ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಇಲ್ಲಿನ ಎಪಿಎಂಸಿಯ ವಿವಿದೋದ್ದೇಶ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಶನಿವಾರ ಮತ್ತು ಭಾನುವಾರ ನಡೆಯುತ್ತಿರುವ ಜಿಲ್ಲಾ ಮಟ್ಟದ ಮಾವು ಮೇಳವು ಮಾವು ಪ್ರಿಯರಲ್ಲಿ ಹಬ್ಬದ ವಾತಾವರಣವನ್ನುಂಟು ಮಾಡಿದೆ.

ಜಿಲ್ಲಾಡಳಿತದ ಸಹಯೋಗದಲ್ಲಿ ನಡೆಯುತ್ತಿರುವ ಮೇಳದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ವೇದಿಕೆಯಾಗಿದೆ ನೈಸರ್ಗಿಕವಾಗಿ ಮಾಗಿಸಿದ, ರಾಸಾಯನಿಕ ಮುಕ್ತ ಮಾವು ಮೇಳದ ವಿಶೇಷ.

ಮೇಳದಲ್ಲಿ ಕಲ್ಮಿ, ಕರಿ ಇಷಾಡ, ಧಾರವಾಡ ಆಪೂಸ್, ರತ್ನಗಿರಿ ಆಪೂಸ್, ದೇವಗಡ ಆಪೂಸ್, ಕೊಪ್ಪಳ ಕೇಸರ, ಮಲ್ಲಿಕಾ, ಬಾದಾಮಿ, ರಸಪುರಿ, ಮಲ್ಲಿಕಾ, ಮಲ್ಗೋವಾ, ಬಾಳು ಮಾವು ಮಾರಾಟಕ್ಕಿರಿಸಲಾಗಿದೆ. ಮಿಯಾಜಾಕಿ, ಹಿಮಸಾಗರ, ರತ್ನಾ, ಪೈರಿ, ರಸಪೂರಿ, ಲಕನೌ ಸಫೇದ್, ಬಪ್ಪಾ ಕಾಯಿ ಸೇರಿದಂತೆ ಹತ್ತು ಹಲವು ಬಗೆಯ ತಳಿಗಳ ಮಾವು ಪ್ರದರ್ಶನಕ್ಕಿವೆ. ಧಾರವಾಡ, ಕೊಪ್ಪಳ, ಹಾವೇರಿ, ಗದಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ 30ಕ್ಕೂ ಅಧಿಕ ಮಾವು ಬೆಳೆಗಾರರು ಪಾಲ್ಗೊಂಡಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿ - ಧಾರವಾಡ ಮಹಾನಗರದ ಜನತೆಗೆ ಮಾವು ಮೇಳ ಬಗೆ ಬಗೆಯ ಹಣ್ಣಿನ ರುಚಿ ತೋರಿಸುತ್ತಿರುವುದಂತೂ ಸತ್ಯ.


ಮಾವು ಮೇಳದ ಕುರಿತು ಇನ್ನೂ ಹೆಚ್ಚಿನ ಪ್ರಚಾರವಾಗಬೇಕಿತ್ತು. ಹೆಚ್ಚೆಚ್ಚು ಪ್ರಚಾರವಾದರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿ ವ್ಯಾಪಾರ ಮಾಡಲು ಅನಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಹೆಚ್ಚಿನ ಪ್ರಚಾರ ನೀಡುವಂತಾಗಲಿ ಎಂದು ಮಾವು ಬೆಳೆಗಾರ ಹನುಮಂತ ಸಾಲಿ ಹೇಳಿದರು.