ಮಣಿಪಾಲ: ಜ.4ರಿಂದ ಜಾಗತಿಕ ಆರೋಗ್ಯ ಕಾಳಜಿ ಶೃಂಗಸಭೆ

| Published : Dec 29 2023, 01:31 AM IST

ಮಣಿಪಾಲ: ಜ.4ರಿಂದ ಜಾಗತಿಕ ಆರೋಗ್ಯ ಕಾಳಜಿ ಶೃಂಗಸಭೆ
Share this Article
  • FB
  • TW
  • Linkdin
  • Email

ಸಾರಾಂಶ

21ನೇ ಶತಮಾನದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದ ಮೇಲೆ ಬೀರುವ ಪ್ರಭಾವ ಮತ್ತು ಅದರ ಸಮರ್ಥ ಬಳಕೆಯ ಕುರಿತು ಸಮಗ್ರ ಮಾಹಿತಿ ಹಂಚಿಕೊಳ್ಳುವುದು ಈ ಜಾಗತಿಕ ಆರೋಗ್ಯ ಶೃಂಗಸಭೆಯ ಉದ್ದೇಶವಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಭಾರತೀಯ ಸಂಜಾತ ಅಮೆರಿಕನ್ ವೈದ್ಯರ ಒಕ್ಕೂಟ (ಎಎಪಿಐ) ಮೊದಲ ಬಾರಿಗೆ ಭಾರತದಲ್ಲಿ ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್ ಅನ್ನು ನವದೆಹಲಿ ಹಾಗೂ ಮಣಿಪಾಲ ನಗರಗಳಲ್ಲಿ ಆಯೋಜಿಸುತ್ತಿದೆ. ನವದೆಹಲಿಯ ಏಮ್ಸ್ ನಲ್ಲಿ ಜ.1ರಿಂದ 3ರವರೆಗೆ ಮತ್ತು ಮಣಿಪಾಲದ ಮಾಹೆ ವಿ.ವಿ.ಯಲ್ಲಿ ಜ.4ರಿಂದ 6ರವರೆಗೆ ಈ ಶೃಂಗಸಭೆಗಳು ನಡೆಯಲಿವೆ.

ವೈದ್ಯಕೀಯ ವಿಚಾರ ಸಂಕಿರಣ ಹಾಗೂ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಒಂದೇ ವೇದಿಕೆಯಲ್ಲಿ ಕೈಗೊಳ್ಳಲಾಗುತ್ತಿರುವುದು ಈ ಶೃಂಗಸಭೆಯ ವೈಶಿಷ್ಟ್ಯತೆಯಾಗಿದೆ.

21ನೇ ಶತಮಾನದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದ ಮೇಲೆ ಬೀರುವ ಪ್ರಭಾವ ಮತ್ತು ಅದರ ಸಮರ್ಥ ಬಳಕೆಯ ಕುರಿತು ಸಮಗ್ರ ಮಾಹಿತಿ ಹಂಚಿಕೊಳ್ಳುವುದು ಈ ಜಾಗತಿಕ ಆರೋಗ್ಯ ಶೃಂಗಸಭೆಯ ಉದ್ದೇಶವಾಗಿದೆ.

ಮಣಿಪಾಲದ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಣಿಪಾಲ ವೈದ್ಯಕೀಯ ಶಿಕ್ಷಣದ ಅಧ್ಯಕ್ಷ, ಪದ್ಮಭೂಷಣ ಡಾ. ರಾಮದಾಸ್ ಪೈ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಶೃಂಗಸಭೆಯಲ್ಲಿ ಶೈಕ್ಷಣಿಕ ವಿಷಯಗಳ ಚರ್ಚೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಎಎಪಿಐ ಉಪಾಧ್ಯಕ್ಷ ಡಾ. ಅಮಿತ್ ಚಕ್ರವರ್ತಿ ಅವರ ಲೈವ್ ಸಂಗೀತ ಕಾರ್ಯಕ್ರಮ, ಮಾನಸಿ ಸುಧೀರ್ ಅವರ ‘ಕಾವ್ಯಾಭಿನಯ’ ಪ್ರದರ್ಶನ ಮತ್ತು ಅನಿರುದ್ಧ ಶಾಸ್ತ್ರಿ ಹಾಗೂ ನುಡಿಸಿರಿ ತಂಡದ ಅದ್ಭುತ ಸಂಗೀತ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ಎಂದು ಸಂಘಟಕರ ತಿಳಿಸಿದ್ದಾರೆ