ಮುಂಡಗೋಡದಲ್ಲಿ ಮಾವಿನ ಹಣ್ಣಿನ ವ್ಯಾಪಾರ ಬಲು ಜೋರು

| Published : Apr 20 2025, 01:45 AM IST

ಸಾರಾಂಶ

ಹಣ್ಣಿನರಾಜ ಮಾವಿನಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾವಿನಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಸಂತೋಷ ದೈವಜ್ಞ

ಮುಂಡಗೋಡ: ಹಣ್ಣಿನರಾಜ ಮಾವಿನಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾವಿನಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮಾವಿನಕಾಯಿ ಕತ್ತರಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಎಲ್ಲೆಂದರಲ್ಲಿ ಮಾವಿನ ಮಂಡಿಗಳು ತೆರೆದುಕೊಳ್ಳುತ್ತಿವೆ. ಮಾವಿನ ವ್ಯಾಪಾರ ವಹಿವಾಟು ಬಲು ಜೋರಾಗಿದ್ದು, ಮಾವು ಬೆಳೆಗಾರರು, ದಲ್ಲಾಳಿಗಳು ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮಾರುಕಟ್ಟೆಗೆ ಲಗ್ಗೆ:

ಈಗಾಗಲೇ ಸಾಕಷ್ಟು ಪ್ರಮಾಣದ ಮಾವಿನಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾವಿನ ಕಣಜ ಎಂದೇ ಪ್ರಸಿದ್ಧವಾಗಿರುವ ತಾಲೂಕಿನ ಪಾಳಾ ಭಾಗದ ಶಿರಸಿ-ಹುಬ್ಬಳ್ಳಿ ಹೆದ್ದಾರಿ ಅಂಚಿನ ತೋಟಗಳ ಮಾಲಿಕರು ರಸ್ತೆ ಪಕ್ಕದಲ್ಲಿಯೇ ಹಣ್ಣು ಮಾರಾಟದಲ್ಲಿ ನಿರತರಾಗಿದ್ದಾರೆ. ನಿತ್ಯ ಈ ಮಾರ್ಗವಾಗಿ ಸಾವಿರಾರು ಸಂಖ್ಯೆಯ ವಾಹನಗಳು ಸಂಚರಿಸುವುದರಿಂದ ಇಲ್ಲಿ ಮಾವಿನ ಹಣ್ಣಿನ ವ್ಯಾಪಾರ ವಹಿವಾಟು ಕೂಡ ಜೋರಾಗಿ ನಡೆಯುತ್ತಿದೆ. ಪ್ರಮುಖವಾಗಿ ಆಪೂಸ್, ಪೈರಿ, ಮಾನಕೂರ ತಳಿಯ ಕೆಜಿ ಮಾವಿನ ಹಣ್ಣಿಗೆ ₹೧೫೦ರಿಂದ ₹೨೦೦ರವರೆಗೆ ದರ ನಿಗದಿ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಮಾವಿನ ಫಸಲು ಮಾರುಕಟ್ಟೆಗೆ ಬಂದರೆ ದರ ಕುಸಿಯಲಿದೆ ಎನ್ನುತ್ತಾರೆ ರೈತರು. ಇಲ್ಲಿಯ ಬಹುತೇಕ ರೈತರು ಮಳೆಯಾಶ್ರಿತ ಬತ್ತದ ಬೆಳೆಯನ್ನೇ ಅವಲಂಬಿಸಿರುವುದರಿಂದ ಬತ್ತ ಹೊರತುಪಡಿಸಿ ಇನ್ನಾವುದೇ ಬೆಳೆ ಬೆಳೆಯಲಾಗುವುದಿಲ್ಲ. ಪರ್ಯಾಯ ವಾಣಿಜ್ಯ ಬೆಳೆಯಾಗಿ ಮಾವಿನ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕಿನ ಪಾಳಾ ಹೋಬಳಿ ಭಾಗದ ಬಹುಸಂಖ್ಯಾತ ರೈತರಿಗೆ ಮಾವಿನ ಆದಾಯ ಕೂಡ ಪ್ರಮುಖವಾಗಿದೆ.

ರಫ್ತು:

ಆಪೂಸ್, ಇಶಾಡ್, ಪೈರಿ, ಮಲಗೋಬಾ, ಮಾನಕೂರ, ಸಿಂದೂಲಾ ಸೇರಿದಂತೆ ಅನೇಕ ತಳಿಯ ಮಾವು ಇಲ್ಲಿಂದ ಹುಬ್ಬಳ್ಳಿ, ಬೆಂಗಳೂರು, ಮುಂಬೈ ಸೇರಿದಂತೆ ವಿವಿದ ರಾಜ್ಯಗಳ ಪಾನಿಯ ಕಂಪನಿಗಳಿಗೆ ರಪ್ತಾಗುತ್ತದೆ. ಪಾಳಾ ಭಾಗದಲ್ಲಿ ಹತ್ತಾರು ಮಾವು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ನಿತ್ಯ ಸಂಜೆ ಸುತ್ತಮುತ್ತಲಿನ ಮಾವಿನ (ಹರಾಜು) ಸವಾಲು ಕೂಡ ನಡೆಯುತ್ತದೆ. ನೂರಾರು ಮಾವು ಬೆಳೆಗಾರ ರೈತರು, ವ್ಯಾಪಾರಸ್ಥರು, ದಲ್ಲಾಳಿಗಳು ಇದರಲ್ಲಿ ಪಾಲ್ಗೊಂಡು ಮಾವು ಖರೀದಿಸಲು ಪೈಪೋಟಿ ನಡೆಸುತ್ತಾರೆ. ಇದು ಮಾವಿನ ಸುಗ್ಗಿ ಮುಗಿಯುವವರೆಗೂ ನಿರಂತರವಾಗಿ ನಡೆಯುತ್ತದೆ.

ಮಾರುಕಟ್ಟೆ ಅವ್ಯವಸ್ಥೆ:

ಅಪಾರ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದ್ದರೂ ಇಲ್ಲಿ ಯಾವುದೇ ರೀತಿ ಮಾವಿಗೆ ಬೆಂಬಲ ಬೆಲೆ ಹಾಗೂ ಮಾವು ಬೆಳೆಗಾರರ ಅನುಕೂಲಕ್ಕಾಗಿ ಮಾವು ಖರೀದಿ ಕೆಂದ್ರ ಸೇರಿದಂತೆ ಯಾವುದೇ ಸೌಕರ್ಯವನ್ನು ಒದಗಿಸಲಾಗಿಲ್ಲ. ಇದರಿಂದ ಇಲ್ಲಿಯ ಮಾವು ಬೆಳೆಗಾರರು ದೂರದ ಹುಬ್ಬಳ್ಳಿ, ಬೆಂಗಳೂರು ಮುಂತಾದ ನಗರಗಳಿಗೆ ತೆರಳಿ ವ್ಯವಹರಿಸಬೇಕಾದ ಅನಿವಾರ್ಯತೆ ಇದೆ. ಇಲ್ಲಿಯೇ ಬೆಂಬಲ ಬೆಲೆ ಕಲ್ಪಿಸುವ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಇಂತಹ ಸಮಸ್ಯೆಯಾಗುವುದಿಲ್ಲ ಎಂಬುವುದು ಇಲ್ಲಿಯ ಮಾವು ಬೆಳೆಗಾರರ ವಾದ

ಈ ಬಾರಿ ಉತ್ತಮ ಫಸಲು ಬಂದಿದೆ. ಮಾವಿನ ಮಂಡಿಗಳಲ್ಲಿ ಉತ್ತಮ ದರ್ಜೆಯ ಆಪೂಸ್ ಮಾವಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆ. ಬೆಳೆದಿರುವ ಪೂರ್ಣ ಪ್ರಮಾಣದ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟರೆ ಮಾವಿನ ಬೆಲೆಯಲ್ಲಿ ಕುಸಿತ ಕಾಣಲಿದೆ ಎನ್ನುತ್ತಾರೆ ಮಾವು ಬೆಳೆಗಾರ ರೈತ ಮಹ್ಮದಗೌಸ ಪಾಟೀಲ.