಗೆ ಉತ್ತಮ ದರವೂ ಸಿಗಲು ಸಹಕಾರಿಯಾಗುತ್ತದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.