ಮಣಿಪಾಲ: ಬೇಡಿಕೆ ಈಡೇರಿಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ

| Published : Aug 14 2025, 01:02 AM IST

ಸಾರಾಂಶ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ‌ ಮುಂಭಾಗ ಮಂಗಳವಾರ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಉಡುಪಿಪ್ರತಿ ತಿಂಗಳು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ 10 ಸಾವಿರ ರು. ಗೌರವಧನ ನೀಡಬೇಕು‌ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ‌ ಮುಂಭಾಗ ಮಂಗಳವಾರ ಧರಣಿ ನಡೆಸಿದರು.ಈ ಧರಣಿ ಉದ್ದೇಶಿಸಿ ಮಾತನಾಡಿದ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ. ಭಟ್ ಅವರು, ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ‌ ಆಶಾ ಕಾರ್ಯಕರ್ತೆಯರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಕನಿಷ್ಠ 10 ಸಾವಿರ ರು. ಗೌರವಧನ ನೀಡುತ್ತೇವೆ ಎಂದು‌ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿತ್ತು. ಆದರೆ ಈವರೆಗೂ 10 ಸಾವಿರ ರು. ಗೌರವಧನ ಘೋಷಣೆಯಾಗಿಲ್ಲ. ಬಜೆಟ್ ನಲ್ಲಿಯೂ ನಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.ಇದೊಂದು ವಚನ ಭ್ರಷ್ಟ ಸರ್ಕಾರ ಆಗಿದೆ. ಈ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಆಗಬೇಕು. ಘೋಷಣೆ ಮಾಡಿದ 10 ಸಾವಿರ ರು. ಗೌರವಧನ ಕೂಡಲೇ ಜಾರಿಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ಸುಹಾಸಿನಿ ಮಾತನಾಡಿ, ಏಪ್ರಿಲ್ ತಿಂಗಳಿಗೆ ಅನ್ವಯವಾಗುವಂತೆ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 10 ಸಾವಿರ ರು. ಗೌರವಧನ ನೀಡಬೇಕು. ರಾಜ್ಯ ಬಜೆಟ್ ನಲ್ಲಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ 1 ಸಾವಿರ ರು. ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆ ಆಶಾ ಕಾರ್ಯಕರ್ತೆಯರಿಗೂ ಸಹ ಹೆಚ್ಚಳ ಮಾಡಬೇಕು. ಜನಸಂಖ್ಯಾ ಮಿತಿ ಹೆಚ್ಚಿಸುವುದನ್ನು ಕೈಬಿಟ್ಟು, ಇದರ ಆಧಾರದಲ್ಲಿ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ನಿವೃತ್ತ ಆಶಾಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು ಎಂದು ಒತ್ತಾಯಿಸಿದರು. ಕಾರ್ಯದರ್ಶಿ ಉಮಾ ಕೆ.ಎಸ್., ಉಡುಪಿ ತಾಲೂಕು ಅಧ್ಯಕ್ಷೆ ಶಾಂಭವಿ ಕುಲಾಲ್, ಕಾರ್ಕಳ ತಾಲೂಕು ಅಧ್ಯಕ್ಷೆ ಯಶೋದಾ, ಕುಂದಾಪುರ ತಾಲೂಕು ಅಧ್ಯಕ್ಷೆ ಭಾರತಿ ವಂಡ್ಸೆ ಹಾಗೂ ನೂರಾರು ಆಶಾಕಾರ್ಯಕರ್ತೆಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.