ಸಾರಾಂಶ
ಮಣಿಪಾಲದ ಮಾಹೆ ವಿವಿಯನ್ನು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್‌ಟಿಇಎಂ) ಕ್ಷೇತ್ರದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತಿಷ್ಠಿತ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) - 2024 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲದ ಮಾಹೆ ವಿವಿಯನ್ನು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್‌ಟಿಇಎಂ) ಕ್ಷೇತ್ರದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತಿಷ್ಠಿತ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) - 2024 ಪ್ರಶಸ್ತಿ ನೀಡಿ ಗೌರವಿಸಲಾಯಿತು.ದೆಹಲಿಯಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಸಾರಸ್ವತ್ ಅವರಿಂದ ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನ ಡೀನ್ ಡಾ. ಆಶಿತಾ ಉಪ್ಪೂರ್ ಮತ್ತು ಗುಣಮಟ್ಟ ನಿರ್ದೇಶಕ ಡಾ. ಕ್ರಿಸ್ಟೋಫರ್ ಸುಧಾಕರ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಕಾರ್ಯನಿರ್ವಾಹಕ ನಿರ್ದೇಶಕ ಬೃಜೇಶ್ ಪಾಂಡೆ, ಐಐಟಿ ರೂರ್ಕಿಯ ಸಲಹೆಗಾರ ಡಾ. ಅಖಿಲೇಶ್ ಗುಪ್ತಾ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಅಜಯ್ ಸೂದ್, ರಿನ್ಯೂವ್‌ನ ಸಹಸ್ಥಾಪಕಿ ವೈಶಾಲಿ ನಿಗಮ್ ಸಿನ್ಹಾ, ಸಿಐಐನ ಉಪ ಮಹಾನಿರ್ದೇಶಕಿ ಅಮಿತಾ ಸರ್ಕಾರ್ ಉಪಸ್ಥಿತರಿದ್ದರು. ಈ ಗೌರವಾನ್ವಿತ ಸಿಐಐ ಪಟ್ಟಿಯಲ್ಲಿ ಮಾಹೆಯ ಸೇರ್ಪಡೆಯು ಲಿಂಗಸಮಾನತೆಯನ್ನು ಉತ್ತೇಜಿಸಲು ಮತ್ತು ಎಸ್‌ಟಿಇಎಂ ಕ್ಷೇತ್ರಗಳಲ್ಲಿ ವೃತ್ತಿ ಮತ್ತು ಶಿಕ್ಷಣವನ್ನು ಮುಂದುವರಿಸುವಲ್ಲಿ ಮಹಿಳೆಯರಿಗೆ ಬೆಂಬಲ ನೀಡುವ ವಿವಿಯ ಪ್ರಯತ್ನಕ್ಕೆ ನೀಡಿದ ಮಾನ್ಯತೆಯಾಗಿದೆ ಎಂದು ವಿವಿ ಹೇಳಿದೆ.