ಮಣಿಪಾಲ: ಅಖಿಲ ಭಾರತ ಅಂತರ ವಿವಿ ಮಹಿಳಾ ಕ್ರಿಕೆಟ್‌ಗೆ ಚಾಲನೆ

| Published : Feb 27 2024, 01:33 AM IST

ಸಾರಾಂಶ

ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಅವರು ಬ್ಯಾಂಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ.ಶರತ್ ಕೆ. ರಾವ್ ಮುಖ್ಯ ಅತಿಥಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಮಣಿಪಾಲಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಆಶ್ರಯದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ ಆಯೋಜನೆಯಲ್ಲಿ 2023-24ನೇ ಸಾಲಿನ ಅಖಿಲ ಭಾರತ ಅಂತರ ವಲಯ ಅಂತರ್‌ ವಿಶ್ವವಿದ್ಯಾಲಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯು ಇಲ್ಲಿನ ಎಂಡ್‌ಪಾಯಿಂಟ್ ಮೈದಾನದಲ್ಲಿ ಸೋಮವಾರ ಸಂಜೆ ಆರಂಭವಾಯಿತು.ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಅವರು ಬ್ಯಾಂಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ.ಶರತ್ ಕೆ. ರಾವ್ ಮುಖ್ಯ ಅತಿಥಿಯಾಗಿದ್ದರು.ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಕ್ರೀಡೆಯಲ್ಲಿ ಮಹಿಳೆಯರ ಸಬಲೀಕರಣ, ಗುರುತಿಸುವಿಕೆ, ಲಿಂಗ ಸಮಾನತೆ ಮತ್ತು ಕ್ರೀಡೆಯಲ್ಲಿ ಶ್ರೇಷ್ಠತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಾಹೆ ಇಂತಹ ಪಂದ್ಯಾವಳಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದೆ ಎಂದವರು ಹೇಳಿದರು.ಇದೇ ಸಂದರ್ಭ ಬಿಸಿಸಿಐ ಚಾಲೆಂಜರ್ಸ್ ಟ್ರೋಫಿ 2023ರಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸಿರುವ ಉಡುಪಿಯ ನಿಶ್ಚಿತ್ ಪೈ ಮತ್ತು 2023ರಲ್ಲಿ ಕರ್ನಾಟಕ ಅಂಡರ್ 19 ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಆರಂಭಿಕ ಬ್ಯಾಟರ್ ಮತ್ತು ಮಧ್ಯಮ ವೇಗಿ ಬೌಲರ್ ತೇಜಸ್ವಿನಿ ಉದಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಮಾಹೆ ವಿವಿಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಸ್ವಾಗತಿಸಿದರು. ಮುಖ್ಯ ಸಂಯೋಜಕ ಉಪೇಂದ್ರ ನಾಯಕ್ ತಂಡಗಳನ್ನು ಪರಿಚಯಿಸಿದರು. ಡಾ. ದೀಪಕ್ ರಾಮ್ ಬಾಯ್ರಿ ವಂದಿಸಿದರು.ಈ ಪಂದ್ಯಾವಳಿಯಲ್ಲಿ ರಾಜ್ಯದ ಮೈಸೂರು ವಿವಿಯೂ ಸೇರಿದಂತೆ 4 ವಲಯಗಳಿಂದ ತಲಾ 4ರಂತೆ ಒಟ್ಟು 16 ತಂಡಗಳು ಭಾಗವಹಿಸಿವೆ.