ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿ.ವಿ.ಯಿಂದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಿಕೊಡುವ ಮಾದರಿ ಯೋಜನೆ ಕೈಗೆತ್ತಿಕೊಂಡಿದೆ.
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿ.ವಿ.ಯಿಂದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಿಕೊಡುವ ಮಾದರಿ ಯೋಜನೆ ಕೈಗೆತ್ತಿಕೊಂಡಿದೆ. ಮಾಹೆಯ ಕುಲಾಧಿಪತಿ ಡಾ. ರಾಮದಾಸ ಎಂ. ಪೈ ಅವರ 91ನೇ ಜನ್ಮದಿನವಾದ ಗುರುವಾರ ಈ ಯೋಜನೆಗೆ ಚಾಲನೆ ಸಿಕ್ಕಿದ್ದು, 2 ಕುಟುಂಬಗಳಿಗೆ ಮನೆ ನಿರ್ಮಾಣದ ದೃಢೀಕರಣ ಪತ್ರವನ್ನು ಮಾಹೆ ಟ್ರಸ್ಟ್ ಅಧ್ಯಕ್ಷ ಡಾ. ರಂಜನ್ ಪೈ ಹಸ್ತಾಂತರಿಸಿದರು. 1ನೇ ತರಗತಿಯಿಂದ 10ನೇ ತರಗತಿವರೆಗೆ ಕಲಿಯುತ್ತಿರುವ ಅರ್ಹ ವಿದ್ಯಾರ್ಥಿಗಳ ಕುಟುಂಬಗಳನ್ನು, ಅವರ ಅಂಕಗಳನ್ನು ಪರಿಗಣಿಸದೇ, ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ವರ್ಷಕ್ಕೆ 10 ಮನೆಗಳಂತೆ 5 ವರ್ಷಗಳಲ್ಲಿ ಒಟ್ಟು 50 ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಫಲಾನುಭವಿಗಳ ಆಯ್ಕೆಯನ್ನು ಮಾಹೆ ರಚಿಸಿರುವ ಸಮಿತಿ ನಡೆಸುತ್ತದೆ. ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ವಾತಾವರಣ ಒದಗಿಸಿ, ಅವರನ್ನು ಭಾರತದ ಭವ್ಯ ಪ್ರಜೆಗಳಾಗಿ ರೂಪಿಸುವುದು ಯೋಜನೆಯ ಮುಖ್ಯ ಉದ್ದೇಶ ಎಂದು ಮಾಹೆ ತಿಳಿಸಿದೆ.
ಶಿಕ್ಷಣದಿಂದ ಬದುಕಿನ ಪರಿವರ್ತನೆ: ಈ ಯೋಜನೆಯ ಬಗ್ಗೆ ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಮಾಹೆ, ಸಾಮಾಜಿಕ ಸೇವಾ ವಿಭಾಗದಲ್ಲಿಯೂ ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿದೆ ಎಂಬುದಕ್ಕೆ ಮನೆ ನಿರ್ಮಾಣದ ಈ ಉಪಕ್ರಮವೇ ಸಾಕ್ಷಿಯಾಗಿದೆ ಎಂದಿದ್ದಾರೆ. ಯೋಜನೆಯ ಅನುಷ್ಠಾನದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗವು ಮಾಹೆಯೊಂದಿಗೆ ಕೈಜೋಡಿಸಲಿದ್ದು, ಮನೆಗಳ ನಿರ್ಮಾಣ ಕಾರ್ಯವನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್ ಅವರು ನಿರ್ವಹಿಸಲಿದ್ದಾರೆ.