ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಸಿಡ್ನಿ ವಿಶ್ವವಿದ್ಯಾಲಯ (ಯುಎಸ್‌ವೈಡಿ)ಗಳು ಸಂಶೋಧನೆ ಹಾಗೂ ಶೈಕ್ಷಣಿಕ ವಿನಿಮಯಕ್ಕಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.
ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಸಿಡ್ನಿ ವಿಶ್ವವಿದ್ಯಾಲಯ (ಯುಎಸ್‌ವೈಡಿ)ಗಳು ಸಂಶೋಧನೆ ಹಾಗೂ ಶೈಕ್ಷಣಿಕ ವಿನಿಮಯಕ್ಕಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.ಮುಂಬೈಯ ಆಸ್ಟ್ರೇಲಿಯಾ ಕಾನ್ಸುಲೇಟ್-ಜನರಲ್ ಅವರ ನಿವಾಸದಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಮಾಹೆಯ ಉಪಕುಲಪತಿ ಡಾ. ಶರತ್ ಕೆ. ರಾವ್ ಮತ್ತು ಯುಎಸ್‌ವೈಡಿ ಉಪಕುಲಪತಿ ಪ್ರೊ. ಮೈಕ್ ರಯಾನ್ ಅವರು ಒಪ್ಪಂದಕ್ಕೆ ಸಹಿ ಮಾಡಿದರು. ಆಸ್ಟ್ರೇಲಿಯಾ ಹೈಕಮಿಷನರ್ ಫಿಲಿಪ್ ಒ.ಎ.ಎಂ. ಹಾಗೂ ಮುಂಬೈಯ ಆಸ್ಟ್ರೇಲಿಯನ್ ಕಾನ್ಸಲ್ ಜನರಲ್ ಪಾಲ್ ಮರ್ಫಿ ಉಪಸ್ಥಿತರಿದ್ದರು.ಈ ಒಪ್ಪಂದವು ಮಾಹೆ ಮತ್ತು ಸಿಡ್ನಿ ವಿಶ್ವವಿದ್ಯಾಲಯಗಳ ನಡುವೆ ಉನ್ನತ ಸಂಶೋಧನ ಕಾರ್ಯಕ್ರಮ, ಜಂಟಿ ಸಂಶೋಧನ ಅನುದಾನ ಮತ್ತು ಸಂಶೋಧನ ಶಿಕ್ಷಣ, ವಿದ್ಯಾರ್ಥಿಗಳು ಮತ್ತು ಬೋಧಕವರ್ಗದ ಅಂತಾರಾಷ್ಟ್ರೀಯ ವಿನಿಮಯ, ನಾವೀನ್ಯತೆ ಮತ್ತು ಜ್ಞಾನದ ಪ್ರಾಯೋಗಿಕ ಅನ್ವಯ ಹಾಗೂ ಜಂಟಿ ನಿರ್ವಹಣೆ ಮತ್ತು ವ್ಯವಸ್ಥಿತ ಫಲಿತಾಂಶ ಎಂಬ 5 ಪ್ರಮುಖ ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ಸಾಧ್ಯವಾಗಿಸುತ್ತದೆಹೈಕಮಿಷನರ್ ಫಿಲಿಪ್ ಗ್ರೀನ್ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಒಪ್ಪಂದವು, ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಪರಸ್ಪರ ಸಂಪರ್ಕ ವೃದ್ಧಿಸಲು ಪೂರಕವಾಗಿದೆ. ವಿಶೇಷವಾಗಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಎರಡೂ ದೇಶಗಳ ವಿದ್ಯಾರ್ಥಿಗಳು, ಬೋಧಕವರ್ಗ ಹಾಗೂ ಸಂಶೋಧಕರಿಗೆ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸುವಲ್ಲಿ ಇದು ಪೂರಕವಾಗಿಲಿದೆ ಎಂದು ಹೇಳಿದರು. ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ಈ ಒಪ್ಪಂದವು ಸಂಶೋಧನ ಮತ್ತ ಶೈಕ್ಷಣಿಕ ಕ್ಷೇತ್ರದ ಮಹತ್ವದ ಹೆಜ್ಜೆಯಾಗಿದೆ. ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳು, ಸಂಶೋಧಕರು, ಬೋಧಕವರ್ಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಜಾಗತಿಕ ಮಟ್ಟದ ಈ ಮಹತ್ತ್ವದ ಒಪ್ಪಂದವನ್ನು ಸಾಧ್ಯವಾಗಿಸಿದ ಬಗ್ಗೆ ಮಾಹೆ ಅಭಿಮಾನ ಪಡುತ್ತಿದೆ ಎಂದರು.