ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿಯೂ ಮಾವು ಇಳುವರಿ ತೀವ್ರ ಕುಸಿತ ಕಂಡಿದ್ದು, ಎಪಿಎಂಸಿ ಮಾರುಕಟ್ಟೆಗಳಲ್ಲಿ ಮಾವಿನ ಆವಕವೂ ಕಡಿಮೆಯಾಗಿರುವ ಕಾರಣ ದರ ಹೆಚ್ಚಿದೆ.
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಹವಾಮಾನ ವೈಪರೀತ್ಯದಿಂದಾಗಿ ಈ ಬಾರಿಯೂ ಮಾವು ಇಳುವರಿ ತೀವ್ರ ಕುಸಿತ ಕಂಡಿದ್ದು, ಎಪಿಎಂಸಿ ಮಾರುಕಟ್ಟೆಗಳಲ್ಲಿ ಮಾವಿನ ಆವಕವೂ ಕಡಿಮೆಯಾಗಿರುವ ಕಾರಣ ದರ ಹೆಚ್ಚಿದೆ.
ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾದ ಮಾವು ಸದ್ಯ ಬೆಳೆಗಾರರ ಕೈ ಹಿಡಿದಿಲ್ಲ. ಪ್ರಾರಂಭದಲ್ಲಿ ಮಾವಿನ ಮರಗಳಲ್ಲಿ ವ್ಯಾಪಕವಾಗಿ ಹೂ ಬಿಟ್ಟಿತ್ತು. ಹೀಗಾಗಿ ಮಾವು ಬೆಳೆಗಾರರು ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಹೂ ಹಾಳಾಗಿ ಕಾಯಿ ಕಟ್ಟಿಲ್ಲ. ಸರಿಯಾದ ಇಬ್ಬನಿ ಬೀಳದೆ, ಮಳೆ ಕೂಡ ಬಾರದೇ ಮರಗಳಲ್ಲಿ ಕಾಯಿ ಕಟ್ಟುತ್ತಿಲ್ಲ. ಅರ್ಧದಷ್ಟು ಬೆಳೆ ಕೈಕೊಟ್ಟಿದೆ.ಈ ಬಾರಿ ಮಾವಿನಲ್ಲಿ ಹೆಚ್ಚಿನ ಫಸಲು ಜಿಲ್ಲೆಯಲ್ಲಿ ಕಾಣುತ್ತಿಲ್ಲ. ವಿರಳವಾಗಿ ಹೂವು ಬಿಟ್ಟಿದ್ದ ತೋಟಗಳಲ್ಲಿ ಫಸಲು ಬೆರೆಳೆಣಿಕೆಯಷ್ಟಿದೆ. ಬಿಸಿಲ ಝಳಕ್ಕೆ ಹೂವು ಉದುರಿ ಕಾಯಿ ಕಚ್ಚದೆ ಮಾವಿನ ತೋಟಗಳು ಬರಡಾಗಿವೆ. ಮಾವಿನ ತೋಟ ಗುತ್ತಿಗೆ ಪಡೆದ ಮಾರಾಟಗಾರರು ಮತ್ತು ರೈತರು ಆರ್ಥಿಕವಾಗಿ ನಷ್ಟ ಅನುಭವಿಸುವ ಭೀತಿ ಕಾಡುತ್ತಿದೆ.
ಬಿಸಿಲಿನ ಝಳ, ಜೋನಿ, ಬೂದು ರೋಗ ಹೊಡೆತದಿಂದ ಶೇ.10 ಫಸಲು ಸಿಗುವುದು ಕಷ್ಟವಾಗಿದೆ. ಮರಗಳಲ್ಲಿ ವಿರಳವಾಗಿ ಕಾಯಿಗಳು ಕಚ್ಚಿದ್ದು, ಅವು ದಪ್ಪವಾಗಿಲ್ಲ. ಈವರೆಗೆ ಔಷಧಿಗಾಗಿ ಮಾಡಿರುವ ಖರ್ಚಿನ ಹಣವೂ ಸಿಗುತ್ತದೆಯೊ ಇಲ್ಲವೊ ಎಂಬ ಆತಂಕ ಬೆಳೆಗಾರರದ್ದಾಗಿದೆ.ಮಾರುಕಟ್ಟೆಗೆ ಮಾವು ಆಗಮನ:
ರಾಮನಗರ-ಚನ್ನಪಟ್ಟಣ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರ್ಚ್ ಮೊದಲ ವಾರವೇ ಮಾವು ಮಂಡಿಗಳು ತೆರೆಯುತ್ತಿದ್ದವು. ಆದರೆ ಈ ಬಾರಿ ಫಸಲಿನ ಕೊರತೆಯಿಂದ ಮಾರ್ಚ್ ಕೊನೆಯ ವಾರದಲ್ಲಿ ಒಂದೊಂದೆ ಮಾವಿನ ಮಂಡಿಗಳು ಬಾಗಿಲು ತೆರೆಯುತ್ತಿವೆ. ಮಂಡಿ ವರ್ತಕರು ರೈತರಿಂದ ಮಾವು ಖರೀದಿಸಿ ಬೆಂಗಳೂರು ಸೇರಿದಂತೆ ಮಹಾರಾಷ್ಟ್ರ, ಬಾಂಬೆ, ಹರಿಯಾಣ ರಾಜ್ಯಗಳ ಜೊತೆಗೆ ಮಾವು ಉತ್ಪನ್ನ, ತಂಪು ಪಾನೀಯ ಕಾರ್ಖಾನೆಗಳಿಗೂ ಸರಬರಾಜಾಗುತ್ತದೆ.ಮಾವು ಇಳುವರಿ ಕುಸಿತ:
ಕೀಟಬಾಧೆ, ಮಳೆ ಕೊರತೆ, ಜೋನಿ, ಬೂದು ರೋಗ, ವಾತಾವರಣ ಬದಲಾವಣೆ ಭೂಮಿಯಲ್ಲಿ ತೇವಾಂಶ ಕೊರತೆಯಿಂದ, ಬಿಸಿಲಿನ ತಾಪಕ್ಕೆ ಹೂ ಉದುರಿ ಕಾಯಿ ಕಚ್ಚಿಲ್ಲ. ಜೊತೆಗೆ ಜೋನಿರೋಗಕ್ಕೆ ಔಷಧ ಸಿಂಪಡಣೆ ಮಾಡಿದರೂ ಕೀಟ ಬಾಧೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾವು ಫಸಲು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಈ ಬಾರಿ ಹೆಚ್ಚಿನ ಫಸಲು ಮಾರುಕಟ್ಟೆ ಪ್ರವೇಶಿಸುತ್ತದೆಯೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.----
ದರ ಹೆಚ್ಚಾಗುವ ನಿರೀಕ್ಷೆಮಾರುಕಟ್ಟೆಯಲ್ಲಿ ಬಾದಾಮಿ ₹150 ರಿಂದ 300, ರಸಪೂರಿ ₹80 ರಿಂದ 140, ಸೆಂಧೂರ ₹40 ರಿಂದ 100 ಮತ್ತು ತೋತಾಪುರಿ ₹40 ರಿಂದ 60 ಆಸುಪಾಸಿನಲ್ಲಿ ಮಾರಾಟವಾಗುತ್ತಿವೆ. ಮಾರುಕಟ್ಟೆಗೆ ಹೆಚ್ಚಿನ ದಾಸ್ತಾನು ಬಂದರೆ ಹೊರ ರಾಜ್ಯದ ವ್ಯಾಪಾರಿಗಳು ಬಂದು ಮಾವು ಖರೀದಿಸುವುದರಿಂದ ಒಂದಷ್ಟು ಬೆಲೆಯಲ್ಲಿ ಏರಿಳಿತ ಕಾಣಬಹುದು. ಉತ್ತಮ ಫಸಲು ಬಂದರೆ ಇನ್ನೂ ಹೆಚ್ಚಿನ ದರವೂ ಏರಬಹುದು.
----ಹಣ್ಣುಗಳು ದುಬಾರಿ
ಬೇಸಿಗೆ ಅಕಾಲಿಕ ಮಳೆ, ರೋಗಗಳ ಹೊಡೆತಕ್ಕೆ ಮಾವು ಇನ್ನೂ ಹೆಚ್ಚಾಗಿ ಮಾರುಕಟ್ಟೆಗೆ ಬಂದಿಲ್ಲ. ಈ ವರ್ಷ ಮಾವಿನ ಇಳುವರಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಹಣ್ಣುಗಳು ಸಹಜವಾಗಿ ದುಬಾರಿಯಾಗಿವೆ.-ಸೈಯದ್ ಮತೀನ್ , ಮ್ಯಾಂಗೊ ಟ್ರೇಡರ್.