ಜಮ್ಮು-ಕಾಶ್ಮೀರದ ಡೋಡಾ ಜಿಲ್ಲೆಯ ಬ್ರೆಸ್ವಾನಾ ಗ್ರಾಮದ ಹಾಜಿ ಪಬ್ಲಿಕ್ ಸ್ಕೂಲ್‌ನ್ನು ಸೌರಶಕ್ತಿ ಆಧರಿತ ಪುನರಭಿವೃದ್ಧಿ ಯೋಜನೆ ‘ಪ್ರಾಜೆಕ್ಟ್ ಆಬ್ರೂ’ವನ್ನು ರೂಪಿಸಿದ ಮಾಹೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ‘ಸೋಲಾರ್ ಡೆಕಾಥ್ಲಾನ್ ಇಂಡಿಯಾ (ಎಸ್‌ಡಿಐ)ದ ಗ್ರ್ಯಾಂಡ್ ಜ್ಯೂರಿ ಅವಾರ್ಡ್’ನ್ನು ಗೆದ್ದುಕೊಂಡಿದ್ದಾರೆ.
ಮಣಿಪಾಲ: ಜಮ್ಮು-ಕಾಶ್ಮೀರದ ಡೋಡಾ ಜಿಲ್ಲೆಯ ಬ್ರೆಸ್ವಾನಾ ಗ್ರಾಮದ ಹಾಜಿ ಪಬ್ಲಿಕ್ ಸ್ಕೂಲ್‌ನ್ನು ಸೌರಶಕ್ತಿ ಆಧರಿತ ಪುನರಭಿವೃದ್ಧಿ ಯೋಜನೆ ‘ಪ್ರಾಜೆಕ್ಟ್ ಆಬ್ರೂ’ವನ್ನು ರೂಪಿಸಿದ ಮಾಹೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ‘ಸೋಲಾರ್ ಡೆಕಾಥ್ಲಾನ್ ಇಂಡಿಯಾ (ಎಸ್‌ಡಿಐ)ದ ಗ್ರ್ಯಾಂಡ್ ಜ್ಯೂರಿ ಅವಾರ್ಡ್’ನ್ನು ಗೆದ್ದುಕೊಂಡಿದ್ದಾರೆ.ದೇಶದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ 233 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಿಮ ಹಂತಕ್ಕೆ ಆಯ್ಕೆಯಾದ 36 ತಂಡಗಳ ಪೈಕಿ ಮಾಹೆ ವಿದ್ಯಾರ್ಥಿಗಳು, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಇಂಡೋ-ಯುಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ ನೀಡುವ ಈ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
‘ಟೀಮ್ ಆಗ್ನಿ’ ಹೆಸರಿನಲ್ಲಿ ಸ್ಪರ್ಧಿಸಿದ್ದ ಮಾಹೆಯ ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಪ್ಲಾನಿಂಗ್ (ಎಂಸ್ಯಾಪ್) ಹಾಗೂ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿದ್ಯಾರ್ಥಿಗಳು ಸಮುದ್ರ ಮಟ್ಟದಿಂದ 7500 ಅಡಿ ಎತ್ತರದ ಮಧ್ಯ ಹಿಮಾಲಯದ ದುರ್ಗಮ ಪ್ರದೇಶದಲ್ಲಿರುವ ಈ ಶಾಲೆಗೆ ಹವಾಮಾನ-ಸ್ಪಂದನಶೀಲ (ಕ್ಲೈಮೇಟ್ ರೆಸ್ಪಾನ್ಸಿವ್) ಯೋಜನೆಯನ್ನು ರೂಪಿಸಿದ್ದರು. ಈ ಯೋಜನೆಯು ಸೋಲಾರ್ ಡೆಕಾಥ್ಲಾನ್ ಇಂಡಿಯಾ ಸ್ಪರ್ಧೆಯ ಮೊದಲ ಸುತ್ತಿನ ಶೈಕ್ಷಣಿಕ ನಿರ್ಮಾಣ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು, ಬಳಿಕ ಗ್ರ್ಯಾಂಡ್ ಜ್ಯೂರಿ ಸುತ್ತಿಗೆ ಪ್ರವೇಶಿಸಿ ಒಟ್ಟಾರೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.ಕಾಶ್ಮೀರದ ಜನರು ಚಳಿಯಿಂದ ತಪ್ಪಿಸಿಕೊಳ್ಳಲು ಬಳಸುವ ಕಲ್ಲಿದ್ದಲು ಆಧರಿತ ಸಾಂಪ್ರದಾಯಿಕ ಕಾಶ್ಮೀರಿ ಕಾಂಗರ್ ಪರಿಕಲ್ಪನೆಯಿಂದ ಪ್ರೇರಣೆ ಹೊಂದಿರುವ ಈ ಪ್ರಾಜೆಕ್ಟ್ ಆಬ್ರೂ, ತನ್ನ ಸರಳ ಸೌರ ವಿನ್ಯಾಸ, ನವೀಕರಿಸಬಹುದಾದ ಇಂಧನ ವ್ಯವಸ್ಥೆ, ಸ್ಥಳೀಯವಾಗಿ ದೊರೆಯುವ ನಿರ್ಮಾಣ ಸಾಮಗ್ರಿ, ಜಲ ಸಂರಕ್ಷಣೆ, ಕೃಷಿ ಶಿಕ್ಷಣ ಹಾಗೂ ಸಮುದಾಯ ಕೇಂದ್ರಿತವಾಗಿ, ಆ ಪ್ರದೇಶದ ಅನಿಶ್ಚಿತ ಹವಾಮಾನ ಹಾಗೂ ಮೂಲ ಸೌಕರ್ಯಗಳ ಕೊರತೆಯ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರವಾಗಿ ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ.ಸುಮಾರು ಒಂದು ವರ್ಷದಲ್ಲಿ 13 ವಿದ್ಯಾರ್ಥಿಗಳ ತಂಡವು ಎಂಸ್ಯಾಪ್ ಪ್ರಾಧ್ಯಾಪಕಿ ಡಾ. ದೀಪಿಕಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ಅಭಿವೃದ್ಧಿಪಡಿಸಿದೆ. ಹಾಜಿ ಪಬ್ಲಿಕ್ ಸ್ಕೂಲ್‌ನ ನಿರ್ದೇಶಕಿ ಸಬ್ಬಾ ಹಾಜಿ ಈ ಯೋಜನೆಯ ಶೈಕ್ಷಣಿಕ ಸಹಭಾಗಿ ಮತ್ತು ರುತುಜಾ ಉಲ್ಹೆ ಔದ್ಯಮಿಕ ಸಹಭಾಗಿಯಾಗಿ ಸಹಕರಿಸಿದ್ದಾರೆ.ಪ್ರಶಸ್ತಿ ಗೆದ್ದ ತಂಡವನ್ನು ಅಭಿನಂದಿಸಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ಟೀಮ್ ಅಗ್ನಿಯ, ಸಮಷ್ಟಿ ಚಿಂತನೆಯ ಮೂಲಕ ಸಮಾಜಪರ ಯೋಜನೆಗಳನ್ನು ರೂಪಿಸಬಹುದು ಎಂಬುದಕ್ಕೆ ಮಾದರಿಯಾಗಿದೆ. ಸೋಲಾರ್ ಡೆಕಾಥ್ಲಾನ್ ಇಂಡಿಯಾದಲ್ಲಿ ಪ್ರಶಸ್ತಿ ಪುರಸ್ಕೃತವಾದ ಈ ತಂಡದ ಸಾಧನೆ ಬಗ್ಗೆ ಮಾಹೆಗೆ ಅಭಿಮಾನವಿದೆ ಎಂದು ಹೇಳಿದ್ದಾರೆ.