ಸಾರಾಂಶ
ರೋಗ ನಿರೋಧಕತೆ ಮತ್ತು ಸಮುದಾಯದ ಆರೋಗ್ಯದ ದೃಷ್ಟಿಯಿಂದ ರೋಟರಿ ಮಣಿಪಾಲ ಹಿಲ್ಸ್‌ನ ನೇತೃತ್ವದಲ್ಲಿ ಮನ್ನಾಪಳ್ಳದ 20 ಎಕರೆ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ರೋಗ ನಿರೋಧಕತೆ ಮತ್ತು ಸಮುದಾಯದ ಆರೋಗ್ಯದ ದೃಷ್ಟಿಯಿಂದ ರೋಟರಿ ಮಣಿಪಾಲ ಹಿಲ್ಸ್‌ನ ನೇತೃತ್ವದಲ್ಲಿ ಮನ್ನಾಪಳ್ಳದ 20 ಎಕರೆ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮಕ್ಕೆ ರೊಟೇರಿಯನ್ಸ್ ಎಗೇನ್ಸ್ಟ್ ಮಲೇರಿಯಾ ಗ್ಲೋಬಲ್ ಸಂಸ್ಥೆ ಬೆಂಬಲ ನೀಡಿದೆ. ಮಣಿಪಾಲವನ್ನು ಮಲೇರಿಯಾ ಮತ್ತು ಡೆಂಘೀ ಮುಕ್ತವಾಗಿಸುವ ಗುರಿಯನ್ನು ಈ ಅಭಿಯಾನ ಹೊಂದಿದ್ದು, ಹುಡ್ಕೋ ಕಾಲೋನಿ ನಿವಾಸಿಗಳು, ಎಂಐಟಿ ಎನ್ಎಸ್ಎಸ್ ಘಟಕಗಳು ಮತ್ತು ಉಡುಪಿ ನಗರ ಸಭೆಯ ಸದಸ್ಯರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮತ್ತು ಕೌನ್ಸಿಲರ್ ಕಲ್ಪನಾ ಸುಧಾಮಾ ಉಪಸ್ಥಿತರಿದ್ದು, ಈ ಉಪಕ್ರಮವನ್ನು ಶ್ಲಾಘಿಸಿದರು.ವೃದ್ಧರು ಮತ್ತು ಮಕ್ಕಳು ಹೆಚ್ಚಾಗಿ ಈ ಪ್ರದೇಶವನ್ನು ಬಳಸುವುದರಿಂದ, ಈ ಬೃಹತ್ ಅಭಿಯಾನವನ್ನು ಪ್ರತಿ ತಿಂಗಳ ಎರಡನೇ ಭಾನುವಾರದಂದು ಮಾನ್ಸೂನ್ ಮಳೆಯಾಗುವ ವರೆಗೆ ನಡೆಸುವುದು, ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ನಿರ್ಧರಿಸಲಾಯಿತು.ಇಲ್ಲಿನ 9 ವಾರ್ಡ್‌ಗಳು ಮತ್ತು 7 ಉಪ ಕೇಂದ್ರಗಳಿಗೆ ಸೊಳ್ಳೆ ಪರದೆಗಳನ್ನ ಒದಗಿಸಲು, ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸಲು ಹಾಗೂ ಶಾಲಾ ಮಕ್ಕಳು ಮತ್ತು ಸಮುದಾಯದ ಸುರಕ್ಷತೆಗಾಗಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವ ಬಗ್ಗೆ ಶಿಕ್ಷಣ ನೀಡಲು ನಿರ್ಧರಿಸಲಾಯಿತು.